ಹೊನ್ನಾಳಿ: ಮೃತರಾಗಿರುವ ಶಿಕ್ಷಕರಿಗೂ ಚುನಾವಣಾ ಕರ್ತವ್ಯ ನಿಯೋಜನೆ! ವಿಚಿತ್ರ ಆದರೂ ಇದು ಸತ್ಯ. ಜಿಲ್ಲಾ ಚುನಾವಣಾ ಶಾಖೆ ರವಾನಿಸಿರುವ ಕರ್ತವ್ಯ ನಿಯೋಜನೆ ಪತ್ರ ಸಾವಿಗೀಡಾಗಿರುವ ಶಿಕ್ಷಕರೊಬ್ಬರ ಹೆಸರಿಗೆ ತಲುಪಿದೆ.
ತಾಲ್ಲೂಕಿನ ರಾಂಪುರ ಸರ್ಕಾರಿ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕ ಎ.ಎಚ್.ಬಸವವರಾಜ್ ಎಂಬುವವರು ಮೃತಪಟ್ಟು ತಿಂಗಳುಗಳೇ ಕಳೆದಿವೆ. ಆದರೆ, ಅವರಿಗೆ ಚುನಾವಣಾ ಕರ್ತವ್ಯ ನಿಯೋಜನೆ ಪತ್ರ ಕಳುಹಿಸುವ ಮೂಲಕ ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಬದುಕಿಸಿದ್ದಾರೆ!
ಈ ಎಡವಟ್ಟುಗಳು ಇಷ್ಟಕ್ಕೇ ನಿಂತಿಲ್ಲ. ಹೆರಿಗೆ ರಜೆ ಮೇಲೆ ತೆರಳಿರುವವರು, ವಿವಿಧ ಕಾಯಿಲೆಗಳಿಂದ ನರಳುತ್ತಿರುವವರು, ಅಂಗವೈಕಲ್ಯದ ಕಾರಣಕ್ಕಾಗಿ ಚುನಾವಣಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿರುವವರಿಗೂ ಕರ್ತವ್ಯಕ್ಕೆ ಬುಲಾವ್‌್ ಬಂದಿದೆ. ಪ್ರಮಾದಗಳು ಆಗುವುದು ಸಾಮಾನ್ಯ, ಆಗಿರುವ ಪ್ರಮಾದಗಳನ್ನು ಸರಿಪಡಿಸಲು ಕೂಡ ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿರುವುದು ನೊಂದ ನೌಕರರರ ಅಸಮಾಧಾನಕ್ಕೆ ಕಾರಣವಾಗಿದೆ.
ತಮ್ಮ ಬದಲಿಗೆ ಬೇರೊಬ್ಬ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಿ ಎಂದು ಬದಲಿ ನಿಯೋಜನೆಗೆ ಸಿದ್ಧತೆಗಳನ್ನು ಮಾಡಿಕೊಂಡು ಬಂದರೆ, ಅವರನ್ನೂ ಚುನಾವಣಾ ಶಾಖೆ ಸಿಬ್ಬಂದಿ ಗೌರವಿಸುತ್ತಿಲ್ಲ. ಅಧಿಕಾರಿಗಳು–ಸಿಬ್ಬಂದಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಅಲೆದಾಡಿಸುತ್ತಿದ್ದಾರೆ. ನವಜಾತ ಶಿಶುವಿನೊಂದಿಗೆ ಬಂದಿರುವ ತಾಯಂದಿರಿಗೂ ಕರುಣೆ ತೋರುತ್ತಿಲ್ಲ ಅಧಿಕಾರಿಗಳು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶಿಕ್ಷಕ ರಾಜು.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ರಾಜಶೇಖರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಸಾವಿಗೀಡಾಗಿರುವ ಶಿಕ್ಷಕರಿಗೆ ಆದೇಶ ರವಾನೆಯಾಗಿರುವುದನ್ನು ನೋಡಿದರೆ ಅಧಿಕಾರಿಗಳ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ತಿಂಗಳುಗಟ್ಟಲೇ ಕಷ್ಟಪಟ್ಟು ನೂರಾರು ಶಿಕ್ಷಕರು, ಹತ್ತಾರು ಸಿಆರ್‌ಪಿ–ಬಿಆರ್‌ಪಿಗಳು ವಿವಿಧ ನಮೂನೆಗಳಲ್ಲಿ ಮಾಹಿತಿ ಸಂಗ್ರಹಿಸಿ, ಪರಿಷ್ಕೃತ ಎಚ್‌ಆರ್‌ಎಂಎಸ್ ಯಾದಿಯ ಪ್ರಕಾರ ಚುನಾವಣಾ ಶಾಖೆಗೆ ರವಾನಿಸಿದ್ದಾರೆ’ ಎಂದು ಹೇಳುತ್ತಾರೆ.
ಅಲ್ಲದೇ, ಕೇವಲ ಪ್ರಾಥಮಿಕ–ಪ್ರೌಢ ಶಾಲಾ ಶಿಕ್ಷಕರನ್ನು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪದವಿಪೂರ್ವ, ಪದವಿ ಕಾಲೇಜುಗಳ ಉಪನ್ಯಾಸಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿವಿಧ ಕೆಲಸ–ಕಾರ್ಯಗಳು, ಶೈಕ್ಷಣಿಕ ವರ್ಷದ ವಿವಿಧ ಕರ್ತವ್ಯಗಳ ಮಧ್ಯೆ ಶಿಕ್ಷಕರು ಚುನಾವಣಾ ಕೆಲಸವನ್ನೂ ನಿರ್ವಹಿಸಬೇಕಿದೆ ಎನ್ನುತ್ತಾರೆ ಅವರು.
ತಾಲ್ಲೂಕು ಕಚೇರಿ ಚುನಾವಣಾ ಶಿರಸ್ತೇದಾರ್ ಶಿವಶಂಕರ್ ಅವರ ಪ್ರತಿಕ್ರಿಯೆ ಕೇಳಿದಾಗ, ಜಿಲ್ಲಾ ಮಟ್ಟದ ಅಧಿಕಾರಿಗಳು ಏನು ಹೇಳುತ್ತಾರೋ ಅದನ್ನು ಮಾಡುವುದಷ್ಟೇ ತಮ್ಮ ಕೆಲಸ. ಯಾವುದೇ ಕಾರಣಕ್ಕೂ, ಯಾರಿಗೂ ರಿಯಾಯತಿ ತೋರಿಸಬಾರದು ಎಂಬ ಸ್ಪಷ್ಟ ಆದೇಶ ಇದೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಉತ್ತರಿಸಿದರು.
‘ನನಗೇ ರಜೆ ಬೇಕು!’: ವಾಸ್ತವವಾಗಿ ಸದ್ಯದ ಪರಿಸ್ಥಿತಿಯಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಸಾಧ್ಯ ಇಲ್ಲ. ಕಿಬ್ಬೊಟ್ಟೆಯ ಭಾಗದಲ್ಲಿ ಅಲ್ಸರ್ ಆಗಿದೆ. ಬ್ಯಾಂಡೇಜ್ ಮಾಡಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇನೆ.
ಹೊನ್ನಾಳಿ ನೂರು ಹಾಸಿಗೆ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಶ್ರೀಮಂತ ಸಿದ್ದಪ್ಪ ಕೋಳ್ಕರ್ ವಿಶ್ರಾಂತಿ ತೆಗೆದುಕೊಳ್ಳಿ ಎಂದು ನನಗೆ ಸಲಹೆ ನೀಡಿದ್ದಾರೆ. ಆದರೂ ಅನಿವಾರ್ಯವಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಚುನಾವಣಾ ಶಿರಸ್ತೇದಾರ್ ಶಿವಶಂಕರ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.