ADVERTISEMENT

ಕಾಂಗ್ರೆಸ್‌, ಬಿಜೆಪಿಗಿಂತ ಹೆಚ್ಚು ಸೀಟುಗಳನ್ನು ನಾವೇ ಗೆಲ್ಲುತ್ತೇವೆ: ದೇವೇಗೌಡ

ನಾಲ್ಕಾಣೆ ಏಜೆನ್ಸಿಗಳ ಸಮೀಕ್ಷೆಗೆ ತಲೆಕೆಡಿಸಿಕೊಳ್ಳಲ್ಲ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 12:58 IST
Last Updated 29 ಏಪ್ರಿಲ್ 2018, 12:58 IST
ಎಚ್‌.ಡಿ. ದೇವೇಗೌಢ
ಎಚ್‌.ಡಿ. ದೇವೇಗೌಢ   

ಮೈಸೂರು: ‘ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಬರಬಹುದು ಅಥವಾ ಬರದೇ ಇರಬಹುದು. ಆದರೆ, ನಾವೇ ಸರ್ಕಾರ ರಚಿಸುತ್ತೇವೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾನುವಾರ ತಿಳಿಸಿದರು.

‘ಬೇಕಾದರೆ ತಿರುಕನ ಕನಸು ಎನ್ನಿ. ಕಾಂಗ್ರೆಸ್‌, ಬಿಜೆಪಿಗಿಂತ ಹೆಚ್ಚು ಸೀಟುಗಳನ್ನು ನಾವೇ ಗೆಲ್ಲುತ್ತೇವೆ. ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇವೆ. ಕೆಲವರು ಜೆಡಿಎಸ್‌ಗೆ 35, 40 ಸೀಟುಗಳು ಬರಬಹುದು ಎನ್ನುತ್ತಾರೆ. ನಾಲ್ಕಾಣೆ ಏಜೆನ್ಸಿಗಳ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಹತ್ತು ವರ್ಷಗಳಿಂದ ಎರಡೂ ಪಕ್ಷಗಳ ಆಡಳಿತವನ್ನು ಜನ ನೋಡಿದ್ದಾರೆ. ಹೀಗಾಗಿ, ಈ ಬಾರಿ ನಮಗೆ ಆಶೀರ್ವಾದ ಮಾಡಲಿದ್ದಾರೆ. ಬಿಎಸ್‌ಪಿ ಬಿಟ್ಟು ಬೇರೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದರು.

ADVERTISEMENT

‘ನಾನು ಯಾವ ಪಾಪವನ್ನೂ ಮಾಡಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಿದೆ. ನಮ್ಮಪ್ಪ ನನಗೆ ಗೌಡ ಎಂದು ಹೆಸರಿಟ್ಟರು. ಯಾವ ವರ್ಗಕ್ಕೆ ಮೋಸ ಮಾಡಿದ್ದೇನೆ ಹೇಳಿ’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ವರ್ಚಸ್ಸಿನಿಂದ ಕಾಂಗ್ರೆಸ್‌ ಮುಖಂಡರು ಹತಾಶರಾಗಿದ್ದಾರೆ. ಹೀಗಾಗಿ, ಜೆಡಿಎಸ್‌ನವರು ಮುಸ್ಲಿಂ ವಿರೋಧಿಗಳು ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ವ್ಯಾಮೋಹಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದ ಬಾದಾಮಿಗೆ ಹೋಗಿದ್ದಾರೆ’ ಎಂದು ಟೀಕಿಸಿದರು.

‘ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡುವುದಿಲ್ಲ. ನಮ್ಮ ಪೈಲ್ವಾನ್ ಜಿ.ಟಿ.ದೇವೇಗೌಡ ಪ್ರಚಾರ ಮಾಡಿದರೆ ಸಾಕು’ ಎಂದು ನುಡಿದರು.

‘ವೈಯಕ್ತಿಕವಾಗಿ ಸಿದ್ದರಾಮಯ್ಯ ಬಗ್ಗೆ ನನಗೆ ಯಾವುದೇ ದ್ವೇಷ ಇಲ್ಲ. ಆದರೆ, 1983ರಲ್ಲಿ ಅವರು ಎಲ್ಲಿದ್ದರು. ರಾಜಕೀಯವಾಗಿ ಅವರನ್ನು ಬೆಳೆಸಿದ್ದು ಯಾರು’ ಎಂದು ಕೇಳಿದರು.

‍[related]

ಅವರ ಅಪ್ಪನಾಣೆಗೂ ಕುಮಾರಸ್ವಾಮಿ ಅಧಿಕಾರಕ್ಕೆ ಬರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾನು ಅವರನ್ನು ಪ್ರೀತಿಯಿಂದ ಸಿದ್ದರಾಮು ಎಂದು ಕರೆದಿದ್ದೆ. ಅದಕ್ಕೀಗ ಅವರು ಕೊಡುತ್ತಿರುವ ಬೆಲೆ ಇದು. ಆದರೀಗ ಆಣೆ ಕಾಲ ಹೋಗಿ ನೋಟು ಕಾಲ ಬಂದಿದೆ’ ಎಂದು ಕುಟುಕಿದರು.

ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕೋ ಬೇಡವೋ ಎಂಬುದನ್ನು ಈ ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.