ತಂದೆ-ಮಕ್ಕಳು ಒಟ್ಟಿಗೆ ನಮ್ಮ ಚಿತ್ರದ ಕ್ಲೈಮ್ಯಾಕ್ಸ್ ನೋಡಬೇಕು. ನಾನು ಈ ತರಹ ಮಗ ಆಗಬಾರದು ಅಂತ ಮಕ್ಕಳಿಗೆ ಅನ್ನಿಸಿದರೆ, ತಂದೆಗೆ ಎಂಥ ಅಪ್ಪನಯ್ಯ ಎಂಬ ಫೀಲ್ ಆಗುತ್ತದೆ. ಎಲ್ಲರಿಗೂ ಹೀಗೆ ಅನ್ನಿಸಿಬಿಟ್ಟರೆ ನಮ್ಮ ಸಿನಿಮಾ ಯಶಸ್ವಿಯಾದಂತೆಯೇ: ನಿರ್ದೇಶಕ ಎಸ್.ದಿನೇಶ್.
ಇದೊಂದು ಅದ್ಭುತವಾದ ಸಾಂಸಾರಿಕ ಚಿತ್ರ. ನಿರ್ದೇಶಕರು ಜವಾಬ್ದಾರಿ ತಿಳಿದುಕೊಂಡು ಸಿನಿಮಾ ಮಾಡಿದ್ದಾರೆ. ನನ್ನ ಅಣ್ಣ ದೊರೆಸ್ವಾಮಿಯವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಈ ಚಿತ್ರ ನಿರ್ಮಾಣಕ್ಕೆ ಹಾಕಿದ್ದಾರೆ. ರಮೇಶ್ ಭಟ್ ಸರ್ ನನ್ನ ಅಭಿನಯ ತಿದ್ದಿದರು. ಅವರಿಗೆ ಥ್ಯಾಂಕ್ಸ್: ನಾಯಕ ಪ್ರಭು.
ನಾನೊಬ್ಬ ರೈತನ ಮಗ. ಸಿನಿಮಾ ಗೊತ್ತಿಲ್ಲ. ಬೀದಿ ನಾಟಕ ಮಾಡಿಕೊಂಡಿದ್ದ ತಮ್ಮ ಆಸೆಪಟ್ಟ. ಅವನ ಸಿನಿಮಾ ಹುಚ್ಚು ಕಂಡು ನಾನೂ ಇಂಡಸ್ಟ್ರಿಗೆ ಬಂದೆ. ವಿಭಿನ್ನವಾದ, ಒಳ್ಳೆ ಸಿನಿಮಾ ಕೊಡೋಣ ಅನ್ನೋದಷ್ಟೇ ನನ್ನ ಆಸೆ. ಮಿಕ್ಕಿದ್ದು ದೈವೇಚ್ಛೆ: ನಿರ್ಮಾಪಕ ಜಿ.ದೊರೆಸ್ವಾಮಿ ರಾಯಸಂದ್ರ.
ಇದೇ ವಾರ ತೆರೆಕಾಣಲಿರುವ ‘ಉಯ್ಯಾಲೆ’ ಚಿತ್ರತಂಡ ಹೀಗೆ ಅತಿ ಭಾವುಕತೆಯಲ್ಲಿ ಮಾತನಾಡುತ್ತಿತ್ತು. ರಾಮೋಜಿ ರಾವ್ ಫಿಲ್ಮ್‌ಸಿಟಿ, ಚಾಲುಕುಡಿ ಫಾಲ್ಸ್, ಗೋಲ್ಕೊಂಡ, ಮಂಡ್ಯ ಮೊದಲಾದ ಕಡೆ ಚಿತ್ರೀಕರಣ ನಡೆಸಿರುವ ನಿರ್ದೇಶಕ ದಿನೇಶ್ ಅವರಿಗೀಗ ಪರೀಕ್ಷೆ ಬರೆದಿರುವ ಅನುಭವ. 18ಕ್ಕೆ ರಿಸಲ್ಟ್ ಎಂದು ಅವರು ಗಡ್ಡ ನೀವಿಕೊಂಡರು. ನಾಯಕಿ ಶಿಲ್ಪಾಗೆ ತಾನು ಹೀರೋಯಿನ್ ಆಗಿರುವ ಸಂಭ್ರಮ. ಅವಕಾಶ ಕೊಟ್ಟವರಿಗೆಲ್ಲಾ ಅವರು ಧನ್ಯವಾದದ ಮಳೆಗರೆದರು.
ರಮೇಶ್ ಭಟ್ ಈ ಚಿತ್ರದಲ್ಲಿ ತಂದೆಯ ಪಾತ್ರ ವಹಿಸಿದ್ದಾರೆ. ನಿರ್ದೇಶಕರ ಪ್ರಕಾರ ಖಾಲಿ ಬಾಟ್ಲಿ, ಸೀಸೆ ಮಾರುವ ಪಾತ್ರದ ಪರಕಾಯ ಪ್ರವೇಶ ಅವರಿಂದ ಸಾಧ್ಯವಾಗಿದೆ. ತಮಗೆ ನಿರ್ದೇಶಕರು ಕಥೆ ಹೇಳಿದ ರೀತಿ, ಆಮೇಲೆ ಶ್ರದ್ಧೆಯಿಂದ ಕೆಲಸ ಮಾಡಿದ ರೀತಿ ರಮೇಶ್ ಭಟ್‌ಗೆ ಹಿಡಿಸಿದೆ.
ಎಂ.ಆರ್.ಸೀನು ಛಾಯಾಗ್ರಹಣವಿರುವ ‘ಉಯ್ಯಾಲೆ’ಯಲ್ಲಿ ಏಳು ಹಾಡುಗಳಿವೆ. ಡಿಜೆ ರಿಕ್ಕಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎ.ಆರ್.ರೆಹಮಾನ್, ಹಂಸಲೇಖ, ಮಣಿಕಾಂತ್ ಕದ್ರಿ ಮೊದಲಾದವರಿಗೆ ರಿದಮಿಸ್ಟ್ ಆಗಿ ಕೆಲಸ ಮಾಡಿರುವ ರಿಕ್ಕಿ ಅನುಭವದ ಬಗ್ಗೆ ನಿರ್ದೇಶಕರಿಗೆ ಹೆಮ್ಮೆ. ಮೊದಲೇ ಸಿದ್ಧವಿರುವ ವಾದ್ಯಸಂಗೀತವನ್ನು ಬಳಸದೆ, ‘ಲೈವ್ ಇನ್‌ಸ್ಟ್ರುಮೆಂಟ್ಸ್’ ಉಪಯೋಗಿಸಿ ರಿಕ್ಕಿ ಸಂಗೀತ ಸಂಯೋಜಿಸಿರುವುದು ನಿರ್ದೇಶಕರಿಗೆ ವಿಶೇಷವಾಗಿ ಕಂಡಿದೆ. ಚೆನ್ನೈನ ಎ.ಆರ್.ರೆಹಮಾನ್ ಸ್ಟುಡಿಯೋದಲ್ಲಿ 40 ದಿನ ರೀರೆಕಾರ್ಡಿಂಗ್ ಮಾಡಿರುವುದರಿಂದ ಗುಣಮಟ್ಟದ ವಿಷಯದಲ್ಲಿ ರಾಜಿಯಾಗಿಲ್ಲ ಎನ್ನುವ ದಿನೇಶ್, ಇದು ಸಂಗೀತಮಯ ಚಿತ್ರ ಎಂದು ಮಾತಿಗೆ ಅಡಿಗೆರೆ ಎಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.