ADVERTISEMENT

ಧ್ರುವೀಕರಣವೇ ಕೊಲೆಗೆ ಕಾರಣ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಪಿ.ಚಿದಂಬರಂ
ಪಿ.ಚಿದಂಬರಂ   

ಮಂಗಳೂರು: ‘ಕರ್ನಾಟಕದ ಕರಾವಳಿಯಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡೆಸುತ್ತಿರುವ ಮತೀಯ ಧ್ರುವೀಕರಣವೇ ಇಲ್ಲಿ ಕೊಲೆಗಳು ನಡೆಯಲು ಕಾರಣ’ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮದ ಹೆಸರಿನಲ್ಲಿ ಜನರನ್ನು ಧ್ರುವೀಕರಣ ಮಾಡುವ ಮೂಲಕ ಬಲ ಹೆಚ್ಚಿಸಿಕೊಳ್ಳಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಯತ್ನಿಸುತ್ತಿವೆ. ಇದು ವಿಭಿನ್ನ ಧರ್ಮಗಳ ಜನರ ನಡುವೆ ದ್ವೇಷ ಬೆಳೆಯಲು ಕಾರಣವಾಗುತ್ತದೆ. ಅದರಿಂದಾಗಿಯೇ ಘರ್ಷಣೆ, ಕೊಲೆಗಳು ನಡೆಯುತ್ತಿವೆ’ ಎಂದರು.

ಮತೀಯ ಧ್ರುವೀಕರಣದ ಪ್ರಯತ್ನಗಳನ್ನು ಹತ್ತಿಕ್ಕದಿದ್ದರೆ ಅಪಾಯವಿದೆ. ಇಂತಹ ವಿಷಯಗಳಲ್ಲಿ ಸರ್ಕಾರ ಮತ್ತು ಪೊಲೀಸರು ಕಠಿಣ ನಿಲುವು ತಾಳುವುದು ಅಗತ್ಯ. ಮತೀಯ ದ್ವೇಷ ಬಿತ್ತುವವ‌ರ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ಯಾರ ಅಪ್ಪಣೆಗೂ ಕಾಯಬಾರದು. ಆಗ ಮಾತ್ರವೇ ಶಾಂತಿ, ಸೌಹಾರ್ದ ರಕ್ಷಿಸಬಹುದು ಎಂದು ಹೇಳಿದರು.

ADVERTISEMENT

‘ದೇಶದ ರಾಜಕೀಯದಲ್ಲಿ ನರೇಂದ್ರ ಮೋದಿ ಪರವಾದ ಅಲೆ ಇದೆ ಎಂಬುದು ಸುಳ್ಳು. 2014ರ ಲೋಕಸಭಾ ಚುನಾವಣೆಯಲ್ಲಿ ಅವರ ಪರವಾದ ಅಲೆ ಇತ್ತು. ಆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ತ್ರಿಪುರಾದಲ್ಲಿ ಗೆದ್ದಿದ್ದಾರೆ. ಉಳಿದ ಎಲ್ಲ ರಾಜ್ಯಗಳಲ್ಲಿ ಸೋತಿದ್ದಾರೆ. ಈಗ ಎಲ್ಲಿದೆ ಮೋದಿ ಅಲೆ’ ಎಂದು ಪ್ರಶ್ನೆಯೊಂದಕ್ಕೆ ಮರುಪ್ರಶ್ನೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.