ADVERTISEMENT

ಗೊಂದಲದ ಜೊತೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2010, 7:10 IST
Last Updated 24 ಡಿಸೆಂಬರ್ 2010, 7:10 IST

ಪ್ರೇಕ್ಷಕರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಪ್ರೇಕ್ಷಕರ ಮನದಾಳ ಅರಿತು ಈ ಸಿನಿಮಾ ಮಾಡುತ್ತಿರುವೆ’ ಎಂದು ಹೇಳಿದ ನಿರ್ದೇಶಕರಿಗೆ ತೂರಿ ಬಂದ ಪ್ರಶ್ನೆಯಿದು. ಈ ಪ್ರಶ್ನೆಗೆ ನಿರ್ದೇಶಕರು ಹೇಳಿದ್ದು- ‘ನನ್ನ ಮನಸ್ಸಿಗೆ ಬಂದದ್ದನ್ನು ಮಾಡಿದ್ದೇನೆ’.

‘ಮನರಂಜನೆ ಜನರಿಗೆ ಇಷ್ಟವಾಗುತ್ತದೆ’ ಎಂದು ಮತ್ತದೇ ಹಳೆಯ ವಾದವನ್ನು ಮುಂದಿಟ್ಟ ನಿರ್ದೇಶಕರ ಹೆಸರು ಶ್ರೀನಿವಾಸ ಗುಂಡಾರೆಡ್ಡಿ. ಚಿತ್ರದ ಹೆಸರು ‘ನಿನ್ನ ಜೊತೆಯಲ್ಲಿ’. ಅವರ ತೆಲುಗು ಮಿಶ್ರಿತ ಕನ್ನಡ ನುಡಿಯ ಗೊಂದಲ ತಪ್ಪಿಸಲು ನಾಯಕ ಪ್ರತೀತ್ ನೆರವಿಗೆ ಬಂದರು.

ಈ ಮೊದಲು ‘ಅಭಿರಾಮ್’, ‘ಅನಾಥ’ ಚಿತ್ರಗಳನ್ನು ನಿರ್ದೇಶಿಸಿದ್ದ ಗುಂಡಾರೆಡ್ಡಿ ಅವರಿಗೆ ತಾವು ಮಾಡಿದ ಚಿತ್ರಗಳ ಸೆಟ್‌ನಲ್ಲಿ ತೆಲುಗರೇ ಇದ್ದ ಕಾರಣ ಕನ್ನಡ ಕಲಿಯಲು ಸಾಧ್ಯವಾಗಲಿಲ್ಲವಂತೆ. ಫ್ಲೆಕ್ಸ್, ಸೈನ್‌ಬೋರ್ಡ್, ಬಂಟಿಂಗ್ಸ್ ಉದ್ಯಮಿ ನಿರ್ಮಾಪಕ ಶ್ರೀನಿವಾಸುಲು ಅವರಿಗೆ ಚಿತ್ರದ ಕತೆ ಇಷ್ಟವಾಗಿದೆಯಂತೆ.

ಚಿಕ್ಕಬಳ್ಳಾಪುರ ಮೂಲದ ಪ್ರತೀತ್ ಈ ಚಿತ್ರದ ನಾಯಕ. ‘ಮನರಂಜನೆ ಬಯಸಿ ಬರುವ ಜನರಿಗೆ ರಿಲೀಫ್ ನೀಡುವ ಮತ್ತು ನೆಮ್ಮದಿ ನೀಡುವ ಹೊಣೆ ನಮ್ಮ ಮೇಲಿದೆ. ಮಕ್ಕಳನ್ನು ಸಂತೋಷಪಡಿಸುವ ರೀತಿಯಲ್ಲಿ ಚಿತ್ರ ಮಾಡಲಾಗುತ್ತಿದೆ’ ಎಂದರು ಪ್ರತೀತ್. ಕೊಡಗಿನ ಹುಡುಗಿ ನವ್ಯಾ ಚಿತ್ರದ ನಾಯಕಿ. ಬೆಂಗಳೂರಿನ ಶಿರ್ಡಿ ಸಾಯಿಬಾಬಾ ಆಸ್ಪತ್ರೆಯಲ್ಲಿ ನರ್ಸ್ ನೌಕರಿಯಲ್ಲಿದ್ದಾರೆ.

‘ನಾಯಕಿಯದು ಸ್ಲಂ ಹುಡುಗಿಯ ಪಾತ್ರ. ಅಂದರೆ ಬಜಾರಿ, ಗಂಡುಬೀರಿ ಪಾತ್ರ’ ಎಂದು ನಿರ್ದೇಶಕರು ವಿವರಿಸಿದಾಗ- ಮತ್ತೆ ಪ್ರಶ್ನೆ: ಸ್ಲಂನಲ್ಲಿರುವವರೆಲ್ಲಾ ಬಜಾರಿಯರೇ? ಅಂದಹಾಗೆ, ಚಿತ್ರದ ಚಿತ್ರೀಕರಣ ಸಕಲೇಶಪುರ, ಬೆಂಗಳೂರು, ಶಿವಮೊಗ್ಗದಲ್ಲಿ ನಡೆಯಲಿದೆ. ಒಟ್ಟು 45 ದಿನಗಳ ಶೆಡ್ಯೂಲ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.