ADVERTISEMENT

ಕಾಂಗ್ರೆಸ್ ತಾರಾ ಪ್ರಚಾರಕನ `ದ್ವಿಪಾತ್ರ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಚನ್ನಮ್ಮನ ಕಿತ್ತೂರು: ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿಯಲ್ಲಿರುವ ಚಿತ್ರ ನಟ ದರ್ಶನ್ ತೂಗುದೀಪ ಅವರು ಕಿತ್ತೂರು ವಿಧಾನಸಭಾ ಕ್ಷೇತ್ರದ ಉತ್ತರ ಭಾಗದ ಕೆಲವು ಹಳ್ಳಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ ಅಪ್ಪುಗೋಳ ಪರವಾಗಿ ಗುರುವಾರ ಪ್ರಚಾರ ನಡೆಸಿರುವುದು ವಿವಾದಕ್ಕೆ ಎಡೆಮಾಡಿದೆ.

ರಾಜ್ಯದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದ ದರ್ಶನ್ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕರೂ ಆದ ಆನಂದ ಅಪ್ಪುಗೋಳ ಪರವಾಗಿ ಕಿತ್ತೂರು ಕ್ಷೇತ್ರದ ನೇಸರಗಿ, ದೇಶನೂರು, ವಣ್ಣೂರು, ತಿಗಡಿ ಭಾಗದ ಕೆಲವು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ದರ್ಶನ್ ಅವರು ಸಂಗೊಳ್ಳಿ ರಾಯಣ್ಣ ಸಿನಿಮಾದ ನಾಯಕ ನಟರಾಗಿದ್ದರಿಂದ ಅಪ್ಪುಗೋಳ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರೂ ಅವರ ಪರವಾಗಿ ಪ್ರಚಾರ ನಡೆಸಿ ಗಮನ ಸೆಳೆದರು.

ಸಿನಿಮಾ ಯಶಸ್ವಿಯಾಗಿದ್ದರಿಂದ ಜನಪ್ರಿಯತೆ ಗಳಿಸಿದ ಅಪ್ಪುಗೋಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅಂತಿಮವಾಗಿ ಮಾಜಿ ಸಚಿವ ಡಿ.ಬಿ. ಇನಾಮದಾರ ಅವರಿಗೆ ಬಿ ಫಾರಂ ಸಿಕ್ಕಿತು. ಪಕ್ಷ ತೊರೆದ ಅಪ್ಪುಗೋಳ ಜೆಡಿಎಸ್‌ನಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‌ನ ಇನಾಮದಾರರ ಪರವಾಗಿ ಪ್ರಚಾರ ನಡೆಸಬೇಕಿದ್ದ ದರ್ಶನ್, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿರುವುದು ಪಕ್ಷದ ನಾಯಕರಿಗೆ ಇರಿಸುಮುರಿಸು ಉಂಟಾಯಿತು.

`ಜನಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಿರುವ ಅಪ್ಪುಗೋಳ ಅವರಿಗೆ ಕಿತ್ತೂರು ನಾಡಿನ ಜನರು ಅವಕಾಶ ಮಾಡಿಕೊಡಬೇಕು' ಎಂದು ದರ್ಶನ್ ಅವರು ಸೇರಿದ್ದ ಅಪಾರ ಅಭಿಮಾನಿಗಳಲ್ಲಿ ಮನವಿ ಮಾಡಿದರು.

ದರ್ಶನ್ ವೀಕ್ಷಿಸಲು ಸುತ್ತಮುತ್ತಲಿನಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ದೇಶಕ ನಾಗಣ್ಣ, ಅಭ್ಯರ್ಥಿ ಆನಂದ ಅಪ್ಪುಗೋಳ ಸೇರಿದಂತೆ ಜೆಡಿಎಸ್‌ನ ಸ್ಥಳೀಯ ಮುಖಂಡರು ಪ್ರಚಾರದ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.