ADVERTISEMENT

ವರ್ಷದಲ್ಲಿ ಎತ್ತಿನಹೊಳೆ ನೀರು ಪೂರೈಕೆ: ಮೊಯಿಲಿ ಭರವಸೆ

ಹೊಸಕೋಟೆ ಹಳೇ ಬಸ್ ನಿಲ್ದಾಣದಲ್ಲಿ ಚುನಾವಣಾ ಸಭೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:39 IST
Last Updated 5 ಏಪ್ರಿಲ್ 2019, 13:39 IST
ಹೊಸಕೋಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ವಸತಿ ಸಚಿವ ಎಮ್ ಟಿ ಬಿ ನಾಗರಾಜ್ ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಅಭ್ಯಾರ್ಥಿ ವೀರಪ್ಪ ಮೊಯ್ಲಿ ಹಾಗು ಜಿಲ್ಲಾ ಅದ್ಯಕ್ಷರಾದ ಮುನಿಶಾಮಣ್ಣ ಹಾಗು ಇತರರು ಇದ್ದಾರೆ.
ಹೊಸಕೋಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ವಸತಿ ಸಚಿವ ಎಮ್ ಟಿ ಬಿ ನಾಗರಾಜ್ ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಅಭ್ಯಾರ್ಥಿ ವೀರಪ್ಪ ಮೊಯ್ಲಿ ಹಾಗು ಜಿಲ್ಲಾ ಅದ್ಯಕ್ಷರಾದ ಮುನಿಶಾಮಣ್ಣ ಹಾಗು ಇತರರು ಇದ್ದಾರೆ.   

ಹೊಸಕೋಟೆ: ಒಂದು ವರ್ಷದಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ಶುದ್ಧ ನೀರನ್ನು ನೀಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಾರ್ಥಿ ವೀರಪ್ಪ ಮೊಯಿಲಿ ಹೇಳಿದರು.

ಅವರು ಹೊಸಕೋಟೆಯ ಹಳೇ ಬಸ್ ನಿಲ್ದಾಣದಲ್ಲಿ ಚುನಾವಣೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

‘35 ವರ್ಷಗಳಿಂದ ಬೇರೆಬೇರೆ ಇಲಾಖೆಗಳಲ್ಲಿ ಸಚಿವನಾಗಿ ಜನರ ಸೇವೆ ಮಾಡಿದ್ದೇನೆ. ನಾನು ರಾಜ್ಯದ ನೀರಾವರಿ ಸಚಿವನಾಗಿದ್ದಾಗ ಅಲಮಟ್ಟಿ ಅಣೆಕಟ್ಟೆ ಕಟ್ಟಿ ಆ ಭಾಗದ 3 ಲಕ್ಷ ಎಕರೆ ಜಮೀನಿಗೆ ನೀರು ಹರಿಸಿರುವೆ’ ಎಂದು ಹೇಳಿದರು.

ADVERTISEMENT

‘ಕೇಂದ್ರದ ಕಾನೂನು ಸಚಿವನಾಗಿದ್ದಾಗ ಮಹಿಳೆಯರಿಗೆ ಆಸ್ತಿಯಲ್ಲಿ ಅರ್ಧ ಪಾಲು ಬರುವ ಮಸೂದೆಯನ್ನು ತಂದು ಹೆಣ್ಣು ಮಕ್ಕಳಿಗೆ ಸಹಾಯ ಮಾಡಿರುವೆ’ ಎಂದು ತಿಳಿಸಿದರು. 50 ವರ್ಷಗಳಿಂದ ಒಂದೇ ಪಕ್ಷದಲ್ಲಿ ಇದ್ದು, ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ ಕೆಳಗಿಳಿದ ನಂತರವೂ ಪಕ್ಷ ಬಿಡದ ಮೊದಲನೇ ವ್ಯಕ್ತಿ ನಾನೇ’ ಎಂದರು.

ಇದಕ್ಕೂ ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಸತಿ ಸಚಿವ ಎಂ.ಟಿ.ಬಿ. ನಾಗರಾಜ್, ‘ಬಿಜೆಪಿಯವರು ಈಗಾಗಲೇ ಚುನಾವಣೆಯನ್ನು ಗೆದ್ದಿರುವುದಾಗಿ ಕುಣಿಯುತ್ತಿದ್ದಾರೆ. ಕೇವಲ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅವರು ಗೆದ್ದಿದ್ದು ಉಳಿದ ಏಳು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಶಾಸಕರಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಲೋಕಸಭೆಗೆ ವೀರಪ್ಪ ಮೊಯಿಲಿ ಆಯ್ಕೆಯಾಗಲೇಬೇಕು’ ಎಂದರು.

ತಾಲ್ಲೂಕಿನ ಸಾಕಷ್ಟು ಒಳ್ಳೆಯ ಕೆಲಸಗಳಿಗೆ ಬಿಜೆಪಿ ತೊಂದರೆ ಕೊಡುತ್ತಿದ್ದು ಅಕಸ್ಮಾತ್ ಬಚ್ಚೇಗೌಡರು ಆಯ್ಕೆಯಾದರೆ ತಾಲ್ಲೂಕಿಗೆ ತೊಂದರೆಯಾಗುತ್ತದೆ ಎಂದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ನಗರಸಭೆಯ ಅಧ್ಯಕ್ಷ ಹೇಮಂತಕುಮಾರ್, ಮುಖಂಡರಾದ ನಝೀರ್, ಶ್ರೀಧರ ಹಾಗೂ ಇತರರು ಭಾಗವಹಿಸಿದ್ದರು. ಇದಕ್ಕೂ ಮುಂಚೆ ನಗರದ ಅವಿಮುಕ್ತೇಶ್ವರ ದೇವಾಲಯದಲ್ಲಿ ಪೂಜೆ ಮಾಡಿಸಿ ನಂದಗುಡಿ ಹೋಬಳಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.