ADVERTISEMENT

ಇಂದು ಅಪ್ಪು ವೆಂಕಟೇಶ್ ಡೇ!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಅದೊಂದು ದಿನ ರಾಜ್‌ಕುಮಾರ್ ಎದುರು ಕಣ್ಣೀರಿಟ್ಟಾಗ, ‘ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುವೆ’ ಎಂದು ಅವರು ಆಶೀರ್ವದಿಸಿದ್ದರು. ತಮ್ಮನ್ನು ಅದೇ ಕಾಪಾಡಬೇಕು ಎನ್ನುತ್ತಾ ಅಪ್ಪು ವೆಂಕಟೇಶ್ ಭಾವುಕರಾದರು. ಅವರ ಅಭಿನಯದ ‘1ಡೇ’ ಚಿತ್ರ ಈ ವಾರ ತೆರೆಕಾಣುತ್ತಿದೆ.

ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕರಿಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ತರಬೇತಿ ನೀಡಿರುವ ವೆಂಕಟೇಶ್ ಖುದ್ದು ‘ಸಿಕ್ಸ್ ಪ್ಯಾಕ್’ ದೇಹ ಇರುವ ವ್ಯಕ್ತಿ. ನಿರ್ಮಾಪಕ ಕೃಷ್ಣಸ್ವಾಮಿ ಮನಸ್ಸು ಮಾಡಿರುವುದರಿಂದ ಅವರಿಗೆ ನಾಯಕನಾಗುವ ಅವಕಾಶ ಸಿಕ್ಕಿದ್ದು. ಈ ಮೊದಲು ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ ಅನುಭವ ಪಡೆದುಕೊಂಡಿರುವ ಅವರಿಗೆ ಈಗ ಜನರಿಂದ ಹೇಗೆ ಪ್ರತಿಕ್ರಿಯೆ ಸಿಕ್ಕೀತೆಂಬ ಕುತೂಹಲ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಘಟನಾವಳಿಗಳನ್ನಿಟ್ಟುಕೊಂಡು ‘1ಡೇ’ ಸಿದ್ಧಗೊಂಡಿದೆ. ಚಿತ್ರದ ನಿರ್ದೇಶಕ ನವೀನ್. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೂ ಅವರದ್ದೇ. ವಿಜಯ ಭಾರತಿ ಸಂಗೀತ ಸಂಯೋಜನೆ ಮಾಡಿದ್ದು, ಮಹೇಶ್ ಕ್ಯಾಮೆರಾ ಚಳಕ ತೋರಿದ್ದಾರೆ. ಪ್ರಿಯಾ, ಮೋಹನ್‌ಜುನೇಜಾ, ಬಿರಾದರ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಕಷ್ಟದ ಸಾಹಸಗಳನ್ನು ವೆಂಕಟೇಶ್ ನಿಭಾಯಿಸಿರುವ ರೀತಿಯನ್ನು ಡಿಫರೆಂಟ್ ಡ್ಯಾನಿ ಬಣ್ಣಿಸಿದರು. ಒಂದೇ ದಿನದಲ್ಲಿ ನಾಯಕನೊಬ್ಬ ದೊಡ್ಡ ಗುರಿಯನ್ನು ಹೇಗೆ ಸಾಧಿಸುತ್ತಾನೆ ಎಂಬ ಕಥೆಯನ್ನು ‘1ಡೇ’ ಹೇಳುತ್ತದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.