ADVERTISEMENT

3 ಬಾರಿ ಗೆದ್ದವರು 3ನೇ ಸ್ಥಾನಕ್ಕೆ ದೂಡಲ್ಪಟ್ಟರು!

1996ರಲ್ಲಿ ಕಾಂಗ್ರೆಸ್‌ ಭದ್ರಕೋಟೆ ಛಿದ್ರ, ಬಿಜೆಪಿಯ ಮಲ್ಲಿಕಾರ್ಜುನಪ್ಪಗೆ ಜಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 5:41 IST
Last Updated 20 ಮಾರ್ಚ್ 2014, 5:41 IST

ದಾವಣಗೆರೆ: ಲೋಕಸಭೆಗೆ 1996ರಲ್ಲಿ ನಡೆದ ಚುನಾವಣೆ ಫಲಿತಾಂಶ ಕಾಂಗ್ರೆಸ್‌ ಪಾಲಿಗೆ  ಅನಿರೀಕ್ಷಿತ ಆಘಾತ. ಆರಂಭದಿಂದಲೂ ಕಾಂಗ್ರೆಸ್‌ನ  ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ನೆರೆಯ ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪ ಕಾಂಗ್ರೆಸ್‌ ಭದ್ರಕೋಟೆಯನ್ನು ಛಿದ್ರಮಾಡಿ ಕಮಲಕ್ಕೆ ನೆಲೆ ಕಲ್ಪಿಸಿದ್ದರು.

ಕಾಂಗ್ರೆಸ್‌ ವಿರೋಧಿ ಅಲೆ ಜೋರಾಗಿದ್ದಾಗಲೂ, ಕಾಂಗ್ರೆಸ್‌ ಅಭ್ಯರ್ಥಿಗಳ ಕೈ ಬಿಡದ ಈ ಕ್ಷೇತ್ರದ ಮತದಾರ ಮೊದಲ ಬಾರಿ ಕಮಲಕ್ಕೆ ಕೈ ಎತ್ತಿದ್ದ.

ಬಂಗಾರಪ್ಪ ಆಕ್ರೋಶಕ್ಕೆ ಕಾಂಗ್ರೆಸ್‌ ತತ್ತರ: 1990ರಿಂದ 1992ರವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ ಹೈಕಮಾಂಡ್‌ ನಿರ್ಧಾರದ ವಿರುದ್ಧ ಸೆಟೆದು ನಿಂತರು. ಕಾಂಗ್ರೆಸ್‌ಗೆ ಪರ್ಯಾಯವಾಗಿ ಕರ್ನಾಟಕ ಕಾಂಗ್ರೆಸ್‌ ಪಾರ್ಟಿ ಸ್ಥಾಪಿಸಿ, ಕಾಂಗ್ರೆಸ್‌ ವಿರುದ್ಧ ಸಮರ ಸಾರಿದ್ದರು. ಅದರ ಪರಿಣಾಮ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಫಲಿಸಿತ್ತು. ಎಚ್‌.ಡಿ.ದೇವೇಗೌಡ ನೇತೃತ್ವದ ಜನತಾದಳ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು. ಅದರ ಮುಂದುವರಿದ ಪರಿಣಾಮ 1996ರ ಲೋಕಸಭಾ ಚುನಾವಣೆಯ ಮೇಲೂ ಆಯಿತು.

ಕೆಪಿಸಿ ವತಿಯಿಂದ ಜಗಳೂರಿನ ಮಾಜಿ ಶಾಸಕ ಬಸಪ್ಪ ಅವರನ್ನು ಕಣಕ್ಕಿಳಿಸಲಾಗಿತ್ತು. ಕಾಂಗ್ರೆಸ್‌ ಎಂದಿನಂತೆ ಚನ್ನಯ್ಯ ಒಡೆಯರ್‌ಗೆ

ಟಿಕೆಟ್‌ ನೀಡಿತು. ಬೆಜೆಪಿ ಹೊಸಮುಖ ಮಲ್ಲಿಕಾರ್ಜುನಪ್ಪ ಅವರನ್ನು ಕಣಕ್ಕೆ ಧುಮುಕಿಸಿತು. ಜನತಾ ದಳ ಜೆ.ಎಚ್‌.ಪಟೇಲರ ಸಹೋದರ ಕಾನೂನು ತಜ್ಞ ಎಸ್‌.ಎಚ್‌. ಪಟೇಲರಿಗೆ ‘ಬಿ’ ಫಾರಂ ನೀಡಿತು.

ಒಂದು ಅರ್ಥದಲ್ಲಿ 96 ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಇತ್ತು. ನಾಲ್ವರು ಅಭ್ಯರ್ಥಿಗಳೂ ಬಲಾಢ್ಯರಿದ್ದರು. 1992ರ ನಂತರದ ಬೆಳವಣಿಗೆಯಲ್ಲಿ ಮಲ್ಲಿಕಾರ್ಜುನಪ್ಪ ಅವರಿಗೆ ‘ಹಿಂದೂ ವೋಟ್‌’ ಬ್ಯಾಂಕ್‌ ಸೃಷ್ಟಿಯಾಗಿತ್ತು. ಮೂರು ಬಾರಿಯ ಗೆಲುವಿನ ಸಾಧನೆ ಚನ್ನಯ್ಯ ಒಡೆಯರ್‌ ಬೆನ್ನಿಗಿತ್ತು. ಎಸ್‌.ಎಚ್‌. ಪಟೇಲರ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಬಸಪ್ಪ ಅವರಿಗೆ ಬಂಗಾರಪ್ಪ ನಾಮಬಲವಿತ್ತು. ಹಾಗಾಗಿ, ಇದು ಚತುಷ್ಕೋನ ಸ್ಪರ್ಧೆ. ಆದರೆ, ಜಾತ್ಯತೀತ ಮತಗಳ ವಿಭಜನೆ ಹಾಗೂ ಬಂಗಾರಪ್ಪ ಕಾಂಗ್ರೆಸ್‌ ಮತ ಬ್ಯಾಂಕ್‌ ಕೊಳ್ಳೆಹೊಡೆದಿದ್ದು ಕಾಂಗ್ರೆಸ್‌ಗೆ ಮಾರಕವಾಗಿತ್ತು.

ಒಡೆಯರ್‌ಗೆ 3ನೇ ಸ್ಥಾನ: ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದ ಚನ್ನಯ್ಯ ಒಡೆಯರ್ ಹೀನಾಯವಾಗಿ ಸೋತು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು.

ಅಂದು ಚಲಾವಣೆಯಾದ  7,47,950 ಮತದಲ್ಲಿ ಭೀಮಸಮುದ್ರದ ಮಲ್ಲಿಕಾರ್ಜುನಪ್ಪ 2,68,962 ಮತ ಪಡೆದು ಜನತಾದಳದ ಎಸ್‌.ಎಚ್‌. ಪಟೇಲರ ವಿರುದ್ಧ 97,087 ಅಂತರದ ಗೆಲುವು ದಾಖಲಿಸಿದ್ದರು. ಪಟೇಲರು 1,71,875 ಮತ, ಒಡೆಯರ್‌ 1,61,296 ಮತ, ಬಸಪ್ಪ 1,07369 ಮತ ಗಳಿಸಿದ್ದರು.

ಅಂದು ದಾಖಲೆಯ (20 ಮಂದಿ) ಪಕ್ಷೇತರರು ಸ್ಪರ್ಧಿಸಿದರೂ, ಎಲ್ಲರೂ ಠೇವಣಿ ಕಳೆದುಕೊಂಡಿದ್ದರು.   ಯಾರೊಬ್ಬರೂ ಹೇಳಿಕೊಳ್ಳುವಂತಹ ಮತ ಗಳಿಸಿರಲಿಲ್ಲ. ಅವರಲ್ಲಿ ಬಹುತೇಕ  ಪಕ್ಷೇತರರು ಗಳಿಸಿದ ಮತ ಕಾಂಗ್ರೆಸ್ ಅಭ್ಯರ್ಥಿಗೆ ತೊಡಕಾಗಿದ್ದವು.

‘ಒಡೆಯರ್ ಅವರ ಸೋಲಿಗೆ ಅಂದಿನ ಸನ್ನಿವೇಶ ಕಾರಣವಾದರೂ, ಕಾಂಗ್ರೆಸ್‌ನಲ್ಲೇ ಒಂದು ಪ್ರಭಾವಿ ಗುಂಪು ಒಡೆಯರ್‌ ಅವರನ್ನು ಸೋಲಿಸದಿದ್ದರೆ ಮುಂದೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧ ಕೆಲಸ ಮಾಡಿತು. ಮಾಯಕೊಂಡ, ದಾವಣಗೆರೆ ಹರಿಹರ ಸೇರಿದಂತೆ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಒಡೆಯರ್ ಹೇಳಿದ ಅಭ್ಯರ್ಥಿಗಳಿಗೇ ಟಿಕೆಟ್‌ ನೀಡುತ್ತಿದ್ದ ಕಾರಣ ಟಿಕೆಟ್‌ ವಂಚಿತ ಕೆಲ ಪ್ರಭಾವಿಗಳು ಒಡೆಯರ್‌ ಸೋಲಿಗೆ ಕಾರಣರಾದರು’ ಎಂದು ಒಡೆಯರ್ ಅವರ ಕಿರಿಯ ಒಡನಾಡಿ ಬಿ.ಎಂ.ಸತೀಶ್‌ ಅಂದಿನ ಸೋಲಿನ ಕುರಿತು ವಿಶ್ಲೇಷಿಸುತ್ತಾರೆ.

ಸಂಘಟಿತ ಪ್ರಯತ್ನ ಇರಲಿಲ್ಲ...
ದಳ ಎಂದೂ ಒಂದು ಪಕ್ಷವಾಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲಿಲ್ಲ. ಒಬ್ಬೊಬ್ಬ ಮುಖಂಡರದು ಒಂದು ನಿಲುವು. ಅದರ ಪರಿಣಾಮ ರಾಜ್ಯದಲ್ಲಿ ದಳದ ಸರ್ಕಾರ ಇದ್ದರೂ ಪಕ್ಷಕ್ಕೆ ಹಿನ್ನಡೆಯಾಯಿತು. ಅಲ್ಲದೇ, 1992ರ ನಂತರ ಬಿಜೆಪಿ ಅಲೆ ದೇಶದಲ್ಲಿ ಹೆಚ್ಚಾಯಿತು. 1991ರಲ್ಲಿ ಅಲ್ಪ ಮತದಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದು 96ರಲ್ಲಿ ಅನುಕಂಪ ಸೃಷ್ಟಿಸಿತು. ಕಾಂಗ್ರೆಸ್‌ ವಿರೋಧಿ ಅಲೆಯೂ ಬಿಜೆಪಿಗೆ ವರವಾಗಿತ್ತು. ಹಾಗಾಗಿ ಬಿಜೆಪಿಗೆ ಗೆಲವು ದೊರೆಯಿತು.

–ಎಸ್‌.ಎಚ್‌. ಪಟೇಲ್‌, 96 ಚುನಾವಣೆಯಲ್ಲಿ 2ನೇ ಸ್ಥಾನ ಪಡೆದ ಜನತಾದಳದ ಅಭ್ಯರ್ಥಿ.

1996ರ ಅಂಕಿ–ಅಂಶ


ಒಟ್ಟು ಮತದಾರರು:     11,43,500
ಚಲಾವಣೆಯಾದ ಮತ:   7,47,950
ಜಿ.ಮಲ್ಲಿಕಾರ್ಜುನಪ್ಪ (ಬಿಜೆಪಿ):   2,68,962
ಎಸ್‌.ಎಚ್‌.ಪಟೇಲ್‌(ಜನತಾ ದಳ):  1,71,875
ಚನ್ನಯ್ಯ ಒಡೆಯರ್ (ಕಾಂಗ್ರೆಸ್‌):  1,61,296
ಎಂ.ಬಸಪ್ಪ(ಕೆಸಿಪಿ):      1,073,69

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.