ADVERTISEMENT

ದಾವಣಗೆರೆಗೆ 27ರಂದು ಪ್ರಧಾನಿ ಮೋದಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 8:56 IST
Last Updated 24 ಫೆಬ್ರುವರಿ 2018, 8:56 IST
ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಬೈಕ್‌  ರ‍್ಯಾಲಿ.
ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಬೈಕ್‌ ರ‍್ಯಾಲಿ.   

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಇದೇ 27ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಶನಿವಾರ ಬೃಹತ್‌ ಬೈಕ್‌ ರ‍್ಯಾಲಿ ನಡೆಸಿತು.

ನಗರದ ರಾಂ ಅಂಡ್‌ ಕೋ ವೃತ್ತದಲ್ಲಿ ರ‍್ಯಾಲಿಗೆ ಚಾಲನೆ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಕ್ಷ ನಗರದಲ್ಲಿ ‘ರೈತ ಬಂಧು–ಯಡಿಯೂರಪ್ಪ’ ಸಮಾವೇಶ ಹಮ್ಮಿಕೊಂಡಿದೆ. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಪಕ್ಷಕ್ಕೆ ಇನ್ನಷ್ಟು ಬಲ ಬರಲಿದೆ. ಈ ಸಮಾವೇಶ ರಾಜ್ಯದ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪಕ್ಷದ ಮಿಷನ್‌ 150 ಉದ್ದೇಶ ಈಡೇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೋದಿ ಅವರು ಪ್ರಧಾನಿಯಾದ ನಂತರ ದಾವಣಗೆರೆಗೆ ಬರುತ್ತಿರುವುದು ಇದು ಎರಡನೇ ಬಾರಿ. ಅಂದು ಸಮಾವೇಶದಲ್ಲಿ ಹುಟ್ಟುಹಬ್ಬದ ನೆನಪಿಗಾಗಿ ಯಡಿಯೂರಪ್ಪ ಅವರಿಗೆ ಮರದ ನೇಗಿಲನ್ನು ಪ್ರಧಾನಿ ಪ್ರದಾನ ಮಾಡಲಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ’ ಎಂದರು.

ADVERTISEMENT

ಸಮಾವೇಶಕ್ಕೆ ಸುಮಾರು 3 ಲಕ್ಷ ಜನ ಭಾಗವಸುವ ನಿರೀಕ್ಷೆ ಇದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳ ಕಾರ್ಯಕರ್ತರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರಮುಖ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮುಖಂಡರಾದ ಎಸ್‌.ಎ.ರವೀಂದ್ರನಾಥ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜ್ ನಾಯ್ಕ, ವಿಧಾನ ಪರಿಷತ್ತು ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌.ಶಿವಯೋಗಿ ಸ್ವಾಮಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.