ADVERTISEMENT

ಬಿಜೆಪಿ ಕಡೆಗೆ ಕಾಂಗ್ರೆಸ್ ಶಾಸಕ ಪ್ರತಾಪಗೌಡ?

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಬಿಜೆಪಿ ಕಡೆಗೆ ಕಾಂಗ್ರೆಸ್ ಶಾಸಕ ಪ್ರತಾಪಗೌಡ?
ಬಿಜೆಪಿ ಕಡೆಗೆ ಕಾಂಗ್ರೆಸ್ ಶಾಸಕ ಪ್ರತಾಪಗೌಡ?   

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಅವರು ಬಿಜೆಪಿಗೆ ಬೆಂಬಲ ನೀಡುವ ಕಡೆಗೆ ಮುಖ ಮಾಡಿದ್ದಾರೆ.

ಇವರು ಬೆಳಿಗ್ಗೆಯಿಂದಲೇ ಯಾರ ಸಂಪರ್ಕಕ್ಕೂ ಸಿಗದೆ ದೂರ ಉಳಿದಿದ್ದಾರೆ. 2008 ರಲ್ಲಿ ಬಿಜೆಪಿಯಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2013 ರಲ್ಲಿ ಬಿಜೆಪಿ ವಿಭಜನೆಗೊಂಡಿತು. ಆಗ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧೆ ಗೆಲುವು ಸಾಧಿಸಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿಯ ಬಸವನಗೌಡ ತುರ್ವಿಹಾಳ ಅವರ ವಿರುದ್ಧ ಕೇವಲ 213 ಮತಗಳ ಅಂತರದಿಂದ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

ADVERTISEMENT

ಇವರನ್ನು ರಾಜಕೀಯಕ್ಕೆ ಮೊದಲು ಕರೆ ತಂದಿದ್ದು ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಹಾಗೂ ಶಾಸಕ ಬಿ.ಶ್ರೀರಾಮುಲು. ಅವರೇ ಇದೀಗ ಪ್ರತಾಪಗೌಡ ಅವರಿಗೆ ಗಾಳ ಹಾಕಿ ಬಿಜೆಪಿಯತ್ತ ಸೆಳೆದಿದ್ದಾರೆ ಎಂದು ಶಾಸಕರ ಆಪ್ತರು ಹೇಳುತ್ತಾರೆ.

ಬಿಜೆಪಿಗೆ ಹೋಗುವುದಿಲ್ಲ: ದರ್ಶನಾಪುರ
ಶಹಾಪುರ: ‘ನಾನು ಕಾಂಗ್ರೆಸ್‌ ತೊರೆದು ಬಿಜೆಪಿ ಜೊತೆಗೆ ಹೋಗುತ್ತೇನೆ ಎಂಬುದು ಸುಳ್ಳು. ಯಾವ ಆಮಿಷಕ್ಕೂ ಮಣಿಯದೇ ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

’ರಾಜ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂಥ ವದಂತಿಗಳು ಸಾಮಾನ್ಯ. ಆದರೆ, ಕ್ಷೇತ್ರದ ಜನ ಕಾಂಗ್ರೆಸ್‌ ಸರ್ಕಾರದ ಸಾಧನೆ ಗುರುತಿಸಿ ನನ್ನನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಬಿಜೆಪಿ ಎಷ್ಟೇ ಆಮಿಷ ಒಡ್ಡಿದರೂ ನಾನು ಅವರೊಂದಿಗೆ ಕೈಜೋಡಿಸುವುದಿಲ್ಲ’ ಎಂದಿದ್ದಾರೆ.

ಶಾಸಕ ಬಯ್ಯಾಪುರಗೆ ಬಿಜೆಪಿಯಿಂದ ಕರೆ

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಬಿಜೆಪಿಯನ್ನು ಬೆಂಬಲಿಸುವಂತೆ ಆ ಪಕ್ಷದ ಕೆಲ ಗೌರವಾನ್ವಿತ ವ್ಯಕ್ತಿಗಳೇ ಕರೆ ಮಾಡಿದ್ದರು. ಆದರೆ ಯಾವುದೇ ಆಮಿಷಗಳಿಗೆ ಒಳಗಾಗುವ ವ್ಯಕ್ತಿ ಅಲ್ಲ’ ಎಂದು ಕಾಂಗ್ರೆಸ್‌ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಬಿಜೆಪಿ ಮುಖಂಡರು ಕರೆ ಮಾಡಿದ್ದರೆ ಅದನ್ನು ಬಹಿರಂಗ ಪಡಿಸಲಿ ಎಂದು ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿರುವುದಕ್ಕೆ ಪ್ರತಿಯಾಗಿ ಬಯ್ಯಾಪುರ ಹೇಳಿಕೆ ನೀಡಿ, ‘ನನಗೆ ಕರೆ ಮಾಡಿದವರು ಯಾರು ಎಂಬುದನ್ನು ದೊಡ್ಡನಗೌಡಗೆ ಮಾತ್ರ ಹೇಳುತ್ತೇನೆ. ಬೇಕಾದರೆ ಪತ್ರಿಕೆಗಳಿಗೆ ಅವರು ಮಾಹಿತಿ ನೀಡಲಿ’ ಎಂದು ಸವಾಲು ಹಾಕಿದರು.

‘18 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿರುವುದು ಕುಷ್ಟಗಿ ಚುನಾವಣಾ ಇತಿಹಾಸದಲ್ಲಿಯೇ ಇದೇ ಮೊದಲು. ಜನರ ತೀರ್ಪಿಗೆ ತಲೆ ಬಾಗುತ್ತೇನೆ, ಹೊರತು ಪಕ್ಷಾಂತರ ಮಾಡಿ ಯಾರಿಗೂ ದ್ರೋಹ ಮಾಡುವುದಿಲ್ಲ. ಸಂಸ್ಕಾರ, ನೀತಿ ನಿಯಮ ಎಂಬುದು ಇದೆ. ಆಮಿಷಗಳಿಗೆ ಬಲಿಯಾಗಿ ಆತ್ಮಗೌರವ ಮಾರಿಕೊಳ್ಳುವಂಥ ವ್ಯಕ್ತಿತ್ವ ನನ್ನದಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಗೌರವದ ಸ್ಥಾನ ಇದೆ. ಅನೇಕ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಿರುವಾಗ ನನ್ನನ್ನು ಹೈಕಮಾಂಡ್‌ ಬಲವಂತದಿಂದ ಇರಿಸಿಕೊಂಡಿದೆ ಎಂಬುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.