ADVERTISEMENT

ಹಾಡುಗಳ ಬೆನ್ನಮೇಲೆ ರಾಜಕೀಯ ರಾಯ‘ಭಾರ’!

​ಪ್ರಜಾವಾಣಿ ವಾರ್ತೆ
Published 30 ಜೂನ್ 2017, 19:30 IST
Last Updated 30 ಜೂನ್ 2017, 19:30 IST
ನಕುಲ್,  ಸುಕೃತಾ ದೇಶಪಾಂಡೆ
ನಕುಲ್, ಸುಕೃತಾ ದೇಶಪಾಂಡೆ   

ಅದು ‘ಪ್ರೀತಿಯ ರಾಯಭಾರಿ’ ಎಂಬ ಸಿನಿಮಾದ ಹಾಡುಗಳ ವಿಡಿಯೊ ಬಿಡುಗಡೆ ಕಾರ್ಯಕ್ರಮ. ಆದರೆ ಅಲ್ಲಿ ಸಿನಿಮಾ ತಂಡಕ್ಕಿಂತ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಮುಖಂಡರು, ಮರಿ ಪುಡಾರಿಗಳ ದಂಡೇ ಇತ್ತು. ಇದಕ್ಕೆ ಕಾರಣ ಚಿತ್ರದ ನಿರ್ಮಾಪಕ ಎಸ್‌. ಆರ್‌. ವೆಂಕಟೇಶ್‌ ಅವರು ಜೆ.ಡಿ.ಎಸ್‌ ಮುಖಂಡರು. ಅವರ ಮಗ ನಕುಲ್‌ ಗೌಡ ಚಿತ್ರದ ನಾಯಕ. ಅಲ್ಲದೇ ಅಂದು ನಕುಲ್‌ ಅವರ ಜನ್ಮದಿನವೂ ಹೌದು.

ಪತ್ರಿಕಾಗೋಷ್ಠಿ ದಾರಿ ತಪ್ಪಲು ಇದಕ್ಕಿಂತ ಇನ್ನೇನು ಬೇಕು? ಮೊದಲರ್ಧ ಪುಡಾರಿಗಳ ಅಸಂಗತ ಭಾಷಣ, ಫೋಟೊ ಸೆಷನ್‌ ನಂತರ ವಿಡಿಯೊ ಬಿಡುಗಡೆ ಮತ್ತೆ ನಕುಲ್‌ ಜನ್ಮದಿನದ ಪ್ರಯುಕ್ತ ಕೇಕ್‌ ಕತ್ತರಿಸಿ ಸಂಭ್ರಮಾಚರಣೆ. ಇಡೀ ಕಾರ್ಯಕ್ರಮದ ರೂಪು ರೇಷೆ ಹೀಗಿತ್ತು.

ಅರ್ಜುನ್ ಜನ್ಯ ಅವರ ಎಂದಿನ ಗದ್ದಲದ ಶೈಲಿಯಲ್ಲಿಯೇ ಹಾಡುಗಳು ಮೂಡಿಬಂದಿವೆ. ಡಾನ್ಸ್‌ನಲ್ಲಿ ಸೈ ಅನಿಸಿಕೊಳ್ಳುವ ನಕುಲ್‌ ರೋಮ್ಯಾನ್ಸ್‌ನಲ್ಲಿ ಸ್ವಲ್ಪ ಸಪ್ಪೆ ಸಪ್ಪೆ. ಸುಕೃತಾ ದೇಶಪಾಂಡೆ ಅವರ ಚೆಲುವನ್ನು ತೋರಿಸುವಲ್ಲಿ ಛಾಯಾಗ್ರಾಹಕರ ಪರಿಶ್ರಮ ಎದ್ದು ಕಾಣುತ್ತದೆ. ‘ನಂಗೂ ಬೇಕಾ ಇಂಟ್ರಡಕ್ಷನ್‌..’ ಎಂಬ ಹಾಡಿನ ಟ್ಯೂನ್‌ ಅನ್ನು ಈಗಾಗಲೇ ಕೇಳಿದಂತೆ ಭಾಸವಾಗುತ್ತದೆ.

ಈ ಗದ್ದಲದ ನಡುವೆಯೇ ಚಿತ್ರತಂಡದ ಕೆಲವರು ಪತ್ರಕರ್ತರ ಜತೆ ಮಾತನಾಡಿದರು. ‘ಇದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಅರ್ಜುನ್‌ ಜನ್ಯ ಅವರು ಚೆನ್ನಾಗಿದೆ ಎಂದು ಹೇಳಿದ ಕಾರಣಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನನ್ನ ಮಗನೇ ನಾಯಕ ಆಗುತ್ತಿರುವುದಕ್ಕೆ ಸಂತೋಷವಿದೆ’ ಎಂದರು ವೆಂಕಟೇಶ್‌ ಗೌಡ.
ನಿರ್ದೇಶಕ ಎಂ.ಎಂ. ಮುತ್ತು ಅವರಿಗೆ ಒಂದು ಕ್ರೈಂ ಸಬ್ಜೆಕ್ಟ್‌ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತಂತೆ. ‘ಪ್ರೀತಿಯ ರಾಯಭಾರಿ’ಯ ಮೂಲಕ ಅದು ನೆರವೇರಿದೆ. ‘ಟಿ.ವಿ.ಯಲ್ಲಿ ನೋಡಿದ ಕ್ರೈಂ ಸುದ್ದಿಯನ್ನು ಒಂದು ಕುಟುಂಬದ ಸುತ್ತ ಹೆಣೆದು ಸಿನಿಮಾ ಮಾಡಿದ್ದೇನೆ’ ಎಂದರು ಮುತ್ತು.

‘ನಾನು ತಂದೆಯ ಹೆಸರು ಬಳಸಿ ಮೇಲೆ ಬರುವವನಲ್ಲ. ಕಳೆದ ಎಂಟು ವರ್ಷ ಸತತ ಪ್ರಯತ್ನಿಸಿದ್ದರ ಫಲವಾಗಿ ಈಗ ಈ ಚಿತ್ರದ ನಾಯಕನಾಗಿದ್ದೇನೆ’ ಎಂದ ನಕುಲ್‌, ಒಂದೇ ಉಸಿರಿಗೆ ಇಷ್ಟುದ್ದದ ಡೈಲಾಗ್‌ ಕೂಡ ಹೇಳಿ ತಮ್ಮ ಪ್ರತಿಭೆಯನ್ನು ಸಾಬೀತುಗೊಳಿಸಿದರು.

ಸುಕೃತಾ ದೇಶಪಾಂಡೆ ಈ ಚಿತ್ರದಲ್ಲಿ ತುಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಈ ಚಿತ್ರದಲ್ಲಿ ಪಕ್ಕಾ ನಿಮ್ಮನೆ ಹುಡುಗಿ ಪಾತ್ರ. ಎಲ್ಲರಿಗೂ ಇಷ್ಟವಾಗತ್ತೆ. ಕಾಲೇಜು ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ನಗುತ್ತಲೇ ಹೇಳಿದರು ಅವರು.

ಹಿರಿಯ ನಟ ರಾಕ್‌ಲೈನ್‌ ಸುಧಾಕರ್‌, ‘ಈ ಸಿನಿಮಾ ಚಿತ್ರೀಕರಣ ನಡೆದ ಹಳ್ಳಿಯಲ್ಲಿ ಕರೆಂಟ್‌ ಕೂಡ ಇರಲಿಲ್ಲ. ಅಲ್ಲಿಗೆ ಕರೆದುಕೊಂಡು ಹೋಗಿ ನಿರ್ದೇಶಕರು ನಮ್ಮ ಕರೆಂಟ್‌ ತೆಗೆದರು’ ಎಂದು ಚಟಾಕಿ ಹಾರಿಸಿದರು. ದಿಲ್‌ ರಾಜು ಮತ್ತು ರಾಜೇಶ್‌ ಕಥಾ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಸಿದ್ಧಾರ್ಥ್‌ ಮತ್ತು ಎಂ.ಎಂ. ಮುತ್ತು ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.