ADVERTISEMENT

ಅಮೀರ್ ಎಂಬ ಚುಂಬಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:30 IST
Last Updated 3 ಫೆಬ್ರುವರಿ 2011, 18:30 IST
ಅಮೀರ್ ಎಂಬ ಚುಂಬಕ
ಅಮೀರ್ ಎಂಬ ಚುಂಬಕ   

2010ರಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ಬಾಲಿವುಡ್ ವರ್ಷಾರಂಭದಲ್ಲೇ ಚೇತರಿಸಿಕೊಂಡಂತೆ ಕಾಣುತ್ತದೆ. ‘ನೋ ಒನ್ ಕಿಲ್ಡ್ ಜೆಸ್ಸಿಕಾ’, ‘ಯಮ್ಲಾ ಪಗ್ಲಾ ದಿವಾನಾ’ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದನ್ನು ಗಳಿಕೆಯ ಮೊತ್ತವೇ ಹೇಳುತ್ತದೆ. ಈಗಿನ ಸರದಿ ‘ದೋಬಿ ಘಾಟ್’ನದ್ದು.

ಅಮೀರ್ ಖಾನ್ ಪತ್ನಿ ಕಿರಣ್ ರಾವ್ ನಿರ್ದೇಶನ ಎಂಬುದಕ್ಕಿಂತ ಹೆಚ್ಚಾಗಿ ‘ಬ್ರಾಂಡ್ ಅಮೀರ್’ ನಟಿಸಿದ್ದಾನೆ ಎಂಬುದೇ ಚಿತ್ರದ ಮೊದಲ ವಾರದ ಗಳಿಕೆಗೆ ಕಾರಣ ಎಂಬ ವಿಶ್ಲೇಷಣೆ ಕೇಳಿ ಬರುತ್ತದೆ. ಆತನ ಬ್ಯಾನರ್‌ನಲ್ಲಿ ನಿರ್ಮಾಣಗೊಂಡ ‘ಜಾನೆ ತು ಯಾ ಜಾನೇ ನ’ ಹಾಗೂ ‘ಪೀಪ್ಲಿ ಲೈವ್’ನಲ್ಲಿ ಅಮೀರ್ ನಟಿಸಿರಲಿಲ್ಲ. ಆದರೂ ಈ ಎರಡೂ ಚಿತ್ರಗಳು ಯಶಸ್ವಿಯಾದವು. ಅದಕ್ಕೆ ಕಾರಣ ಬ್ರ್ಯಾಂಡ್ ಅಮೀರ್. ನಿರ್ದೇಶನ, ನಟನೆ, ನಿರ್ಮಾಣ ಎಂದೆಲ್ಲ ಏಕವ್ಯಕ್ತಿ ಸೈನ್ಯದಂತೆ ದುಡಿಯಬಲ್ಲ ಅಮೀರ್ ತನ್ನ ಸಿನಿಮಾವನ್ನು ಚಿನ್ನದ ಮೊಟ್ಟೆಯಿಡುವ ಕೋಳಿಯನ್ನಾಗಿ ಬದಲಾಯಿಸುವ ಚಾಣಾಕ್ಷ. ಇಲ್ಲದಿದ್ದರೆ 2010ರ ಸಾಲು ಸಾಲು ಸಿನಿಮಾಗಳ ಸೋಲಿನ ಮಧ್ಯೆ ‘ಪೀಪ್ಲಿ ಲೈವ್’ ಗಳಿಕೆಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಿತ್ತೇ?

ಈಗ ‘ದೋಬಿ ಘಾಟ್’ ಕೂಡಾ ಅಷ್ಟೆ. ಸಿನಿಮಾ ಮಂದಿರಗಳಿಗೆ ಬಿಡುಗಡೆಗಿಂತ ಮೊದಲೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ಭಾರತದಲ್ಲಿ ಬಿಡುಗಡೆಯಾಗುವ 2-3 ತಿಂಗಳುಗಳ ಮೊದಲೇ ಪ್ರಚಾರ ಆರಂಭವಾಗಿತ್ತು. ಇದು ಪತ್ನಿ ಕಿರಣ್ ರಾವ್ ಚಿತ್ರ ಎಂದೇ ಅಮೀರ್ ಬಿಂಬಿಸಿಕೊಳ್ಳುತ್ತಾನೆ ಎಂಬ ನಿರೀಕ್ಷೆ ಮಾತ್ರ ಹುಸಿಯಾಯಿತು.

ಆತನದ್ದು ಪ್ರಚಾರತಂತ್ರದಲ್ಲಿ ಪಳಗಿದ ಕೈ. ‘ಚಿತ್ರ ನೋಡಲಿಕ್ಕೆ ಬನ್ನಿ ಎಂದು ಹೇಳುವುದಿಲ್ಲ. ಬದಲಾಗಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಈಗಲೇ ಎಚ್ಚರಿಕೆ ಕೊಡುತ್ತಿದ್ದೇನೆ. ಅಮೀರ್ ನಟಿಸಿದ್ದಾನೆ ಎಂದು ನೋಡಲು ಬರಬೇಡಿ, ಆಸಕ್ತಿ ಮೂಡಿದರೆ ನೋಡಿ’ ಎಂದು ಭಾರಿ ಪಾಲಿಷ್ ಮಾಡಿದ ಮಾತುಗಳನ್ನು ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದ.

‘ದೋಬಿ ಘಾಟ್’ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಹಿಡಿಸುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಆತ ಈ ಮಾತುಗಳನ್ನು ಹೇಳಿದ್ದ. ವಿಮರ್ಶಕರು ಮೆಚ್ಚಬಹುದಷ್ಟೇ ಎಂಬುದು ಆತನ ಇರಾದೆ. ಹೀಗಾಗಿ ಮೊದಲ ವಾರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರ ಎರಡನೇ ವಾರ ಬಿಕೋ ಹೊಡೆಯಲು ಶುರು ಮಾಡಿದೆ. ಅಮೀರ್ ಇಂತಹ ಸಿನಿಮಾ ಯಾಕೆ ತಯಾರಿಸಿದ, ಯಾಕೆ ನಟಿಸಿದ ಎಂಬ ಪ್ರಶ್ನೆಗಳು ಬಾಲಿವುಡ್‌ನಲ್ಲಿ ಸುತ್ತಾಡುತ್ತಿವೆ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ತಯಾರಿಸಿದ್ದಕ್ಕೆ ಆತ ಬಚಾವ್. ಹಾಕಿದ್ದು ಮೊದಲ ವಾರದ ಗಳಿಕೆಯಲ್ಲೇ ವಾಪಸ್ಸು ಬಂದುಬಿಟ್ಟಿದೆ.

ಈಗ ಬ್ರಾಂಡ್ ಇಮೇಜ್ ಕಾಯ್ದುಕೊಳ್ಳಲು ‘ಡೆಲ್ಲಿ ಬೆಲ್ಲಿ’ ಮೊರೆ ಹೋಗಬೇಕಾಗಿದೆ. ಇಮ್ರಾನ್ ಖಾನ್ ನಟಿಸಿರುವ ಚಿತ್ರದ ಬಿಡುಗಡೆ ಈಗಾಗಲೇ ಸಾಕಷ್ಟು ಮುಂದೆ ಹೋಗಿದ್ದು ಅಮೀರ್ ಆ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.