ADVERTISEMENT

ವಿದ್ಯಾರ್ಥಿನಿ ವಿರುದ್ಧ ಎಫ್‌ಐಆರ್‌

ಕೇರಳ, ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST

ಮಂಗಳೂರು: ಕೇರಳದ ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಹೆಸರು ನೋಂದಣಿ ಮಾಡಿಸಿ
ಕೊಂಡಿರುವ ವಿದ್ಯಾರ್ಥಿನಿಯೊಬ್ಬರ ವಿರುದ್ಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ.

ನಗರದ ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ದೀನಾ ಶಾಜಿ ಎಂಬುವವರು ಬಲ್ಮಠದ ವಿಳಾಸ ನೀಡಿ, ಮಂಗಳೂರು ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಮತದಾರರ ಗುರುತಿನ ಚೀಟಿಯನ್ನೂ ಪಡೆದುಕೊಂಡಿದ್ದರು. ಕೇರಳದ ಚೆಂಬೋಲಿಕ್ಕಲ್‌ ಎಂಬ ಮತಗಟ್ಟೆ ವ್ಯಾಪ್ತಿಯಲ್ಲೂ ಇವರ ಹೆಸರು ಮತದಾರರ ಪಟ್ಟಿಯಲ್ಲಿದೆ. ಅದನ್ನು ತೆಗೆಸಿ ಹಾಕಿರಲಿಲ್ಲ.

ಎರಡೂ ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಸಂಬಂಧ ಪ್ರವೀಣ್‌ ಶೇಟ್‌ ಎಂಬುವವರು ವಿದ್ಯಾರ್ಥಿನಿ ವಿರುದ್ಧ ದೂರು ನೀಡಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ದೀನಾ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.