ADVERTISEMENT

ಧೃತಿಗೆಡಬೇಡಿ: ಬಿಎಸ್‌ವೈ ಅಭಯ

ಸೋತ ಬಿಜೆಪಿ ಅಭ್ಯರ್ಥಿಗಳ ಜತೆ ವಿಸ್ತೃತ ಸಭೆ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:30 IST
Last Updated 24 ಮೇ 2018, 19:30 IST

ಬೆಂಗಳೂರು: ‘ಸೋಲಿನಿಂದ ಧೃತಿಗೆಡಬೇಡಿ. ಮುಂದಿನ ಚುನಾವಣೆಯಲ್ಲೂ ನೀವೇ ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಬಿಜೆಪಿಯ ಸೋತ ಅಭ್ಯರ್ಥಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಸರ್ಕಾರ ಶಾಶ್ವತ ಅಲ್ಲ. ನೀವು ಅಂಜಬೇಕಿಲ್ಲ. ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಕಚ್ಚಾಟದಿಂದ ಈ ಸರ್ಕಾರ ಶೀಘ್ರ ಪತನಗೊಳ್ಳಲಿದೆ. ಆಗ ಒಂದೋ ಬಿಜೆಪಿ ಸರ್ಕಾರ ರಚಿಸಲಿದೆ ಅಥವಾ ಚುನಾವಣೆ ನಡೆಯಲಿದೆ. ನಾನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಸಂಚಾರ ನಡೆಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇನೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು’ ಎಂದು ಅಭಯ ನೀಡಿದರು.

ADVERTISEMENT

‘ಬಿಜೆಪಿ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಅನೇಕ ಅಭ್ಯರ್ಥಿಗಳು ಸೋತರು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

‘ಅನೇಕ ಕ್ಷೇತ್ರಗಳಲ್ಲಿ ಕಿರು ಅಂತರದಿಂದ ಅಭ್ಯರ್ಥಿಗಳು ಸೋತಿದ್ದಾರೆ. ಸ್ಪಲ್ಪ ಪ್ರಯತ್ನ ಮಾಡಿದ್ದರೆ ಗೆಲುವು ಸಾಧಿಸಬಹುದಿತ್ತು’ ಎಂದು ಮುಖಂಡರು ಅನಿಸಿಕೆ ಹಂಚಿಕೊಂಡರು.

ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ತಳ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಕುರಿತು ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.