ADVERTISEMENT

ಪ್ರಹ್ಲಾದ ಜೋಶಿಗೆ ಸೋಲಿನ ಭೀತಿ: ವಿನಯ ಕುಲಕರ್ಣಿ ವ್ಯಂಗ್ಯ

’ಟಿಕೆಟ್ ವಿಷಯದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 9:38 IST
Last Updated 2 ಏಪ್ರಿಲ್ 2019, 9:38 IST

ಹುಬ್ಬಳ್ಳಿ: ‘ಸಂಸದ ಪ್ರಹ್ಲಾದ ಜೋಶಿಗೆ ಸೋಲಿನ ಭೀತಿ ಕಾಡುತ್ತಿರುವುದರಿಂದ ಈಗ ಕ್ಷೇತ್ರವನ್ನು ಸುತ್ತುತ್ತಿದ್ದಾರೆ’ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ವ್ಯಂಗ್ಯವಾಡಿದರು.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜೋಶಿ ರಾಜಕೀಯವಾಗಿ ಬೆಳೆಯಲು ಕಾರಣ ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಅನಂತ ಕುಮಾರ್. ಆದರೆ, ಅವರ ಪತ್ನಿಗೆ ಟಿಕೆಟ್ ಕೈತಪ್ಪಿದರೂ ಜೋಶಿ ತುಟಿ ಬಿಚ್ಚುತ್ತಿಲ್ಲ’ ಎಂದು ಟೀಕಿಸಿದರು.

‘ಧಾರವಾಡ ಕ್ಷೇತ್ರದಿಂದ ಟಿಕೆಟ್ ನೀಡಿ ಎಂದು ನಾನು ಯಾರನ್ನೂ ಕೇಳಿಲ್ಲ. ಆದರೆ ನನಗೇ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸ ಇದೆ. ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧ. ಪಕ್ಷವನ್ನು ತೊರೆಯುವುದಿಲ್ಲ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದೆ, ಈಗಲೂ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುವುದು ಅಸಾಧ್ಯದ ಮಾತಲ್ಲ’ ಎಂದು ಅವರು ಹೇಳಿದರು.

ADVERTISEMENT

ಟಿಕೆಟ್ ವಿಳಂಬ ಬೇಸರ: ‘ಚುನಾವಣೆಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು, ಟಿಕೆಟ್ ಘೋಷಣೆ ವಿಳಂಬವಾಗುತ್ತಿರುವುದಕ್ಕೆ ಬೇಸರ– ಮಾನಸಿಕ ಹಿಂಸೆಯಾಗಿದೆ. ಕಾರ್ಯಕರ್ತರೂ ಸಾಕಷ್ಟು ನೊಂದಿದ್ದಾರೆ. ಯಾಕೆ ಇಷ್ಟೊಂದು ವಿಳಂಬವಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ’ ಎಂದು ಅವರು ಹೇಳಿದರು.

ಟಿಕೆಟ್ ಸಿಗುವ ವಿಶ್ವಾಸ ಇದೆ: ‘ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದು, ಈ ಬಾರಿ ನನಗೇ ಟಿಕೆಟ್ ಸಿಗುವ ವಿಶ್ವಾಸ ಇದೆ’ ಎಂದು ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಶಾಕಿರ್ ಸನದಿ ಹೇಳಿದರು.

‘ಸ್ಥಳೀಯರಿಗೆ ನನ್ನ ಪರಿಚಯ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅದು ಆರೋಪ ಮಾಡುವವರ ತಪ್ಪು ಕಲ್ಪನೆ. ಮೊದಲ ಬಾರಿ ಟಿಕೆಟ್ ಕೇಳಿದಾಗ ಇಂತಹ ಆರೋಪಗಳು ಕೇಳಿ ಬರುವುದು ಸಹಜ. ರಾಜ್ಯದ ಎರಡು ಕ್ಷೇತ್ರಗಳು ಅಲ್ಪಸಂಖ್ಯಾತರಿಗೆ ಮೀಸಲಾಗಿವೆ. ಆದ್ದರಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ’ ಎಂದರು.

ಡೆನ್ನಿಸನ್ಸ್‌ ಹೋಟೆಲ್‌ನಲ್ಲಿ ತಂಗಿದ್ದ ಸಿದ್ದರಾಮಯ್ಯ ಅವರನ್ನು ಸಿ.ಎಂ. ಇಬ್ರಾಹಿಂ, ವಿನಯ ಕುಲಕರ್ಣಿ ಹಾಗೂ ಶಾಕಿರ್ ಸನದಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.