ADVERTISEMENT

ನೀರಾವರಿಯೇ ಪ್ರಮುಖ ವಿಷಯ

ಹಳೆಯ ಕೋಟೆ ರಕ್ಷಣೆಗೆ ಕೈ ಕಸರತ್ತು; ಹೊಸ ನೆಲೆಗಾಗಿ ಜೆಡಿಎಸ್ ಶ್ರಮ

ಈರಪ್ಪ ಹಳಕಟ್ಟಿ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ನೀರಾವರಿಯೇ ಪ್ರಮುಖ ವಿಷಯ
ನೀರಾವರಿಯೇ ಪ್ರಮುಖ ವಿಷಯ   

ಬಯಲುಸೀಮೆಯ ಈ ನೆಲದಲ್ಲಿ ಅಂತರ್ಜಲ ಪಾತಾಳ ಕಂಡ ಪರಿಣಾಮ, ‘ಜೀವಜಲ’ಕ್ಕಾಗಿ ಹೊಮ್ಮಿದ ಹೋರಾಟದ ಸದ್ದು ಕಳೆದ ಎರಡು ದಶಕಗಳಿಂದಲೂ ನಿರಂತರವಾಗಿ ಅನುರಣಿಸುತ್ತಲೇ ಇದೆ.

‘ಶಾಶ್ವತ ನೀರಾವರಿ’ ಉಲ್ಲೇಖವಿಲ್ಲದೆ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗಳು ಪೂರ್ಣಗೊಳ್ಳುವುದೇ ಇಲ್ಲ. ಹೀಗಾಗಿ, ಇಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ನೀರಾವರಿ ಪ್ರಮುಖ ‘ಅಜೆಂಡಾ’ ಆಗುತ್ತಲೇ ಬಂದಿದೆ.

ಅದರಲ್ಲೂ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಯಾದ ನಂತರವಂತೂ ಸ್ಥಳೀಯ ರಾಜಕಾರಣದಲ್ಲಿ ವಿರೋಧಿಗಳ ಮೇಲೆ ಕೆಸರಿನ ಬದಲು ‘ನೀರು’ ಎರಚುವ ಹೊಸ ಪ್ರವೃತ್ತಿಯೊಂದು ಕಾಣಿಸಿಕೊಂಡಿದೆ. ರಾಜಕಾರಣಿಗಳ ಭರವಸೆ ನಂಬಿ, ನೀರನ್ನು ಚಾತಕಪಕ್ಷಿಗಳಂತೆ ಎದುರು ನೋಡಿ, ಬಾಯಲ್ಲಿ ಪಸೆ ತಂದುಕೊಂಡು ಒಣಗಿಸಿಕೊಂಡವರೆಲ್ಲ ಇದೀಗ ‘ಎಲ್ಲಿದೆ ನಿಮ್ಮ ನೀರು’ ಎಂದು ಪ್ರಶ್ನಿಸಲು ಆರಂಭಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕಾಂಗ್ರೆಸ್ ಹೊತ್ತಿಸಿದ ಕುಲುಮೆಯ ಮೇಲೆ ಸದ್ಯ ಎತ್ತಿನಹೊಳೆ ನೀರು ಕುದಿಯಲು ಆರಂಭಿಸಿದೆ. ಜತೆಗೆ ವಿರೋಧದ ನಡುವೆಯೂ, ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ತಂದು ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿರುವುದು ಜಿಲ್ಲೆಯ ಹೋರಾಟಗಾರರು, ಪ್ರಜ್ಞಾವಂತರನ್ನು ಕೆರಳಿಸಿದೆ. ಹೀಗಾಗಿ ಚುನಾವಣಾ ಫಲಿತಾಂಶ ತುಂಬಾ ಕುತೂಹಲ ಮೂಡಿಸಿದೆ.

ಮೊದಲ ಸಾರ್ವತ್ರಿಕ ಚುನಾವಣೆಯಿಂದ 2013ರವರೆಗೆ ನಡೆದ 14 ವಿಧಾನಸಭಾ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಲೇ ಬಂದಿದೆ. ಆದರೆ ಚುನಾವಣೆಯಿಂದ ಚುನಾವಣೆಗೆ ‘ಕೈ’ ಪ್ರಾಬಲ್ಯ ಕಡಿಮೆಯಾಗುತ್ತಿರುವುದು ಢಾಳಾಗಿಯೇ ಕಾಣುತ್ತದೆ.

2008ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 2013ರಲ್ಲಿ ಆ ಪಕ್ಷ ಎರಡು ಸ್ಥಾನಗಳನ್ನಷ್ಟೇ ಪಡೆದುಕೊಂಡಿತು.

ದಟ್ಟ ಎಡಪಂಥೀಯ ಚಿಂತನೆಯ ಪ್ರಭಾವ ಇರುವ ಜಿಲ್ಲೆಯಲ್ಲಿ ನೆಲೆ ಕಂಡುಕೊಂಡು, ಒಬ್ಬೇ ಒಬ್ಬಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಬಿಜೆಪಿಗೆ ಈವರೆಗೂ ಸಾಧ್ಯವಾಗಿಲ್ಲ. ಹಾಗೆಂದು ಸಿಪಿಎಂ ಹಿಡಿತ ಹೆಚ್ಚಿರಬಹುದು ಎಂದು ಭಾವಿಸುವಂತಿಲ್ಲ. ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ
ಎದುರಾಳಿಗಳಾಗಿವೆ.

‘ಬಂಡಾಯ’ದ ಬಿಸಿ: ಜಿಲ್ಲೆಯ ಅನೇಕ ಕ್ಷೇತ್ರಗಳಲ್ಲಿ ಸದ್ಯ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೂ ಬಂಡಾಯದ ಬಿಸಿಯ ಚುರುಕು ಮುಟ್ಟಿದೆ. ಸ್ವಪಕ್ಷೀಯರ ಕಾಲೆಳೆಯುವ ತಂತ್ರಗಳು ಜೋರಾಗಿಯೇ ನಡೆದಿವೆ. ಹೀಗಾಗಿ ಇದು ಯಾರಿಗೆಲ್ಲ ಹಾನಿ ಉಂಟು ಮಾಡಲಿದೆ ಎನ್ನುವ ಅಂದಾಜು ಸದ್ಯ ಲೆಕ್ಕಕ್ಕೆ ಸಿಗುತ್ತಿಲ್ಲ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಸಕ ಡಾ. ಕೆ.ಸುಧಾಕರ್ (ಕಾಂಗ್ರೆಸ್) ಮತ್ತು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ನಡುವೆ ನಡೆಯಲಿದ್ದ ಪ್ರಬಲ ಪೈಪೋಟಿ, ಕಾಂಗ್ರೆಸ್ ಮುಖಂಡ ಕೆ.ವಿ.ನವೀನ್ ಕಿರಣ್ (ಪಕ್ಷೇತರ) ಅವರ ಸ್ಪರ್ಧೆಯಿಂದಾಗಿ ತ್ರಿಕೋನ ಪೈಪೋಟಿಗೆ ಎಡೆಮಾಡಿ, ಚುನಾವಣಾ ಕಣವನ್ನು ರಂಗೇರಿಸಿದೆ.

ಚಿಂತಾಮಣಿಯಲ್ಲಿ ಕಾಂಗ್ರೆಸ್ ಮುಖಂಡ ಡಾ. ಎಂ.ಸಿ.ಸುಧಾಕರ್ ಪಕ್ಷದ ಟಿಕೆಟ್ ನಿರಾಕರಿಸಿ ‘ಭಾರತೀಯ ಪ್ರಜಾ ಪಕ್ಷ’ದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಲ್ಲಿ ತಮಗೆ ಶಾಸಕ ಎಂ.ಕೃಷ್ಣಾರೆಡ್ಡಿ (ಜೆಡಿಎಸ್) ಅವರೇ ಮುಖ್ಯ ಪ್ರತಿಸ್ಪರ್ಧಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಗೌರಿಬಿದನೂರಿನಲ್ಲಿ ಬಿಜೆಪಿ ಮುಖಂಡ ಸಿ.ಆರ್.ನರಸಿಂಹಮೂರ್ತಿ ಟಿಕೆಟ್ ವಿಚಾರಕ್ಕೆ ಮುನಿಸಿಕೊಂಡು ಜೆಡಿಎಸ್ ಅಭ್ಯರ್ಥಿಯಾಗಿ, ಇದೀಗ ಬಿಜೆಪಿಯ ಕೆ.ಜೈಪಾಲ್ ರೆಡ್ಡಿ ಮತ್ತು ಕಾಂಗ್ರೆಸ್ ಹುರಿಯಾಳು, ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರಿಗೆ ಸಡ್ಡು ಹೊಡೆದಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ತುರುಸಿನಿಂದ ನಡೆಯುತ್ತಿದೆ.

ಬಾಗೇಪಲ್ಲಿಯಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅಭ್ಯರ್ಥಿಯಾದರೆ, ಟಿಕೆಟ್ ಆಕಾಂಕ್ಷಿ ಗುಂಜೂರು ಶ್ರೀನಿವಾಸ ರೆಡ್ಡಿ ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್‌ನಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರಿಗೆ ಟಿಕೆಟ್ ನೀಡಿದಾಗ ಆರಂಭದಲ್ಲಿ ಅಪಸ್ವರ ಕೇಳಿಬಂದಿತಾದರೂ ಅದು ಈಗ ನಿಂತಿದೆ. ಈ ಕ್ಷೇತ್ರದಲ್ಲಿ ಸಿಪಿಎಂನಿಂದ ಜಿ.ವಿ.ಶ್ರೀರಾಮರೆಡ್ಡಿ ಮತ್ತು ಬಿಜೆಪಿಯಿಂದ ನಟ ಸಾಯಿಕುಮಾರ್ ಕಣಕ್ಕಿಳಿದಿದ್ದಾರೆ. ಹೀಗಾಗಿ ಹಿಂದೆಂದೂ ಕಂಡರಿಯದ ಪೈಪೋಟಿ ಇಲ್ಲಿನಡೆದಿದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಎಂ.ರಾಜಣ್ಣ ಮತ್ತು ಮುಖಂಡ ಮೇಲೂರು ರವಿಕುಮಾರ್ ನಡುವಿನ ಪೈಪೋಟಿ ಜೆಡಿಎಸ್ ಪಾಳಯವನ್ನು ಒಡೆದ ಮನೆಯಂತಾಗಿ ಮಾಡಿದೆ. ಸದ್ಯ ರವಿಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ, ರಾಜಣ್ಣ ಪಕ್ಷೇತರರಾಗಿ ಕಣದಲ್ಲಿದ್ದಾರೆ. ರಾಜಕೀಯ ವಿರೋಧಿಗಳ ಈ ವೈಮನಸ್ಸಿನ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹುರಿಯಾಳು ವಿ.ಮುನಿಯಪ್ಪ ಇದ್ದಾರೆ. ಆದರೆ ಅವರಿಗೆ ಸ್ವಪಕ್ಷದಲ್ಲಿದ್ದ ಮುಖಂಡ ಆಂಜನಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮಗ್ಗಲು ಮುಳ್ಳಿನಂತಾಗಿದೆ.

‘ಜನರನ್ನು ಕೇವಲವಾಗಿ ನೋಡುತ್ತಿದ್ದಾರೆ’

ಬರ ಮತ್ತು ಬಡತನ ನಿವಾರಿಸುವ ಪ್ರಯತ್ನವಾಗಲೀ, ಜನರ ಬದುಕಿಗೆ ಆಸರೆಯಾಗುವಂತಹ ಶಾಶ್ವತ ನೀರಾವರಿ ಯೋಜನೆ, ಕೈಗಾರಿಕೆಗಳನ್ನಾಗಲೀ ತರುವ ಪ್ರಾಮಾಣಿಕ ಪ್ರಯತ್ನವನ್ನು ಈವರೆಗೆ ಯಾರೂ ಮಾಡಿಲ್ಲ. ಹಣ, ಜಾತಿ ಮತ್ತು ತೋಳ್ಬಲದಿಂದ ಚುನಾವಣೆಯಲ್ಲಿ ಗೆದ್ದು ಲೂಟಿ ಹೊಡೆಯುತ್ತಿ
ರುವವರು ಜನರನ್ನು ಕೇವಲವಾಗಿ ನೋಡುತ್ತಿದ್ದಾರೆ.

ಎ.ಟಿ.ಕೃಷ್ಣನ್, ಸಾಮಾಜಿಕ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.