ADVERTISEMENT

‘ಅಂಜನಿಪುತ್ರ’ನ ಮಾತು...

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 19:30 IST
Last Updated 21 ಡಿಸೆಂಬರ್ 2017, 19:30 IST
ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್   

ಬಹುನಿರೀಕ್ಷಿತ ಚಿತ್ರ ‘ಅಂಜನಿಪುತ್ರ’ ತೆರೆಗೆ ಬಂದಿದೆ. ಅಭಿಮಾನಿಗಳಿಗೆ ಈ ಸಿನಿಮಾ ಮೂಲಕ ರಸದೌತಣ ಬಡಿಸುವ ಕಾಯಕವನ್ನು ಪುನೀತ್‌ ರಾಜ್‌ಕುಮಾರ್‌ ಆರಂಭಿಸಿಯಾಗಿದೆ. ಈ ವರ್ಷ ‘ರಾಜಕುಮಾರ’ ಎಂಬ ಭರ್ಜರಿ ಸಿನಿಮಾ ನೀಡಿದ್ದ ಪುನೀತ್ ಮೇಲೆ ಅವರ ಅಭಿಮಾನಿಗಳ ನಿರೀಕ್ಷೆ ಕೂಡ ಭರ್ಜರಿಯಾಗಿಯೇ ಇರುವುದು ಅಸಹಜವೇನೂ ಅಲ್ಲ.

ಸಿನಿಮಾ ತೆರೆಗೆ ಬರುವ ತುಸು ಮೊದಲು ಪುನೀತ್ ಅವರು ತಮ್ಮ ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ‘ಅಂಜನಿಪುತ್ರ ಸಿನಿಮಾ ಆ್ಯಕ್ಷನ್ ಆಧರಿಸಿದ್ದು ಎಂಬುದರಲ್ಲಿ ಅನುಮಾನವೇ ಇಲ್ಲ. ಇಂತಹ ಸಿನಿಮಾಕ್ಕೆ ಒಂದು ಒಳ್ಳೆಯ ಜೋಶ್ ಇರುವ ಹೆಸರು ಬೇಕಿತ್ತು. ಬೇರೆ ಬೇರೆ ಶೀರ್ಷಿಕೆಗಳು ಪ್ರಸ್ತಾಪ ಆಗಿಹೋದವು. ಶೀರ್ಷಿಕೆ ಇಲ್ಲದೆಯೇ ಸಿನಿಮಾ ಚಿತ್ರೀಕರಣ ಆರಂಭಿಸುವುದು, ನಂತರ ಶೀರ್ಷಿಕೆ ತೀರ್ಮಾನಿಸುವುದು ಎಂಬ ಮಾತುಕತೆಯೂ ಒಂದು ಹಂತದಲ್ಲಿ ನಡೆದಿತ್ತು. ಸಿನಿಮಾದಲ್ಲಿನ ಜೋಶ್‌ಗೂ ಶೀರ್ಷಿಕೆಗೂ ಹೊಂದಾಣಿಕೆ ಆಗಬೇಕು ಎಂದು ಅಂಜನಿಪುತ್ರ ಎನ್ನುವ ಹೆಸರಿಗೆ ಎಲ್ಲರೂ ಒಪ್ಪಿದರು ಸೂಚಿಸಿದರು’ ಎಂದು ಈ ಸಿನಿಮಾಕ್ಕೆ ಈ ಶೀರ್ಷಿಕೆ ದೊರೆತ ಬಗೆಯನ್ನು ಪುನೀತ್ ವಿವರಿಸಿದರು.

ಇದು ತಮಿಳಿನ ‘ಪೂಜೈ’ ಚಿತ್ರದ ರಿಮೇಕ್. ಆದರೆ ಆ ಸಿನಿಮಾಕ್ಕೂ ಈ ಸಿನಿಮಾಕ್ಕೂ ವ್ಯತ್ಯಾಸ ಇದೆ ಎನ್ನುವುದು ಪುನೀತ್ ಅವರ ಮಾತು. ‘ಈ ಸಿನಿಮಾದ ಶೈಲಿ, ಧಾಟಿ ಬೇರೆಯದೇ ರೀತಿಯಲ್ಲಿ ಇದೆ. ಈ ಸಿನಿಮಾ ಭಾರತೀಯ ಮೌಲ್ಯಗಳು, ಸಂಬಂಧಗಳನ್ನು ಆಧರಿಸಿ ಮುನ್ನಡೆಯುತ್ತದೆ. ಕನ್ನಡದಲ್ಲಿ ಒಂದು ರಿಮೇಕ್ ಸಿನಿಮಾ ಮಾಡುವಾಗ, ಮೂಲ ಸಿನಿಮಾ ವೀಕ್ಷಿಸಿ, ಅಲ್ಲಿನ ನಟ ಮಾಡಿದಂತೆಯೇ ನಾವೂ ಅಭಿನಯಿಸಲು ಆಗದು. ಅಭಿನಯವನ್ನು ನಮ್ಮ ಶೈಲಿಯಲ್ಲಿ ಮಾಡಬೇಕು’ ಎನ್ನುತ್ತಾರೆ ಅವರು. ನಿರ್ದೇಶಕ ಎ. ಹರ್ಷ ಅವರು ‘ಅಂಜನಿಪುತ್ರ’ದ ಮಟ್ಟವನ್ನು ಒಂದು ಹಂತ ಮೇಲಕ್ಕೆ ಏರಿಸಿದ್ದಾರೆ ಎನ್ನುವ ಮೆಚ್ಚುಗೆಯ ಮಾತನ್ನೂ ಪುನೀತ್ ಆಡಿದರು. ‘ನನ್ನ ಮತ್ತು ಹರ್ಷ ನಡುವೆ ವರ್ಷಗಳ ಒಡನಾಟ ಇದೆ. ಹಾಗಾಗಿ, ಸಿನಿಮಾ ಕೆಲಸ ಆರಂಭವಾದ ಮೊದಲ ದಿನದಿಂದಲೂ ನಮ್ಮಿಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇತ್ತು. ನನಗೇನು ಬೇಕೋ ಅದನ್ನು ನಿರ್ದೇಶಕರಲ್ಲಿ ಕೇಳಬಹುದಿತ್ತು’ ಎಂದೂ ಹೇಳಿದರು.

ADVERTISEMENT

‘ಯಾವ ಬಗೆಯ ಸಿನಿಮಾಗಳನ್ನು ನೀವು ಒಪ್ಪಿಕೊಳ್ಳುತ್ತೀರಿ’ ಎಂದು ಪ‍್ರಶ್ನಿಸಿದಾಗ, ‘ನನಗೆ ನನ್ನ ಪಾತ್ರ ಒಪ್ಪಿಗೆ ಆಗಬೇಕು. ನನ್ನನ್ನು ನಂಬಿ ಹಣ ಹೂಡಿಕೆ ಮಾಡುವ ನಿರ್ಮಾಪಕರಿಗೂ ಒಳ್ಳೆಯದಾಗುವಂತೆ ಇರಬೇಕು. ಕಥೆಯಲ್ಲಿ ನನ್ನನ್ನು ನಾನು ಕಾಣುವಂತೆ ಆಗಬೇಕು’ ಎಂದು ಉತ್ತರಿಸಿದರು.

ಪುನೀತ್ ಜೊತೆಗಿನ ಮಾತುಕತೆಯು ‘ರಾಜಕುಮಾರ’ ಸಿನಿಮಾದತ್ತ ಹೊರಳಿತು. ‘ರಾಜಕುಮಾರ ಎನ್ನುವ ಸೂಪರ್ ಹಿಟ್ ಸಿನಿಮಾ ನಿಮ್ಮ ಮೇಲೊಂದು ಭಾರವನ್ನೂ ವರ್ಗಾಯಿಸಿರಬಹುದು. ಅದನ್ನು ಹೇಗೆ ನಿಭಾಯಿಸುವಿರಿ?’ ಎಂದು ಕೇಳಿದಾಗ ‘ಆ ಭಾರವನ್ನು ನಾನು ಹೊತ್ತುಕೊಂಡೇ ಇಲ್ಲ’ ಎಂದು ನಕ್ಕರು ಪುನೀತ್. ‘ನಟನಾಗಿ ಅಂತಹ ಭಾರ ಹೊತ್ತುಕೊಂಡರೆ ನಾನು ನಿರ್ದಿಷ್ಟವಾದ ಒಂದು ಬಗೆಯಲ್ಲೇ ಕಾಣಿಸಿಕೊಳ್ಳಬೇಕು ಎಂಬ ಮಿತಿ ಹಾಕಿಕೊಂಡಂತೆ ಆಗಿಬಿಡುತ್ತದೆ. ಆದರೆ, ಹಿಂದೆ ಮಾಡಿದ್ದಕ್ಕಿಂತ ಒಳ್ಳೆಯ ಸಿನಿಮಾಗಳನ್ನು ಮಾಡುವ ಮೂಲಕ ಆ ಭಾರವನ್ನು ನಿಭಾಯಿಸಬಹುದು’ ಎಂದು ಉತ್ತರಿಸಿದರು.

‘ಅಂಜನಿಪುತ್ರ’ದ ಹೈಲೈಟ್ ಏನು ಎಂದು ಪ್ರಶ್ನಿಸಿದಾಗ, ‘ಸಿನಿಮಾನೇ ಹೈಲೈಟ್’ ಎಂದರು. ‘ನಾನು ಈ ಸಿನಿಮಾ ಮೂಲಕ ರಮ್ಯಕೃಷ್ಣ ಜೊತೆ ಕೆಲಸ ಮಾಡುವ ಅವಕಾಶ ಪಡೆದೆ. ನಾನು ಮೊದಲಿಂದಲೂ ಅವರ ಫ್ಯಾನ್. ಈ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದು ಬಹಳ ಖುಷಿಕೊಟ್ಟಿತು’ ಎಂದರು.

ಖುಷಿ, ವಿಷಾದ

‘2017ನೇ ಇಸವಿ ನಿಮ್ಮ ಪಾಲಿಗೆ ಹೇಗಿತ್ತು?’ ಎಂದು ಪುನೀತ್ ಅವರಲ್ಲಿ ಪ್ರಶ್ನಿಸಿದಾಗ ಖುಷಿಯ ಹಾಗೂ ಬೇಸರದ ವಿಷಯಗಳೆರಡನ್ನೂ ಹೇಳಿದರು. ‘ರಾಜಕುಮಾರ’ ಸಿನಿಮಾ ಬಿಡುಗಡೆ ಆಗಿ, ಶತದಿನಗಳ ದಾಖಲೆ ಬರೆದಿದ್ದನ್ನು ಖುಷಿಯಿಂದ ಹೇಳಿಕೊಂಡರು.

‘ಈ ವರ್ಷ ನಾನು ನನ್ನ ಅಮ್ಮನನ್ನು (ಪಾರ್ವತಮ್ಮ ರಾಜ್‌ಕುಮಾರ್‌) ಕಳೆದುಕೊಂಡೆ. ಅದು ನನ್ನ ಜೀವನದ ಅತಿದೊಡ್ಡ ನಷ್ಟ’ ಎಂದರು, ವಿಷಾದ ಭಾವದಿಂದ.

ತಲೆಕೆಡಿಸಿಕೊಳ್ಳಲಾರೆ...

‘ಈ ಕಾಲಘಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳು ದೊಡ್ಡದಾಗಿ ಬೆಳೆದಿವೆ. ನಾವು ಸಿನಿಮಾ ಬಗ್ಗೆ ಅಥವಾ ಯಾವುದೇ ವಿಷಯದ ಬಗ್ಗೆ ಜನರಿಗೆ ತಿಳಿಸಲು ಇದೊಂದು ಪರಿಣಾಮಕಾರಿ ಮಾಧ್ಯಮ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅಲ್ಲಿ ಬರುವ ಪ್ರತಿಕ್ರಿಯೆಗಳು ಹಾಗೂ ಇನ್ನಿತರ ಸಂಗತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಾರೆ’ ಎನ್ನುತ್ತಾರೆ ಪುನೀತ್.

*

ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆ ವಾಟ್ಸ್‌ಆ್ಯಪ್ ನೋಡಿ, ಅಲ್ಲಿನ ಸಂದೇಶ ಓದುವವರನ್ನು ಎರಡು ಗಂಟೆ ಸಿನಿಮಾ ನೋಡುವಂತೆ ಮಾಡುವುದು ಈಗಿನ ಸಂದರ್ಭದ ಸವಾಲು.

-ಪುನೀತ್ ರಾಜ್‌ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.