ADVERTISEMENT

ಅಂಬರೀಶ(ಷ್) ವಿಶೇಷ

ಗಣೇಶ ವೈದ್ಯ
Published 14 ನವೆಂಬರ್ 2014, 19:30 IST
Last Updated 14 ನವೆಂಬರ್ 2014, 19:30 IST

ಬಿಡುಗಡೆಯ ಹೊಸ್ತಿಲಲ್ಲಿ ನಿಂತು ಭರ್ಜರಿ ಸದ್ದು–ಸುದ್ದಿ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ ‘ಅಂಬರೀಶ’. ಚಿತ್ರದ  ನಾಯಕ ದರ್ಶನ್ ಆದರೂ ರೆಬಲ್‌ಸ್ಟಾರ್ ಅಂಬರೀಷ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅವರ ಅಭಿಮಾನಿಗಳಿಗೆ ಈಗಾಗಲೇ ತಿಳಿದಿರುವ ಸಂಗತಿ. ಚಿತ್ರದ ಹಾಡುಗಳು ಸಾಕಷ್ಟು ಹೆಸರು ಮಾಡಿವೆ.

ಚಿತ್ರದ ಪ್ರಚಾರವೆಂಬಂತೆ ರಾಜ್ಯದಾದ್ಯಂತ ಸಾಕಷ್ಟು ಕಡೆಗಳಲ್ಲಿ ದರ್ಶನ್ ಅವರ ಪೋಸ್ಟರ್‌ಗಳು ರಾರಾಜಿಸುತ್ತಿವೆ. ನಾಯಕ ದರ್ಶನ್ ಪೋಸ್ಟರ್‌ಗಳಲ್ಲಿ ಮಿಂಚುತ್ತಿರುವಂತೆಯೇ ಅಂಬರೀಷ್ ಅವರ ಪೋಸ್ಟರ್‌ಗಳು ಕೂಡ ರಸ್ತೆಯ ಅಕ್ಕಪಕ್ಕ ವಿಜೃಂಭಿಸುತ್ತಿರುವುದು ಸದ್ಯದ ವಿಶೇಷ. ಇದುವರೆಗೂ ಅಂಬರೀಷ್ ಅವರ ಯಾವುದೇ ಸ್ಟಿಲ್‌ಗಳಾಗಲಿ, ಪೋಸ್ಟರ್‌ಗಳಾಗಲಿ ಕಾಣಿಸಿಕೊಂಡಿರಲಿಲ್ಲ. ಈಗ ಚಿತ್ರ ಬಿಡುಗಡೆಗೆ ಸನ್ನಿಹಿತವಾಗುತ್ತಿದ್ದಂತೆ ಅಂಬರೀಷ್ ಅವರ ಮೂರು ವಿಧದ ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಇದೇನಿದು, ಪ್ರಚಾರದ ಗಿಮಿಕ್ಕಾ? ಅಂಬರೀಷ್ ಅವರನ್ನು ಬಳಸಿಕೊಂಡು ಚಿತ್ರಕ್ಕೆ ಹೆಚ್ಚಿನ ಪ್ರಚಾರ ಪಡೆಯುವ ತಂತ್ರವೇ? ‘ಅಂಬರೀಶ’ದಲ್ಲಿ ಅಂಬರೀಷ್ ಅವರ ಪಾತ್ರವೇನು? ನಾಯಕ ದರ್ಶನ್‌ರಷ್ಟೇ ಅಂಬರೀಷ್ ಅವರಿಗೆ ಪ್ರಾಮುಖ್ಯತೆ ಸಿಗಲು ಕಾರಣವೇನು? ಚಿತ್ರದಲ್ಲಿ ಅಂಬರೀಷ್ ಅವರ ಪಾಲೆಷ್ಟು–ದರ್ಶನ್ ಪಾಲೆಷ್ಟು? ಇವೆಲ್ಲ ಕುತೂಹಲ ತಣಿಸುವ ನಿಟ್ಟಿನಲ್ಲಿ ಚಿತ್ರದ ನಿರ್ದೇಶಕ ಮಹೇಶ್‌ ಸುಖಧರೆ ಪ್ರತಿಕ್ರಿಯಿಸಿದ್ದಾರೆ.

‘ಚಿತ್ರದಲ್ಲಿ ಅಂಬರೀಷ್ ಅವರ ಪಾಲೆಷ್ಟು–ದರ್ಶನ್ ಪಾಲೆಷ್ಟು ಎಂದು ನಿರ್ಧರಿಸುವುದಕ್ಕಿಂತ ಅಂಬರೀಷ್ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಷ್ಟೇ ನಿಜ. ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ ಅವರ ಪಾತ್ರದಲ್ಲಿ ಅಂಬರೀಷ್ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಉದ್ದೇಶ ಒಳ್ಳೆಯದಿತ್ತು. ಆದರೆ ಇಂದು ಬೆಂಗಳೂರು ಭೂ ಮಾಫಿಯಾದವರ ಕೈಗೆ ಸಿಕ್ಕಿ ನರಳುತ್ತಿದೆ. ‘ಅಂಬರೀಶ’ ಇಂತಹ ಮಾಫಿಯಾ ವಿರುದ್ಧದ ಹೋರಾಟ’ ಎನ್ನುತ್ತಾರೆ ಅವರು.

ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಂಬರೀಷ್ ಚಿತ್ರದಲ್ಲಿ ಎಷ್ಟು ಅವಧಿಯಲ್ಲಿ ಬಂದುಹೋಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಎಳೆಯಲು ಇಚ್ಛಿಸದ ಮಹೇಶ್, ‘ಚಿತ್ರದುದ್ದಕ್ಕೂ ಇರುವ ಪಾತ್ರವಾದರೆ ನಾನು ಅಂಬರೀಷ್ ಅವರನ್ನು ಮೊದಲಿನಿಂದಲೇ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದೆ. ಆದರೆ ಇದುವರೆಗೂ ಅವರ ಸ್ಟಿಲ್‌ಗಳೆಲ್ಲ ಬಿಡುಗಡೆ ಆಗಿರಲಿಲ್ಲ. ಗೌಪ್ಯವಾಗೇ ಇತ್ತು. ಈಗ ಬಿಡುಗಡೆ ಸಂದರ್ಭದಲ್ಲಿ ಅಂಬರೀಷ್ ಅವರು ಚಿತ್ರದಲ್ಲಿ ಇರುವುದು ಅವರ ಅಭಿಮಾನಿಗಳಿಗೆ ತಲುಪಬೇಕು. ಹೀಗಾಗಿ ಅವರ ಪೋಸ್ಟರ್‌ಗಳು, ಸ್ಟಿಲ್‌ಗಳನ್ನು ಹೊರಹಾಕ್ತಿದ್ದೀವಿ.’

‘ಇದು ಪ್ರಚಾರದ ಗಿಮಿಕ್ ಅಂತೂ ಖಂಡಿತ ಅಲ್ಲ. ಹಾಗೆ ಬಳಸಿಕೊಳ್ಳುವುದಾದರೆ ಆರಂಭದಲ್ಲೇ ಬಳಸಿಕೊಳ್ಳುತ್ತಿದ್ದೆ. ಇಷ್ಟಕ್ಕೂ ನಾನು ಗಿಮಿಕ್ ನಿರ್ದೇಶಕನೂ ಅಲ್ಲ. ಅಂಬರೀಷ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದು ಬಿಟ್ಟರೆ ಈಗ ಚಿತ್ರ ತೆರೆಗೆ ಬರುವ ಸಂದರ್ಭದಲ್ಲೇ ಸ್ಟಿಲ್‌ಗಳು ಕಾಣಿಸಿಕೊಳ್ಳುತ್ತಿರುವುದು.

‘ಅಂಬರೀಶ’ ಚಿತ್ರದಲ್ಲಿ ಅಂಬರೀಷ್ ಪಾತ್ರಕ್ಕೂ ಮಹತ್ವವಿದೆ ಎಂಬುದು ಗೊತ್ತಾಗಬೇಕಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಬಿಟ್ಟಿರುವುದು ಕೇವಲ ಮೂರು ಸ್ಟಿಲ್‌ಗಳು. ಆದರೆ ಈಗ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ನಾವು ಬಿಟ್ಟಿರುವುದಕ್ಕಿಂತಲೂ ಹೆಚ್ಚಾಗಿ ಅಂಬರೀಷ್ ಅವರ ಅಭಿಮಾನಿಗಳೇ ಸಾಕಷ್ಟು ಪೋಸ್ಟರ್‌ಗಳನ್ನು ವೆಬ್‌ಸೈಟ್‌ಗಳಲ್ಲಿ ಹಾಕಿಕೊಳ್ಳುತ್ತಿದ್ದಾರೆ’ ಎಂದು ಸ್ಪಷ್ಟಪಡಿಸುತ್ತಾರೆ ಮಹೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.