ADVERTISEMENT

5 ಕೋಟಿಗೂ ಹೆಚ್ಚು ಮತದಾರರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
5 ಕೋಟಿಗೂ ಹೆಚ್ಚು ಮತದಾರರು
5 ಕೋಟಿಗೂ ಹೆಚ್ಚು ಮತದಾರರು   

ಬೆಂಗಳೂರು: ‘ಮತದಾರರ ನೋಂದಣಿ, ಹೆಸರು ತಿದ್ದುಪಡಿ ಸೇರಿದಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿದ್ದ ಕಾಲಾವಕಾಶ ಶನಿವಾರಕ್ಕೆ (ಏ.14) ಮುಕ್ತಾಯವಾಗಿದ್ದು, ಈ ಬಾರಿ ರಾಜ್ಯದಲ್ಲಿ ಮತದಾರರ ಸಂಖ್ಯೆ ಐದು ಕೋಟಿ ದಾಟಲಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಪ್ರಸ್ತುತ 4.96 ಕೋಟಿ ಮತದಾರರಿದ್ದು, ಹೊಸ ಮತದಾರರು ಸಾಕಷ್ಟು ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ತೃತೀಯಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು, ಬುಡಕಟ್ಟು ಸಮುದಾಯದವರು, ವಸತಿರಹಿತರು ಸೇರಿದಂತೆ ಎಲ್ಲ ವರ್ಗದವರನ್ನೂ ಮತಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ, ಸಂಖ್ಯೆ ಐದು ಕೋಟಿ ದಾಟುತ್ತದೆ’ ಎಂದರು.

‘ಮಹಿಳೆಯರಿಗಾಗಿಯೇ ನಗರ ಪ್ರದೇಶದಲ್ಲಿ ಕನಿಷ್ಠ ಐದು ಹಾಗೂ ಗ್ರಾಮದಲ್ಲಿ ಕನಿಷ್ಠ ಒಂದು ‘ಪಿಂಕ್’ ಮತಗಟ್ಟೆ ಇರಲಿದೆ’ ಎಂದು ಹೇಳಿದರು.

ADVERTISEMENT

ನೆಲಮಾಳಿಗೆಯಲ್ಲೇ ಮತಗಟ್ಟೆ: ‘ಅಂಗವಿಕಲರು, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ನೆಲಮಾಳಿಗೆಯಲ್ಲೇ ಮತಗಟ್ಟೆಗಳು ಇರಲಿವೆ. ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮೀಕ್ಷೆ ನಡೆಸಿ, ಸ್ಥಳಗಳನ್ನು ಗುರುತಿಸಿದ್ದೇವೆ’ ಎಂದರು.

‘ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡಲು ರಾಜ್ಯದಾದ್ಯಂತ 2,500 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ನಗದು ಸೇರಿದಂತೆ ಈವರೆಗೆ ₹ 43 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಫ್ಲೈಯಿಂಗ್ ಸ್ಕ್ವಾಡ್‌ನ ಪ್ರತಿ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗಿದ್ದು, ತಂಡಗಳು ಎಲ್ಲೆಲ್ಲಿವೆ ಎಂಬುದು ಗೊತ್ತಾಗುತ್ತದೆ. ಅಕ್ರಮ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಕೂಡಲೇ, ಆ ಸ್ಥಳಕ್ಕೆ ಹತ್ತಿರವಿರುವ ತಂಡವನ್ನು ಅಲ್ಲಿಗೆ ಕಳಿಸಿ ಕ್ರಮ ಜರುಗಿಸುತ್ತಿದ್ದೇವೆ’ ಎಂದರು.

‘ಕಳೆದ ಚುನಾವಣೆ ವೇಳೆ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಐಪಿಸಿ ಹಾಗೂ ಜನಪ್ರತಿನಿಧಿ ಕಾಯ್ದೆ ಅಡಿ 1,157 ಎಫ್‌ಐಆರ್‌ಗಳು ದಾಖಲಾಗಿದ್ದವು. ಆ ಪೈಕಿ 1,008 ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, 299 ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಂದರೆ, ಶಿಕ್ಷೆ ಪ್ರಮಾಣ ಶೇ 26ರಷ್ಟಿದೆ. ಬೇರೆ ಪ್ರಕರಣಗಳಿಗೆ ಹೋಲಿಸಿದರೆ, ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುತ್ತಿವೆ’ ಎಂದರು.

**

ಕೈದಿಗಳಿಗೂ ಮತದಾನದ ಭಾಗ್ಯ

ವಿಚಾರಣಾಧೀನ ಕೈದಿಗಳಿಗೂ ಮತದಾನದ ಹಕ್ಕನ್ನು ಕಲ್ಪಿಸಲು ಮುಂದಡಿ ಇಟ್ಟಿರುವ ಚುನಾವಣಾ ಆಯೋಗ, ರಾಜ್ಯದ ಎಲ್ಲ ಜೈಲುಗಳಲ್ಲಿರುವ ಕೈದಿಗಳ ವಿವರ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಪತ್ರ ಬರೆದಿದೆ.

‘ರಾಜ್ಯದ ಕಾರಾಗೃಹಗಳಲ್ಲಿ ಯಾವ್ಯಾವ ಜಿಲ್ಲೆಯ ಎಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ ಎಂಬ ವಿವರ ನೀಡುವಂತೆ ಕೋರಿದ್ದೇವೆ. ಸರ್ಕಾರದಿಂದ ಮಾಹಿತಿ ಬಂದ ನಂತರ, ಕೈದಿಗಳಿಗೆ ಯಾವ ರೀತಿ ಮತ ಚಲಾಯಿಸುವ ವ್ಯವಸ್ಥೆ ಮಾಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದು ಹೆಸರು ಹೇಳಲಿಚ್ಛಿಸದ ಆಯೋಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು‌.

‘ಎಲ್ಲ ವರ್ಗದವರಿಗೂ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ರಾಜ್ಯ ಹೈಕೋರ್ಟ್‍ನ ಕಾನೂನು ಘಟಕವು ಇತ್ತೀಚೆಗೆ ಆಯೋಗಕ್ಕೆ ಪತ್ರ ಬರೆದಿದೆ. ಆ ಸಲಹೆಯನ್ನು ಹಾಗೂ ಕೈದಿಗಳಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸುವ ವಿಚಾರವನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಒಂದು ವೇಳೆ ಅನುಮತಿ ಸಿಕ್ಕರೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೈದಿಗಳಿಗೂ ಅವಕಾಶ ಸಿಕ್ಕಂತಾಗುತ್ತದೆ’ ಎಂದು ಹೇಳಿದರು.

ಹೇಗಿದೆ ಚಿಂತನೆ: ‘ಕೈದಿಗಳ ವಿವರ ತರಿಸಿಕೊಂಡು, ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸುವುದು. ಬಳಿಕ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಅನುಗುಣವಾಗಿ ಅವರ ಹೆಸರುಗಳನ್ನು ವಿಂಗಡಿಸುವುದು. ಕೊನೆಗೆ, ಸಂಬಂಧಪಟ್ಟ ಜೈಲು ಅಧೀಕ್ಷಕರಿಗೆ ಮಾಹಿತಿ ನೀಡಿ, ಜೈಲಿಗೆ ಪೋಸ್ಟಲ್‌ ಬ್ಯಾಲೆಟ್ ಪೇಪರ್‌ ( ಅಂಚೆ ಮತ ಪತ್ರ) ಕಳುಹಿಸಿಕೊಡುವುದು. ಈ ಪ್ರಕ್ರಿಯೆ ಅನುಸರಿಸಿ ಮತದಾನ ಮಾಡಿಸುವ ಯೋಚನೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.