ADVERTISEMENT

ಬಿಜೆ‍‍ಪಿಯ ಪ್ರಭಾವಿ ನಾಯಕರ ಕ್ಷೇತ್ರ ಬದಲು?

ಈಶ್ವರಪ್ಪ, ಅಶೋಕ ಮೇಲೆ ತೂಗುಗತ್ತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 20:21 IST
Last Updated 9 ಫೆಬ್ರುವರಿ 2018, 20:21 IST
ಬಿಜೆ‍‍ಪಿಯ ಪ್ರಭಾವಿ ನಾಯಕರ ಕ್ಷೇತ್ರ ಬದಲು?
ಬಿಜೆ‍‍ಪಿಯ ಪ್ರಭಾವಿ ನಾಯಕರ ಕ್ಷೇತ್ರ ಬದಲು?   

ಬೆಂಗಳೂರು: ಪಕ್ಷದ ಕೆಲವು ಪ್ರಭಾವಿ ನಾಯಕರನ್ನು ಅವರ ಸ್ವಂತ ಕ್ಷೇತ್ರದಿಂದ ಬೇರೆ ಕಡೆಗಳಿಗೆ ಸ್ಥಳಾಂತರಿಸಲು ಬಿಜೆಪಿ ವರಿಷ್ಠರು ಚಿಂತಿಸುತ್ತಿದ್ದಾರೆ.

ಒಂದೇ ಕ್ಷೇತ್ರದಲ್ಲಿ ಸತತ ನಾಲ್ಕೈದು ಬಾರಿ ಗೆದ್ದಿರುವ ನಾಯಕರನ್ನು ಬೇರೆ ಕಡೆಗಳಿಗೆ ಸ್ಥಳಾಂತರಿಸುವ ಮೂಲಕ ನೆಲೆ ವಿಸ್ತರಿಸಿಕೊಳ್ಳುವ ಉದ್ದೇಶ ಇದರ ಹಿಂದಿದೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

‘ನಮ್ಮ ನಾಯಕರು ಸತತವಾಗಿ ಗೆಲ್ಲುತ್ತಿರುವ ಕ್ಷೇತ್ರಗಳು ಪಕ್ಷದ ಕೈಬಿಟ್ಟು ಹೋಗುವುದಿಲ್ಲ. ಇಂಥ ಕ್ಷೇತ್ರಗಳಲ್ಲಿ ಯಾರನ್ನೇ ನಿಲ್ಲಿಸಿದರೂ ಗೆಲುವು ಖಚಿತ. ನೆಲೆ ಇಲ್ಲದ ಕಡೆಗಳಲ್ಲಿ ಪ್ರಭಾವಿ ಮುಖಂಡರನ್ನು ಕಣಕ್ಕಿಳಿಸಿದರೆ ಅವರು ಗೆಲ್ಲುವುದರ ಜತೆ ನೆರೆಯ ಕ್ಷೇತ್ರಗಳ ಮೇಲೂ ಪ್ರಭಾವ ಬೀರಬಹುದು’ ಎಂಬ ಆಲೋಚನೆ ಇದೆ.

ADVERTISEMENT

ಮೈಸೂರಿನ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕೆಲವು ಪ್ರಭಾವಿ ನಾಯಕರಿಗೆ ಕ್ಷೇತ್ರ ಬದಲಾವಣೆಗೆ ಸಿದ್ಧವಾಗಿರುವಂತೆ ಸೂಚ್ಯವಾಗಿ ಹೇಳಿದ್ದಾರೆ. ಟಿಕೆಟ್‌ ಹಂಚಿಕೆ ಸಮಯದಲ್ಲಿ ಇದು ಸ್ಪಷ್ಟವಾಗಬಹುದು ಎಂದೂ ಮೂಲಗಳು ಹೇಳಿವೆ.

ಬಿಜೆಪಿಯ ಹಿರಿಯ ಮುಖಂಡರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಆರ್‌. ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಎಂ. ಉದಾಸಿ, ಎಸ್‌.ಅಂಗಾರ, ಉಮೇಶ ಕತ್ತಿ, ವಿ. ಸೋಮಣ್ಣ ಸೇರಿ ಅನೇಕರ ಕ್ಷೇತ್ರಗಳು ಬದಲಾವಣೆ ಆಗುವ ಸಾಧ್ಯತೆಯಿದೆ.

ಅಶೋಕ ಅವರಿಗೆ ಪದ್ಮನಾಭ ನಗರ ಬಿಟ್ಟುಕೊಟ್ಟು, ಸಚಿವ ರಾಮಲಿಂಗಾರೆಡ್ಡಿ ಪ್ರತಿನಿಧಿಸಿರುವ ಬಿಟಿಎಂ ಲೇಔಟ್‌ ಅಥವಾ ಮಂಡ್ಯ ಜಿಲ್ಲೆಯ ಯಾವುದಾದರೂ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ತಿಳಿಸಲಾಗಿದೆ. ಪದ್ಮನಾಭ ನಗರದಿಂದ ತಮ್ಮ ಆಪ್ತ ವೆಂಕಟೇಶ್‌ ಮೂರ್ತಿ ಅವರಿಗೆ ಟಿಕೆಟ್‌ ಕೊಡುವಂತೆ ಈಶ್ವರಪ್ಪ ಪಟ್ಟು ಹಿಡಿದಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ.

ಈಶ್ವರಪ್ಪ ಹಿಂದುಳಿದ ವರ್ಗಗಳಿಗೆ ಸೇರಿದ ಕೆಲ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಆಪ್ತರ ಪಟ್ಟಿ ಸಲ್ಲಿಸಿ, ಟಿಕೆಟ್‌ ಕೊಡುವಂತೆ ಒತ್ತಡಹೇರುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಹಿರಿಯ ನಾಯಕರ ಜಟಾಪಟಿ ತಪ್ಪಿಸಲು ಹೈದರಾಬಾದ್‌ ಕರ್ನಾಟಕದ ಯಾವುದಾದರೂ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಚಿಂತನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.