ADVERTISEMENT

ಈ ಸಮಯ ಅಶೋಕಮಯ...

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST
ಈ ಸಮಯ ಅಶೋಕಮಯ...
ಈ ಸಮಯ ಅಶೋಕಮಯ...   

ನಿರ್ದೇಶಕ ಅಶೋಕ್ ಪಾಟೀಲ್ ಅವರ `ಶಾಪ~ ವರವಾಗಿ `ಜೋಕ್‌ಫಾಲ್ಸ್~ ಆಗಿ ಸುರಿದು ಎರಡು ವರ್ಷಗಳಾದವು. ಈಗ ಮತ್ತೆ ಅವರಿಗೆ ಮೂರನೇ ಸಿನಿಮಾದ ಸಮಯ ಅದು `9 ಟು 12~ ಮುಂದಿನ ತಿಂಗಳೊಪ್ಪತ್ತಿಗೆ ಈ ಸಿನಿಮಾ ತೆರೆಗೆ ಬರಲಿದೆ ಅದಕ್ಕಿಂತ ಮುಂಚೆ ಒಪ್ಪಿಸಿಕೊಳ್ಳಿ ಈ ಚಿತ್ರದ ಹಾಡುಗಳ ಸೀಡಿ ಅಂತ ಹೇಳೋದಕ್ಕೆ ಅಮೆರಿಕದಿಂದ ಅಶೋಕ್ ಹಾರಿಬಂದಿದ್ದರು.

`ಚಿತ್ರ ತಯಾರಾಗುತ್ತಿದ್ದಂತೆಯೇ ಸ್ನೇಹಿತರನ್ನು ಸೇರಿಸಿ ಸ್ಕ್ರೀನಿಂಗ್ ಇಟ್ಟುಕೊಳ್ಳುವುದು ನನ್ನ ವಾಡಿಕೆ. ಹಾಗೇ ಹಾಲಿವುಡ್‌ನ ಹದಿನೈದು ಇಪ್ಪತ್ತು ಸಿನಿಮಾ ಪರಿಣತರಿಗೆ ನನ್ನ ಹಿಂದಿನ ಎರಡು ಚಿತ್ರಗಳನ್ನೂ ತೋರಿಸಿದ್ದೆ. ಅವರು ಹೇಳಿದ ಕರೆಕ್ಷನ್ಸ್ ಅಳವಡಿಸಿಕೊಂಡೆ. ನಿಮ್ಮ ಚಿತ್ರಗಳು ಚೆನ್ನಾಗಿವೆ. ನಿಮ್ಮ ಮುಂದಿನ ಸಿನೆಮಾ ಅಮೇರಿಕನೈಸ್ ಮಾಡುವಂತಿದ್ದರೆ ಕನ್ನಡದಿಂದ ಹಾಲಿವುಡ್‌ಗೆ ರಿಮೇಕ್ ಮಾಡೋಣ ಎನ್ನುವ ಮೆಚ್ಚುಗೆ ಮಾತನಾಡಿದ್ದರು. ಈಗ `9 ಟು 12~ ಚಿತ್ರವನ್ನೂ ಹಾಲಿವುಡ್‌ನ ಅದೇ ಸ್ನೇಹಿತರಿಗೆ ತೋರಿಸಿದೆ. ಅವರು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಚರ್ಚಿಸಿದರು. ಅವರ ಸಲಹೆಯನ್ನು ಪರಿಗಣಿಸಿ ಮುಂದುವರಿಯುತ್ತಿದ್ದೇನೆ~ ಎಂದು ಅಶೋಕ್ ಅಮೆರಿಕದ ನೆನಪುಗಳನ್ನು ಮೆಲುಕು ಹಾಕಿದರು.

`ಚಿತ್ರದ ಸಂಗೀತ ಸಾಯಿ ಕಾರ್ತಿಕ್ ಅವರದು. `ನನ್ನಂತಾರೆ ಬೆಂಗಳೂರ್...~ ಮತ್ತು `ಆಕಾಶ...~ ಎರಡೇ ಎರಡು ಹಾಡುಗಳಿವೆ. ಅನಗತ್ಯವಾಗಿ ಮನೋರಂಜನೆಯ ಉದ್ದೇಶ ಇಟ್ಟುಕೊಂಡು ಐಟಮ್, ಕಾಮಿಡಿ ಅಂತೆಲ್ಲಾ ಸಾಂಗ್ಸ್ ತುರುಕಿಲ್ಲ~ ಅಂತ ಖಂಡತುಂಡ ಹೇಳಿದರು ಅಶೋಕ್.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, `ಅಶೋಕ್ ಮತ್ತು ನಾನು `ಒಳ್ಳೆಯ  ಚಿತ್ರ~ ಅನ್ನೋ ಬಗ್ಗೆ ಖುದ್ದಾಗಿ, ಈಮೇಲ್‌ಗಳ ಮೂಲಕ ಸಾಕಷ್ಟು ಬಾರಿ ಚರ್ಚಿಸುತ್ತ ಬಂದಿದ್ದೇವೆ. ನನ್ನ ಪ್ರತಿಯೊಂದು ಚಿತ್ರಗಳ ಸ್ಕ್ರೀನ್‌ಪ್ಲೇ ಬಗ್ಗೆ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಶೋಕ್ ಒಳ್ಳೇ ನಿರ್ದೇಶಕ. ಅವಸರಿಸದೇ ಪರಾಮರ್ಶೆ ಮಾಡಿಕೊಂಡು ಎರಡು ವರ್ಷಗಳ ನಂತರ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನನ್ನದೂ ಒಂದು ಪಾತ್ರವಿದೆ. ನಟಿಸಲೇಬೇಕು ಎಂಬ ಒತ್ತಾಯಕ್ಕೆ ಆತುಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ನಟನೆ ನನಗೆ ಅಷ್ಟೊಂದು ಕರಗತವಾಗಿಲ್ಲ. ಆದರೂ `ಮಿಲನ~ದ ನಂತರ ಪೋಷಕ ಪಾತ್ರಗಳಿಗೆ ಸಿಕ್ಕಾಪಟ್ಟೆ ಅವಕಾಶಗಳು ಬಂದ್ವು. ಸದ್ಯ ಆ ಅಪಾಯದಿಂದ ತಪ್ಪಿಸಿಕೊಂಡಿದ್ದೇನೆ. ಅಶೋಕ್ ಅಕಡೆಮಿಕ್ ವರ್ಕ್ ನನಗೆ ಇಷ್ಟವಾಗತ್ತೆ. ಚಿಮ್ಮುಗೋಲಾಗಿ ಈ ಚಿತ್ರ ಬರಲಿ~ ಅಂತ ಹಾರೈಸಿದರು.

ನಾಯಕ ನಟ ಕಿಶೋರ್, `ಹೊಸ ಸಿನಿಮಾದ ಬಗ್ಗೆ ಮಾತನಾಡಬೇಕು ಅಂದ್ರೆ ಅವರು ಸೇಲೇಬಲ್ ಮಾತುಗಳೇ ಆಗಿರಬೇಕು. ಆದರೆ ನನಗೆ ಇವತ್ತು ಸೇಲೆಬಲ್‌ಗಿಂತ ಮನಸಿನ ಮಾತುಗಳನ್ನೇ ಆಡಬೇಕು ಅಂತ ಅನ್ನಸ್ತಿದೆ. ಅಶೋಕ್ ಸ್ವಚ್ಛ ಸಿನಿಮಾ ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದಕ್ಕೆ ಖುಷಿ ಇದೆ. ಈಗಷ್ಟೇ ಸ್ಕ್ರೀನ್ ಮೇಲೆ ಹಾಡು ನೋಡ್ತಾ ಆ ಚಿತ್ರದ ಸೀಕ್ವೆನ್ಸ್ ನೆನಪಾಗಿ ಅಳು ಬಂತು... ಆದ್ರೂ ತಡೆದುಕೊಂಡೆ~ ಅಂತ ಮನದಾಳ ಬಿಚ್ಚಿಟ್ಟರು.

`ಈಗ ಇಲ್ಲಿ ಓಡ್ತಿರೋ ಸಿನಿಮಾಗಳೆಲ್ಲಾ ರೀಮೇಕ್. ತಮಿಳು ಸಿನಿಮಾಗಳಲ್ಲಿ ಮಾಡುವಾಗ ಅಲ್ಲಿ, ನಿಮ್ಮಲ್ಲಿ ರೀಮೇಕ್ ಮಾಡೋದಕ್ಕೆ ಒಳ್ಳೇ ಚಿತ್ರಗಳು ಇವೆಯಾ? ಅಂತ ಕೇಳೋವ್ರ. ಆಗ ನಮ್ಮಲ್ಲಿ ಓಡ್ತಿರೋವೆಲ್ಲಾ ನಿಮ್ಮ ಸಿನಿಮಾಗಳೇ ಅಂತ ವಿಧಿ ಇಲ್ಲದೆ ಹೇಳಬೇಕಾಗ್ತಿತ್ತು. ಆದರೆ ಇದು ವ್ಯಾಪಾರಕ್ಕಾಗಿ ಮಾಡಿದ ಸಿನಿಮಾ ಖಂಡಿತ ಅಲ್ಲ~ ಎಂದರು ಕಿಶೋರ್.

ಚಿತ್ರದ ಛಾಯಾಗ್ರಾಹಕ ನಿರಂಜನ ಬಾಬು, `ಕನ್ನಡಕ್ಕೆ ಇಂಥ ನಿರ್ದೇಶಕರು ಬೇಕು~ ಅಂತ ಒಂದೇ ಶಾಟ್‌ನಲ್ಲಿ ಮಾತು ಮುಗಿಸಿದರು. ಶಾಸಕ ದಯಾನಂದ ರೆಡ್ಡಿ, ನಟ-ನಿರ್ದೇಶಕ ಬಿ.ಸಿ.ಪಾಟೀಲ್, ಅಶೋಕ್ ಅವರ ಕನ್ನಡ-ಸಿನಿಮಾ ಪ್ರೀತಿ ಬಗ್ಗೆ ಕೊಂಡಾಡಿ ಮಾತು ಮುಗಿಸುವ ಹೊತ್ತಿಗೆ, `ಸರ್ ಸರ್...~ ಎಂದು ಬಲಗೈ ಮೇಲೆತ್ತಿ ಕೃಷ್ಣವರ್ಣದ ದಿರಿಸಿನೊಳಗಿನಿಂದ ಕೂಗಿದ್ದು ಈ ಚಿತ್ರದ ನಾಯಕಿ ಕೃಷ್ಣಸುಂದರಿ ಸ್ಮಿತಾ. `ನನ್ನ ಹೆಸರು ನಿವೇದಿತಾ ಅಂತ ಬದಲಾಯಿಸಿಕೊಂಡಿದ್ದೀನಿ. ಇನ್ನು ಮುಂದೆ ನೀವೆಲ್ಲ ನನ್ನನ್ನು ನಿವೇದಿತಾ ಅಂತಾನೇ ಕರೀಬೇಕು. ಬರೀಬೇಕು~ ಅಂತ ಘೋಷಿಸಿದರು. `ಅಫಿಡವಿಟ್ ಅಫಿಡವಿಟ್~ ಅನ್ನುತ್ತಾ ಪತ್ರಕರ್ತರು ನಕ್ಕರು. `ಕೃಷ್ಣೆ~ಯೂ ಗುಳಿ ತಂದುಕೊಂಡಳು ಕೆನ್ನೆಮೇಲೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.