ADVERTISEMENT

ಅನ್ನಕ್ಕೆ ಚಿನ್ನದ ಗರಿ, ಕೃಷಿಗೆ ಖುಷಿ!

ಸರ್ಕಾರದ ‘ಭಾಗ್ಯ’ಗಳ ಬಗ್ಗೆ ‘ದಕ್ಷ್‌’, ‘ಪ್ರಜಾವಾಣಿ’ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ‘ಭಾಗ್ಯ’ಗಳನ್ನೇ ಕರುಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರನ್ನು ಮೆಚ್ಚಿಸುವ, ಓಲೈಸುವ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದ್ದಾರೆ.

ಹತ್ತಾರು ಭಾಗ್ಯಗಳನ್ನು ಅನುಷ್ಠಾನ ಮಾಡಿ ಜನಪ್ರಿಯತೆಯ ಉತ್ತುಂಗಕ್ಕೆ ಏರುವ ಯತ್ನವನ್ನೂ ನಡೆಸಿದ್ದಾರೆ. ಈ ಭಾಗ್ಯಗಳ ಬಗ್ಗೆ ಮತದಾರರ ಒಲುವು–ನಿಲುವು ಹೇಗಿದೆ, ಅದು ಜನರಿಗೆ ತಲುಪಿದೆಯೇ ಎಂಬ ಬಗ್ಗೆ ‘ದಕ್ಷ್‌’ ಸಮೀಕ್ಷೆಯಲ್ಲಿ ಜನಮತ ಸಂಗ್ರಹಿಸಲಾಗಿದೆ. ಅದರ ಪೂರ್ಣ ಪಾಠ ಇಲ್ಲಿದೆ:

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ‘ಹಸಿವು ಮುಕ್ತ ಕರ್ನಾಟಕ’ ನಿರ್ಮಾಣ ತಮ್ಮ ಕನಸು ಎಂದು ಪ್ರತಿಪಾದಿಸಿದ ಸಿದ್ದರಾಮಯ್ಯ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬದ ತಲಾ ಸದಸ್ಯರಿಗೆ ಒಂದು ಕೆ.ಜಿ ಅಕ್ಕಿಗೆ ₹1ರ ದರದಲ್ಲಿ ತಿಂಗಳಿಗೆ ಏಳು ಕೆ.ಜಿ. ಅಕ್ಕಿ ನೀಡುವುದಾಗಿ ಪ್ರಕಟಿಸಿದರು. ‘ಅನುಷ್ಠಾನಯೋಗ್ಯವಲ್ಲದ ಯೋಜನೆ’ ಎಂದು ಆರ್ಥಿಕ ವಿಶ್ಲೇಷಕರು ಟೀಕಿಸಿದರು. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಸಿದ್ದರಾಮಯ್ಯ ‘ಅನ್ನಭಾಗ್ಯ’ದ ಹೆಸರಿನಲ್ಲಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ತಂದರು. ₹1ರ ಬದಲು ಉಚಿತವಾಗಿ ಅಕ್ಕಿ ವಿತರಿಸುವ ಯೋಜನೆಯಾಗಿ ಇದನ್ನು ಪರಿವರ್ತಿಸಿದರು. ರಾಜ್ಯದ 1.08 ಕೋಟಿ ಕುಟುಂಬಗಳು ಅಂದರೆ ಸರಿಸುಮಾರು 4 ಕೋಟಿಗೂ ಹೆಚ್ಚಿನ ಜನರು ಈಗ ಉಚಿತ ಅಕ್ಕಿಭಾಗ್ಯ ಪಡೆಯುತ್ತಿದ್ದಾರೆ.

ADVERTISEMENT

ರಾಜ್ಯದ ಶೇ 79ರಷ್ಟು ಜನರು ಇದು ಉತ್ತಮ ಯೋಜನೆ ಎಂದು ಪ್ರತಿಪಾದಿಸಿದ್ದಾರೆ. ಶೇ 15ರಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ 6ರಷ್ಟು ಮಂದಿ ನಾವು ಈ ಯೋಜನೆಯ ಸೌಲಭ್ಯ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ಮಳೆಯಾಶ್ರಿತ ಕೃಷಿಯನ್ನು ನೆಚ್ಚಿಕೊಂಡ ರೈತರ ಜಮೀನಿಗೆ ನೀರು ಒದಗಿಸಲು ರಾಜ್ಯ ಸರ್ಕಾರ ‘ಕೃಷಿ ಭಾಗ್ಯ’ ಯೋಜನೆ ಜಾರಿಗೆ ತಂದಿದೆ. ಇಲ್ಲಿಯವರೆಗೆ 2 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಇದರಿಂದಾಗಿ ಒಣಬೇಸಾಯ ನೆಚ್ಚಿಕೊಂಡ ರೈತರ ಹೊಲದ ಇಳುವರಿ ಶೇ 32ರಷ್ಟು ಹೆಚ್ಚಾಗಿದೆ. ರೈತರಲ್ಲಿ ಸಂತಸ ಮೂಡಿದೆ ಎಂದೂ ಅದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ವಿಚಾರಿಸಿದಾಗ ಶೇ 58ರಷ್ಟು ರೈತರು ಮೆಚ್ಚುಗೆ ಸೂಚಿಸಿದ್ದಾರೆ. ಶೇ 17ರಷ್ಟು ಜನರು ‘ಈ ಯೋಜನೆ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಮುಂದುವರಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಅನುದಾನಿತ ಶಾಲಾ ಮಕ್ಕಳಿಗೂ ವಿಸ್ತರಿಸಲಾಗಿದೆ. ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಗೆ ಶೇ 69 ಅಂಕಗಳನ್ನು ಮತದಾರರು ನೀಡಿದ್ದಾರೆ. ಶೇ 13ರಷ್ಟು ಮಂದಿ ‘ಈ ಯೋಜನೆ ತಲುಪಿಲ್ಲ’ ಎಂದು ವಿವರಿಸಿದ್ದಾರೆ.

ಅನುಷ್ಠಾನದ ವಿವಿಧ ಹಂತದಲ್ಲಿರುವ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಗೆ ಶೇ 64ರಷ್ಟು ಅಂಕ ಸಿಕ್ಕಿದೆ.

ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಕುಟುಂಬಗಳಿಗೆ ಸಿಲಿಂಡರ್‌ ಪೂರೈಸಿ, ಸೀಮೆಎಣ್ಣೆ ಬಳಕೆಯನ್ನು ಕೊನೆಗಾಣಿಸಲು ಕೇಂದ್ರ ಸರ್ಕಾರ ‘ಉಜ್ವಲ’ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ನಿಯಮಗಳ ಕಾರಣಕ್ಕೆ 20 ಲಕ್ಷ ಫಲಾನುಭವಿಗಳಿಗೆ ಮಾತ್ರ ಸಿಲಿಂಡರ್‌ ಸಿಗಲಿದೆ. ‘ಉಜ್ವಲ’ ಯೋಜನೆ ವ್ಯಾಪ್ತಿಗೆ ಒಳಪಡದ 15 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ‘ಅನಿಲ ಭಾಗ್ಯ’ ಯೋಜನೆ ರೂಪಿಸಲಾಗಿದೆ. ಪ್ರತಿ ಕುಟುಂಬಕ್ಕೆ 14.2 ಕೆ.ಜಿಯ ಒಂದು ಸಿಲಿಂಡರ್‌, ಸ್ಟೌ, ರೆಗ್ಯುಲೇಟರ್‌ ಹಾಗೂ ಎರಡು ಬಾರಿ ಸಿಲಿಂಡರ್ ತುಂಬಿಸಿಕೊಡುವ ಯೋಜನೆಯಡಿ ಪ್ರತಿ ಕುಟುಂಬಕ್ಕೆ ₹4,040ರಂತೆ ಸುಮಾರು ₹1,200 ಕೋಟಿ ವೆಚ್ಚವಾಗಬಹುದು ಎಂಬ ಅಂದಾಜಿದೆ.

ಈ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಶೇ 64ರಷ್ಟು ಮತಗಳು ಬಿದ್ದಿವೆ. ಶೇ 23ರಷ್ಟು ಜನ ಅತೃಪ್ತಿ ತೋರಿದ್ದಾರೆ. ಶೇ 13ರಷ್ಟು ಮಂದಿ ‘ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್‌ಗೆ ಭರ್ಜರಿ ಸ್ಪಂದನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗೆ ಭರ್ಜರಿ ಸ್ಪಂದನೆ ಸಿಕ್ಕಿದೆ.

ಕಳೆದ ವರ್ಷದ ಆಗಸ್ಟ್‌ನಿಂದ ₹5 ದರದಲ್ಲಿ ಉಪಾಹಾರ ಹಾಗೂ ₹10 ದರದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸುವ ಸೌಲಭ್ಯವನ್ನು ಸರ್ಕಾರ ಜಾರಿ ಮಾಡಿದೆ.

ಇಂದಿರಾ ಕ್ಯಾಂಟೀನ್‌ ಕುರಿತು ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಬೆಂಗಳೂರಿನ ಮತದಾರರು ಸರಾಸರಿ ಶೇ 97ರಷ್ಟು ಅಂಕ ಕೊಟ್ಟಿದ್ದಾರೆ. ಆದರೆ, ಬಿಬಿಎಂಪಿಯ ಗಡಿಭಾಗದಲ್ಲಿರುವ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 45ರಿಂದ ಶೇ 65 ಅಂಕಗಳು ದೊರಕಿವೆ.

ರಾಜಧಾನಿಯಿಂದ ಹೊರಗಿನ ಜಿಲ್ಲೆಗಳಲ್ಲಿ ಇದೇ ಜನವರಿಯಿಂದ ಈಚೆಗೆ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿವೆ. ಈ ಭಾಗದಲ್ಲಿ ಶೇ 31ರಷ್ಟು ಜನರು ಮಾತ್ರ ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ 36ರಷ್ಟು ಜನರು ಅತೃಪ್ತಿ ತೋರಿದ್ದಾರೆ. ಶೇ 33ರಷ್ಟು ಜನರು ‘ಬಳಸಿಲ್ಲ’ ಎಂದು ತಿಳಿಸಿದ್ದಾರೆ.

ಜನಪ್ರತಿನಿಧಿಗಳಿಗೆ ಸಮೀಕ್ಷೆಯಲ್ಲಿ ಮತದಾರರು ನೀಡಿರುವ ಅಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.