ADVERTISEMENT

ಪರಿಸರ ಉಳಿಸಲು ಹೆಚ್ಚು ಜನ ಮತ

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:59 IST
Last Updated 10 ಮೇ 2018, 19:59 IST
ಪರಿಸರ ಉಳಿಸಲು ಹೆಚ್ಚು ಜನ ಮತ
ಪರಿಸರ ಉಳಿಸಲು ಹೆಚ್ಚು ಜನ ಮತ   

ಬೆಂಗಳೂರು: ರಾಜ್ಯದಲ್ಲಿ ಹಸಿರು ಹೆಚ್ಚಿಸಿ, ನೀರಿನ ಬವಣೆ ತಗ್ಗಿಸಿ, ಕಾನೂನು ಸುವ್ಯವಸ್ಥೆ ಉತ್ತಮಗೊಳಿಸಿ... ಈ ಮೂರು ವಿಷಯಗಳ ಸುಧಾರಣೆಗೆ ಹೆಚ್ಚು ಮಂದಿ ಮತ ಹಾಕಿದ್ದಾರೆ.

‘ನಾಗರಿಕರ ಪ್ರಣಾಳಿಕೆ’ ಸಿದ್ಧಪಡಿಸುವ ಭಾಗವಾಗಿ ‘ಐ ಚೇಂಜ್‌ ಮೈ ಸಿಟಿ’ ಸಂಘಟನೆ ನಡೆಸಿದ್ದ ಆನ್‌ಲೈನ್‌ ಸಮೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ.

ಏಪ್ರಿಲ್‌ 17 ರಿಂದ ಮೇ 5ರವರೆಗೆ ಮತ ಹಾಕಲು ಅವಕಾಶ ನೀಡಲಾಗಿತ್ತು. ಒಟ್ಟು 13 ವಿಭಾಗಗಳಲ್ಲಿ (ವಿದ್ಯುತ್‌, ಪರಿಸರ, ನಗರ ಯೋಜನೆ, ನೀರು, ಅಪರಾಧ, ಘನತ್ಯಾಜ್ಯ ನಿರ್ವಹಣೆ, ನಾಗರಿಕರ ಪಾಲ್ಗೊಳ್ಳುವಿಕೆ, ಆಡಳಿತ, ಆರೋಗ್ಯ, ಸಾರಿಗೆ, ವಸತಿ, ಶಿಕ್ಷಣ ಮತ್ತು ಸಂಸ್ಕೃತಿ) ಜನರ ಅಭಿಪ್ರಾಯ ಪಡೆಯಲಾಗಿದೆ.

ADVERTISEMENT

ರಾಜ್ಯದಾದ್ಯಂತ 26,628 ಜನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, 45,042 ಮತಗಳು ಸ್ವೀಕೃತಿಯಾಗಿವೆ. ಇದರಲ್ಲಿ ಪರಿಸರಕ್ಕೆ ಹೆಚ್ಚು ಕಾಳಜಿ ವಹಿಸಬೇಕೆಂದು 4,815 ಮಂದಿ ಮತ ಹಾಕಿದ್ದಾರೆ. ನೀರಿನ ಬವಣೆಯನ್ನು ನಿವಾರಿಸಬೇಕು ಎಂದು 4,563 ಮಂದಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಅಪರಾಧ ಕಡಿಮೆಗೊಳಿಸಬೇಕೆಂದು 4,240 ಜನ ಹೇಳಿದ್ದಾರೆ.

ಪ್ರತಿ ಚುನಾವಣೆ ವೇಳೆ ಎಲ್ಲಾ ರಾಜಕೀಯ ಪಕ್ಷಗಳು, ‘ಅಭಿವೃದ್ಧಿ ಕೆಲಸ ಹಾಗೂ ಜನರು ಬಯಸುವ ಕೆಲಸಗಳ’ ಆಧಾರದ ಮೇಲೆ ಪ್ರಣಾಳಿಕೆ ಸಿದ್ಧಪಡಿಸುತ್ತವೆ. ಆದರೆ, ಅವುಗಳು ಜನರ ನಿರೀಕ್ಷೆಗಳನ್ನು ಮುಟ್ಟತ್ತವೆಯೇ? ಯಾವ ತೊಂದರೆಗೆ ಜನಪ್ರತಿನಿಧಿಗಳಿಂದ ಪರಿಹಾರ ಬಯಸುತ್ತಿದ್ದಾರೆ? ಎಂಬ ವಿಷಯ ತಿಳಿಯಲು ಸಮೀಕ್ಷೆ ಕೈಗೊಳ್ಳಲಾಗಿತ್ತು.

ಈ ಜನಾಭಿಪ್ರಾಯವನ್ನು ಎಲ್ಲ ರಾಜಕೀಯ ಪಕ್ಷಗಳಿಗೂ ನೀಡಲಾಗುವುದು ಎಂದು ಸಂಘಟನೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.