ADVERTISEMENT

ಆರಕ್ಷಕನ ಸಿಕ್ಕಾಪಟ್ಟೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

`ಶೂಟಿಂಗ್ ನಡೆದ ಅಷ್ಟೂ ದಿನ ಅನುಮಾನದಲ್ಲಿಯೇ ಕಳೆದಿದ್ದೆ. ಸಿನಿಮಾ ನೋಡಿದಾಗ ನಿರ್ದೇಶಕರ ಬಗ್ಗೆ ಇದ್ದ ಗೌರವ ಇಮ್ಮಡಿಸಿತು~ ಎಂದರು ಉಪೇಂದ್ರ. `ಆರಕ್ಷಕ~ ಚಿತ್ರ ಜ.26ರಂದು ಬಿಡುಗಡೆಯಾಗುತ್ತದೆ ಎಂದು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ಸಿನಿಮಾ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

`ಈ ಹಿಂದೆ `ಶ್!~ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಸಮವಸ್ತ್ರ ತೊಟ್ಟಿದ್ದೆ. ಹದಿನೈದು ವರ್ಷಗಳ ನಂತರ `ಆರಕ್ಷಕ~ ಸಿನಿಮಾಗಾಗಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿರುವೆ.

ಚಿತ್ರದಲ್ಲಿ ತಾನು ಹೇಗೆ ಕಂಡರೂ ಸರಿಯೇ. ಅಭಿನಯವೇ ಮುಖ್ಯ ಎಂದುಕೊಂಡು ಕೂದಲಿಗೆ ಕತ್ತರಿ ಹಾಕಿಕೊಂಡೆ. ಅಲ್ಲಿ ಉಪೇಂದ್ರ ಕಾಣಲ್ಲ. ಒಬ್ಬ ಪೊಲೀಸ್ ಅಧಿಕಾರಿ ಕಾಣ್ತಾನೆ. ಚಿತ್ರದಲ್ಲಿ ಏನೇ ಚೆನ್ನಾಗಿದ್ದರೂ ಅದಕ್ಕೆ ಕಾರಣ ನಿರ್ದೇಶಕ ಪಿ.ವಾಸು ಅವರು.

`ಆರಕ್ಷಕ~ ಸಿನಿಮಾದ ಕೀಲಿಕೈ ಆದಿ ಲೋಕೇಶ್. ರಾಗಿಣಿ ಅವರ ನೀರೊಳಗಿನ ಹಾಡು ಅದ್ಭುತವಾಗಿದೆ. ಸಿನಿಮಾ ಆರಂಭಕ್ಕೆ ಮೊದಲು ನಿರ್ಮಾಪಕರು ಹೋಮ ಮಾಡಿಸಿದ್ದು ಚಿತ್ರೀಕರಣಕ್ಕೆ ಸಹಕಾರಿಯಾಯಿತು~ ಎಂದು ನಗೆಯೊಂದಿಗೆ ಮಾತು ಮುಕ್ತಾಯಗೊಳಿಸಿದರು.

ನಿರ್ಮಾಪಕ ಕೃಷ್ಣ ಪ್ರಜ್ವಲ್ ಅವರಿಗೆ ಚಿತ್ರದಲ್ಲಾಗುವ ಒಂದು ಕೊಲೆಯ ಕಾರಣಕೊಟ್ಟು ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಕೊಟ್ಟಿರುವುದು ಸರಿ ಕಂಡಿಲ್ಲ. `ಅದೇನೆ ಇರಲಿ ಒಟ್ಟಾರೆ ಸಿನಿಮಾ ಚೆನ್ನಾಗಿದೆ. ತಮಗೆ ಆರಂಭದಲ್ಲಿ ಹೇಳಿದ್ದ ಕತೆಯನ್ನೇ ವಾಸು ಸಿನಿಮಾ ಮಾಡಿ ಕೊಟ್ಟಿದ್ದಾರೆ. ರಾಗಿಣಿ ಮುದ್ದಾಗಿ ಕಾಣ್ತಾರೆ. ಉಪೇಂದ್ರ ತುಂಬಾ ಕಷ್ಟಪಟ್ಟು ನಟಿಸಿದ್ದಾರೆ. ಆದಿ ಲೋಕೇಶ್ ನಟನೆಯೂ ಚೆನ್ನಾಗಿದೆ~ ಎಂದು ಎಲ್ಲರನ್ನೂ ಮೆಚ್ಚಿಕೊಂಡರು.

ಆದಿ ಲೋಕೇಶ್ ಮಾತಿಗೆ ಮೊದಲೇ ತಮ್ಮ ಪಾತ್ರದ ವಿವರಣೆ ಕೇಳಬೇಡಿ ಎಂದು ಹೇಳಿ `ನನ್ನ ವೃತ್ತಿ ಬದುಕಿನಲ್ಲಿಯೇ ಇಂಥ ವಿಭಿನ್ನ ಪಾತ್ರದಲ್ಲಿ ನಟಿಸಿಲ್ಲ. ನನ್ನನ್ನು ಇಂಥ ಪಾತ್ರದಲ್ಲಿ ಯಾರೂ ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ~ ಎಂದು ಹೇಳಿ ಕುತೂಹಲ ಹುಟ್ಟಿಸಿದರು.
 
`ಉಪೇಂದ್ರ ಯಾವತ್ತೂ ಸಿನಿಮಾ ಬಗ್ಗೆ ನೂರಕ್ಕೆ ನೂರರಷ್ಟು ಸೂಪರ್ ಎಂದು ಹೇಳಲ್ಲ. ಆದರೆ ಈ ಸಿನಿಮಾ ಬಗ್ಗೆ ಹೇಳಿದ್ದಾರೆ ಅಂದಮೇಲೆ ಸಿನಿಮಾ ಅದ್ಭುತವಾಗಿದೆ ಎಂದೇ ಅರ್ಥ~ ಎನ್ನುತ್ತಾ ಖುಷಿಪಟ್ಟವರು ಸಂಗೀತ ನಿರ್ದೇಶಕ ಗುರುಕಿರಣ್.ನಾಯಕಿ ರಾಗಿಣಿ, ಗಣರಾಜ್ಯದ ದಿನ ಚಿತ್ರ ಬಿಡುಗಡೆಯಾಗುತ್ತಿರುವುದು ಶುಭ ಸಂಕೇತ ಎನ್ನುತ್ತಾ, `ನನಗೆ ಇಷ್ಟು ಬೇಗ ಇಂಥ ಪ್ರಯೋಗಾತ್ಮಕ ಪಾತ್ರ ಸಿಕ್ಕಿದ್ದು ಅದೃಷ್ಟ~ ಎಂದು ಹೇಳಿ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.