ADVERTISEMENT

ಎಲ್ಲೆಲ್ಲೂ ಸಡಗರವೇ...

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ತ್ತ ನೋಡಿದರೂ ಸಂಭ್ರಮದ ತುಳುಕಾಟ. ನಗುಮೊಗ ಹೊತ್ತು ಬಂದ ಸಾಲು ಸಾಲು ಮಂದಿ ಸಡಗರವೇ ಮೈದಾಳಿದಂತೆ ಕಾಣಿಸುತ್ತಿದ್ದರು. ನಾಯಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭಾಶಯಗಳ ಸುರಿಮಳೆ. ಅದು ಶಂಕರ್ ಆರ್ಯನ್ ಅಭಿನಯದ ‘ಸಡಗರ’ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ.

ಚಿತ್ರದ ಹೆಸರಿಗೆ ತಕ್ಕಂತೆ ಕಾರ್ಯಕ್ರಮವೂ ಸಡಗರ–ಸಂಭ್ರಮದಿಂದಲೇ ನಡೆಯಿತು. ಚಿತ್ರದ ಪ್ರತಿ ಹಾಡುಗಳನ್ನು ಒಬ್ಬೊಬ್ಬ ಅತಿಥಿ ಅನಾವರಣಗೊಳಿಸಿದರು. ಸಂಗೀತ ನಿರ್ದೇಶಕ ವಿ. ಶ್ರೀಧರ್ ಅವರಿಗೆ ಚಿತ್ರತಂಡ ‘ಮೆಲೋಡಿ ಮಾಂತ್ರಿಕ’ ಎನ್ನುವ ಬಿರುದು ನೀಡಿ ಸನ್ಮಾನಿಸಿದ್ದು ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಲು ಕಾರಣವಾಯಿತು.

ಸಾಮಾನ್ಯವಾಗಿ ಆಯಾ ಚಿತ್ರಗಳ ಸಮಾರಂಭಗಳಲ್ಲಿ ತುಸು ಹೆಚ್ಚು ಮಿನುಗುವುದು ನಟ–ನಟಿಯರು. ಆದರೆ ‘ಸಡಗರ’ದಲ್ಲಿ ಹೆಚ್ಚು ಮಿಂಚಿದ್ದು ಆ ಚಿತ್ರದ ಸಂಗೀತ ನಿರ್ದೇಶಕರು. ರಾಜ್‌ಗೋಪಿ ಸೂರ್ಯ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ‘ಸಡಗರ’. ‘ಚಿತ್ರದಲ್ಲಿ ಹಾಡುಗಳು ಅತ್ಯುತ್ತಮವಾಗಿವೆ.

ಸಂಗೀತ ನಿರ್ದೇಶಕರು ಸುಮಧುರವಾಗಿ ಮಟ್ಟುಗಳನ್ನು ಹಾಕಿದ್ದಾರೆ. ಜನವರಿ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದು ತಮ್ಮ ನಿರ್ದೇಶನದ ಮೊದಲ ಚಿತ್ರದ ಸಂಭ್ರಮವನ್ನು ವ್ಯಕ್ತಪಡಿಸಿದರು ಗೋಪಿ. ‘ಎಲ್ಲರಿಗೂ ಸಂತೋಷದ ಸಡಗರವಾದರೆ, ನನಗೆ ತೃಪ್ತಿಯ ಸಡಗರ.

ಹಾಡುಗಳು ಇಂಪಾಗಿ ಮೂಡಿಬಂದಿದ್ದು, ನನಗೆ ತೃಪ್ತಿಕೊಟ್ಟಿದೆ’ ಎಂದರು ಶ್ರೀಧರ್‌. ಅವರೇ ಚಿತ್ರದ ಟೈಟಲ್‌ ಹೆಸರನ್ನು ಸೂಚಿಸಿದ್ದು ಎಂದು ನೆನಪು ಮಾಡಿಕೊಂಡರು ನಾಯಕ ಶಂಕರ್ ಆರ್ಯನ್‌. ಚಿತ್ರವನ್ನು ಸಡಗರದಿಂದಲೇ ಮಾಡಿದ್ದೇವೆ ಎನ್ನುವ ಒಕ್ಕೊರಲ ದನಿ ಚಿತ್ರತಂಡದ್ದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಜಯಂತ ಕಾಯ್ಕಿಣಿ, ಗೌಸ್‌ಫಿರ್, ಕವಿರಾಜ್ ಸಾಹಿತ್ಯವಿದೆ. ನಾಯಕಿ ಯಜ್ಞಾ ಶೆಟ್ಟಿ, ನಿರ್ಮಾಪಕ ಮಹೇಶ್ ಗೌಡ್ರು, ನಟ ಕುಮಾರ್ ಗೋವಿಂದ್‌ ಮತ್ತಿತರರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.