ADVERTISEMENT

ಮೋದಿ ಮತ್ತೆ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ: ಸಿದ್ದರಾಮಯ್ಯ

’ತೇಜಸ್ವಿ ಸೂರ್ಯ: ಅವನಿಗೆ ಅಮಾವಾಸ್ಯೆ ಎಂದು ಹೆಸರಿಡಬೇಕಿತ್ತು'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:13 IST
Last Updated 3 ಏಪ್ರಿಲ್ 2019, 13:13 IST
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ನಡೆದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ, ‘ದೇವೇಗೌಡರು ಮತ್ತು ಸಿದ್ದರಾಮಯ್ಯ ಒಂದಾದರೆ ರಾಜ್ಯದ ರಾಜಕಾರಣ ನಕಾಶೆಯನ್ನೇ ಬದಲಾಯಿಸುತ್ತಾರೆ’ ಎಂದು ಬಣ್ಣಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕುಶಲೋಪರಿಯಲ್ಲಿ ತೊಡಗಿದ್ದು ಹೀಗೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಚ್.ಎನ್. ಕೋನರಡ್ಡಿ ಇದ್ದಾರೆ
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ನಡೆದ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ, ‘ದೇವೇಗೌಡರು ಮತ್ತು ಸಿದ್ದರಾಮಯ್ಯ ಒಂದಾದರೆ ರಾಜ್ಯದ ರಾಜಕಾರಣ ನಕಾಶೆಯನ್ನೇ ಬದಲಾಯಿಸುತ್ತಾರೆ’ ಎಂದು ಬಣ್ಣಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕುಶಲೋಪರಿಯಲ್ಲಿ ತೊಡಗಿದ್ದು ಹೀಗೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಚ್.ಎನ್. ಕೋನರಡ್ಡಿ ಇದ್ದಾರೆ   

ಹಾವೇರಿ:ನರೇಂದ್ರ ಮೋದಿ ಮತ್ತೆ ಬಂದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಅದಕ್ಕಾಗಿ ಬಿಜೆಪಿಯನ್ನು ಕೆಳಗೆ ಇಳಿಸಿ, ಅಧಿಕಾರದಿಂದ ಒದ್ದು ಓಡಿಸಲೇ ಬೇಕು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

‘ಕೋಮುವಾದಿ ಪಕ್ಷ ಬರಲೇ ಬಾರದು ಎಂದು ನಾವು ಮೈತ್ರಿ ಮಾಡಿಕೊಂಡಿದ್ದೇವೆ’ ಎಂದು ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಡಿ.ಆರ್. ಪಾಟೀಲ ಪರ ಪ್ರಚಾರದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಪ್ರತಿಮೆ ನಾಶ ಮಾಡಿ, ಸಂವಿಧಾನವನ್ನು ಸುಟ್ಟು ಹಾಕಿ ಎಂದು ಹೇಳಿಕೆ ನೀಡಿದವನೇ ಬಿಜೆಪಿ ಅಭ್ಯರ್ಥಿ. ಅವ ಸೂರ್ಯನೋ, ಚಂದ್ರನೋ ಗೊತ್ತಿಲ್ಲ. ಅವನಿಗೆ ‘ಅಮಾವಾಸ್ಯೆ’ ಎಂದು ಹೆಸರು ಇಡಬೇಕಿತ್ತು ಎಂದು ಲೇವಡಿ ಮಾಡಿದರು.

ADVERTISEMENT

ಮೋದಿ ಹಾಗೂ ಶಾ ಅನುಮತಿ ಇಲ್ಲದೇ ಸಚಿವ ಅನಂತ ಕುಮಾರ ಹೆಗಡೆ, ‘ಸಂವಿಧಾನ ಬದಲು ಮಾಡುತ್ತೇನೆ’ ಎಂದು ಹೇಳಲು ಸಾಧ್ಯವಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಭಾರತದ ಪ್ರಜೆಯಾಗಲು ನಾಲಾಯಕ್ ಎಂದರು.

ನಾವು (ಮೈತ್ರಿ) ಹಿಂದುಳಿದವರಿಗೆ 7, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 7 ಹಾಗೂ ಇತರರಿಗೆ 14 ಸ್ಥಾನ ನೀಡಿದ್ದೇವೆ. ಬಿಜೆಪಿಯವರು 28 ಕ್ಷೇತ್ರಗಳ ಪೈಕಿ ಒಂದೇ ಒಂದೇ ಕಡೆ ಹಿಂದುಳಿದವರಿಗೆ ಸೀಟು ಕೊಟ್ಟಿಲ್ಲ. ಈಶ್ವರಪ್ಪಗೆ ಮಾನ ಮರ್ಯಾದೆ ಇದ್ದರೆ, ಬಿಜೆಪಿ ಬಿಟ್ಟು ಹೊರಬರಲಿ ಎಂದು ಸವಾಲು ಹಾಕಿದರು.

ಅಪ್ಪನ ನೋಡಿ ಮಗಳ ಕೊಡ್ತಾರಾ?

‘ಏನೂ ಕೆಲಸ ಮಾಡದ ಬಿಜೆಪಿ ಸಂಸದರು,ಮೋದಿ ನೋಡಿ ವೋಟು ಕೊಡಿ ಎನ್ನುತ್ತಿದ್ದಾರೆ’ ಎಂದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ‘ಹುಡುಗನ ನೋಡಿ ಹೆಣ್ಣು ಕೊಡ್ತಾರೆ. ಆದರೆ, ಹುಡುಗನ ಅಪ್ಪನ ನೋಡಿ ಹೆಣ್ಣು ಕೊಡ್ತಾರಾ?’ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಚುನಾವಣೆ ತನಕ ಯಡಿಯೂರಪ್ಪ ‘ಹಿಂದೂ’, ಅಧಿಕಾರ ಬಂದರೆ ಹೆಗಡೆ ‘ಮುಂದು’ ಎಂದು ಲೇವಡಿ ಮಾಡಿದ ಅವರು, 8 ಲಿಂಗಾಯತ ಸಂಸದರಿದ್ದರೂ ಸಚಿವ ಸ್ಥಾನ ನೀಡಿಲ್ಲ ಎಂದು ದೂರಿದರು.

‘ಅಂಬೇಡ್ಕರ್ ಪ್ರತಿಮೆ ನಾಶ ಮಾಡಬೇಕು ಎಂದು ತೇಜಸ್ವಿ ಸೂರ್ಯ ಹೇಳಿಕೆ ನೀಡ್ತಾನೆ. ಆದ್ರೂ ಬಿಜೆಪಿಯಿಂದ ಶ್ರೀನಿವಾಸ ಪ್ರಸಾದ್ ಸ್ಪರ್ಧಿಸುತ್ತಾರೆ’ ಎಂದು ಟಾಂಗ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.