ADVERTISEMENT

‘ನೋಟಾ’ಕ್ಕೆ ಮಹದಾಯಿ ಹೋರಾಟಗಾರರ ನಿರ್ಧಾರ

ಮೋದಿ, ಅಮಿತ್ ಶಾರಿಂದ ರೈತರಿಗೆ ಅವಮಾನ: ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:30 IST
Last Updated 7 ಮೇ 2018, 19:30 IST

ಗದಗ: ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ರೈತರಿಗೆ ಮೋಸ ಮಾಡಿವೆ ಎಂದು ಆರೋಪಿಸಿರುವ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ,‌ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 11 ತಾಲ್ಲೂಕುಗಳ ರೈತರು, ಹೋರಾಟಗಾರರು ‘ನೋಟಾ’ ಚಲಾಯಿಸಲು ನಿರ್ಧರಿಸಿರುವುದಾಗಿ ಹೇಳಿದರು.

‘ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಚರ್ಚಿಸಿಯೇ ಈ ನಿರ್ಣಯಕ್ಕೆ ಬರಲಾಗಿದ್ದು, ಇನ್ನೂ ಕೆಲವು ಗ್ರಾಮಗಳಲ್ಲಿ ನೋಟಾ ಚಲಾಯಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಸುಳ್ಳು ಹೇಳಿ ರೈತರನ್ನು ಅವಮಾನಿಸಿದ್ದಾರೆ. ಇದು ಬಿಜೆಪಿಯ ರಾಜಕೀಯ ತಂತ್ರ’ ಎಂದು ಅವರು‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮಹದಾಯಿ ನ್ಯಾಯಮಂಡಳಿ ತೀರ್ಪು ಹೊರಬೀಳಲು ಇನ್ನು ಮೂರು ತಿಂಗಳು ಮಾತ್ರ ಇದೆ. ಆದರೆ, ಇದೀಗ ಪ್ರಧಾನಿ ಆರು ತಿಂಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಹೇಳುತ್ತಾರೆ. ಅವರಿಗೆ ನಿಜವಾದ ಕಾಳಜಿ ಇದ್ದರೆ, ನ್ಯಾಯಮಂಡಳಿ ತೀರ್ಪಿಗಿಂತ ಮುನ್ನವೇ ಮಧ್ಯಸ್ಥಿಕೆ ವಹಿಸಲಿ’ ಎಂದು ಒತ್ತಾಯಿಸಿದರು.

‘ಬೇಡಿಕೆ ಈಡೇರುವವರೆಗೆ ನರಗುಂದದ ಧರಣಿ ವೇದಿಕೆಯಲ್ಲಿ ಹೋರಾಟ ಮುಂದುವರಿಯಲಿದೆ. 223 ರೈತರು ಈಗಾಗಲೇ ದಯಾಮರಣಕ್ಕೆ ರಾಷ್ಟ್ರಪತಿ ಬಳಿ ಅರ್ಜಿ ಸಲ್ಲಿಸಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.