ADVERTISEMENT

‘ನಕಲಿ ಮತದಾರರ ಸೃಷ್ಟಿ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 20:32 IST
Last Updated 11 ಏಪ್ರಿಲ್ 2018, 20:32 IST
ಮುನಿರಾಜು ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
ಮುನಿರಾಜು ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ   

ಬೆಂಗಳೂರು: ‘ದಾಸರಹಳ್ಳಿ ಶಾಸಕ ಮುನಿರಾಜು ವಿದ್ಯಾಭ್ಯಾಸಕ್ಕೆಂದು ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತದಾನದ ಪಟ್ಟಿಯಲ್ಲಿ ಹೆಸರು ನೊಂದಾಯಿಸುತ್ತಿದ್ದಾರೆ’ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿನ ಬಾಗಲುಗುಂಟೆ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಬಾಗಲುಗುಂಟೆ, ಚಿಕ್ಕಬಾಣಾವರ, ಬೋನ್‍ವೀಲ್ ಗ್ರಾಮಗಳ ವ್ಯಾಪ್ತಿಯಲ್ಲಿ ಹತ್ತರಿಂದ ಹನ್ನೆರಡು ಕಾಲೇಜುಗಳಿವೆ. ಅವೆಲ್ಲವು ಅಂತರರಾಷ್ಟ್ರೀಯ ಕಾಲೇಜುಗಳಾಗಿದ್ದು, ಹೊರದೇಶಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಮತದಾನದ ಗುರುತಿನ ಚೀಟಿಯನ್ನು ಮಾಡಿಸುತ್ತಿದ್ದಾರೆ. ಇದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಜೆಡಿಎಸ್ ಮುಖಂಡ ಮಂಜುನಾಥ್ ಆರೋಪಿಸಿದರು.

‘ಐದಾರು ವರ್ಷಗಳಿಂದ ಮುನಿರಾಜು ಬೆಂಬಲಿಗರು ನಕಲಿ ದಾಖಲೆಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ದಾಸರಹಳ್ಳಿ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರ ಮತದಾರರನ್ನು ಈ ರೀತಿ ಸೇರಿಸಲಾಗಿದೆ. ಈ ಬಾರಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಅವರು, ಕಂಡ ಕಂಡವರ ಹೆಸರನ್ನು ಮತದಾನದ ಪಟ್ಟಿಗೆ ಸೇರಿಸುತ್ತಿದ್ದಾರೆ. ಪಾಲಿಕೆಯ ಅಧಿಕಾರಿಗಳು ಅವರ ತಾಳಕ್ಕೆ ಕುಣಿಯುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

ಚಿಕ್ಕಬಾಣಾವರದ ಜೆಡಿಎಸ್ ಸಂಚಾಲಕ ವರದರಾಜು, ‘ಬಿಜೆಪಿ ಶಕ್ತಿ ಕೇಂದ್ರದಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೀನಿ. ಉಸಿರು ಗಟ್ಟುವ ವಾತಾವರಣವಿದ್ದು, ಶಾಸಕರ ಕೈಗೊಂಬೆಗಳಾಗಿ ಕಾರ್ಯಕರ್ತರು ಕೆಲಸನಿರ್ವಹಿಸಬೇಕು. ನಕಲಿ ಮತದಾನದ ಬಗ್ಗೆ ತನಿಖೆಯಾಗಬೇಕು’ ಎಂದು ತಿಳಿಸಿದರು.

‘ಶಾಸಕರಾಗಿ ಅವರು ಚಿಕ್ಕಬಾಣಾವರ ಕೆರೆಯನ್ನು ಅಭಿವೃದ್ದಿ ಮಾಡಲಿಲ್ಲ. ಶೆಟ್ಟಿಹಳ್ಳಿ, ಅಬ್ಬಿಗೆರೆ, ಸೋಮಶೆಟ್ಟಿಹಳ್ಳಿಯ ಅನೇಕ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ‌’ ಎಂದರು.

ತಿಮ್ಮರಾಜುಗೌಡ ಜೆಡಿಎಸ್ ಪಕ್ಷವಲ್ಲ:

‘ಬಾಡೂಟ ಆಯೋಜಿಸಿ ಬಂಧನಕ್ಕೆ ಒಳಗಾಗಿರುವ ತಿಮ್ಮರಾಜುಗೌಡ ಜೆಡಿಎಸ್ ಪಕ್ಷದವರಲ್ಲ. ಎರಡು ವರ್ಷಗಳ ಹಿಂದೆ ಅವರು ಜೆಡಿಎಸ್ ಪರವಾಗಿ ಬಂಡಾಯ ಎದ್ದಿದ್ದರು. ಅಗ ಅವರನ್ನು ಪಕ್ಷದಿಂದ ಉಚ್ಚಾಟಿಸಾಗಿದೆ’ ಎಂದು ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.