ADVERTISEMENT

ಮತದಾನ ಹೆಚ್ಚಿದರೆ ಚುನಾವಣೆ ಅರ್ಥಪೂರ್ಣ: ಜಿ.ಪಂ. ಸಿಇಒ ಬಸವರಾಜೇಂದ್ರ

ಮತಗಟ್ಟೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 12:43 IST
Last Updated 25 ಮಾರ್ಚ್ 2019, 12:43 IST
ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಮತಗಟ್ಟೆ ಹಾಗೂ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌. ಬಸವರಾಜೇಂದ್ರ ಮಾತನಾಡಿದರು
ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಮತಗಟ್ಟೆ ಹಾಗೂ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌. ಬಸವರಾಜೇಂದ್ರ ಮಾತನಾಡಿದರು   

ದಾವಣಗೆರೆ: ಮತದಾನ ಪ್ರಮಾಣ ಹೆಚ್ಚಿದರೆ ಚುನಾವಣೆಗೂ ಅರ್ಥಪೂರ್ಣವಾಗಿರುತ್ತದೆ. ಹೀಗಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಹೆಚ್ಚು ನಡೆಸಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಬಸವರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ನಗರ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿ.ಎಲ್‌.ಒ, ಸೆಕ್ಟರ್‌ ಅಧಿಕಾರಿಗಳ ಹಾಗೂ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಮನೆ–ಮನೆಗೂ ತೆರಳಿ ಮತದಾರರಿಗೆ ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿಸಬೇಕು’ ಎಂದು ಹೇಳಿದರು.

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 70ರಷ್ಟು ಮಾತ್ರ ಮತದಾನವಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಬೂತ್‌ನಲ್ಲಿ ಶೇ 40.73ರಷ್ಟು ಆಗಿದೆ. ಸರಾಸರಿ ಶೇ 30ರಷ್ಟು ಕಡಿಮೆ ಮತದಾನ ಆಗಿದೆ. ಹೀಗಾಗಿ ಈ ಬಾರಿ ಮತದಾನ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಲಾಗುವುದು. ಸ್ವೀಪ್ ಸಮಿತಿಯಿಂದ ಇಂತಹ ಪ್ರದೇಶಗಳಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಜಾಥಾ, ಬೀದಿನಾಟಕ, ರಾಜಕೀಯೇತರ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಜಾಲಿ ನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿದೆ. ಆ ಕೊರತೆಗೆ ಕಾರಣ ಗುರುತಿಸಿ ಜಾಗೃತಿ ಮೂಡಿಸಲಾಗುವುದು. ಹೊಳೆಹೊನ್ನೂರು ತೋಟ, ಕೊಂಡಜ್ಜಿ ರಸ್ತೆ, ದುರ್ಗಾಂಬಿಕಾ ಟ್ರಸ್ಟ್‌ ಸ್ಕೂಲ್, ಚಿರಡೊಣಿ ಶಾಲೆ, ಜಾಕೀರ್‌ಹುಸೇನ್‌, ಪ್ರಥಮ ದರ್ಜೆ ಕಾಲೇಜು, ಎಸ್‌.ಎಂ. ಶಾಲೆ, ಟಿಪ್ಪುನಗರ, ಈ ಬೂತ್‌ಗಳಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ಈ ಭಾಗದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.

ಬಿ.ಎಲ್‌.ಒ ಮತ್ತು ಬಿಲ್‌ ಕಲೆಕ್ಟರ್‌ ತಮ್ಮ ವಾರ್ಡ್‌ಗಳಲ್ಲಿ ಬೀದಿ ನಾಟಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮತದಾನದ ಮೂಲಕ ಜಾಗೃತಿ ಮೂಡಿಸಬೇಕು. ಮನೆಯಿಂದ ಹೊರಗೆ ಕರೆ ತಂದು ಮತದಾನ ಕುರಿತು ಪ್ರತಿಜ್ಞೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಪಾಲಿಕೆಯ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿ ಮತದಾನದ ಜಾಗೃತಿ ಗೀತೆ ಪ್ರಸಾರವಾಗುತ್ತಿದೆ. ಇದರ ಜೊತೆಗೆ ಮತ್ತಷ್ಟು ವಾಹನಗಳಲ್ಲಿ ಮತದಾನ ಜಾಗೃತಿ ಕುರಿತ ವಿವಿಧ ಗೀತೆಗಳನ್ನು ಪ್ರಸಾರ ಮಾಡಲಾಗುವುದು. ಎಲ್ಲಾ ಕಡೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಹಾಕಲಾಗುವುದು. ಪ್ರತಿ ಹಳ್ಳಿಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ. ಇಲ್ಲಿಯವರೆಗೆ ಎರಡು ಸಾವಿರಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ನಗರಗಳಲ್ಲಿ ಮತದಾನ ಕುರಿತು ಹೆಚ್ಚು ಜಾಗೃತಿ ಮೂಡಿಸಿ ಎಂದರು.

ಹೊರ ದೇಶದಲ್ಲಿರುವ ಭಾರತೀಯರಿಗೆ ಅಲ್ಲಿಂದಲೆ ಮತದಾನ ಮಾಡಲು ಅವಕಾಶವಿದೆ. ಅಂತಹ ಮತದಾರರಿಗೆ ಮತದಾನದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಪಾಲಿಕೆಯ ಆಯುಕ್ತ ವೀರೇಂದ್ರ ಕುಂದುಗೋಳ, ‘ಶಿಕ್ಷಕರು ಶಾಲಾ ಮಕ್ಕಳಿಗೆ ನಾವು ನಮ್ಮ ಪೋಷಕರಿಂದ ಮತದಾನ ಮಾಡಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿಸಬೇಕು. ಇದರಿಂದ ಮಕ್ಕಳು ತಮ್ಮ ಪೋಷಕರಿಗೆ ಮತದಾನ ಮಾಡುವಂತೆ ಒತ್ತಾಯಿಸುತ್ತಾರೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಾ ನಾಯ್ಕ್, ಪಾಲಿಕೆಯ ಉಪ ಆಯುಕ್ತ ಬಾಲಕೃಷ್ಣಪ್ಪ, ಪಾಲಿಕೆಯ ಕಂದಾಯ ಅಧಿಕಾರಿಗಳು, ಬಿ.ಎಲ್‌.ಒ, ಸೆಕ್ಟರ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.