ADVERTISEMENT

ಜುಗಾರಿಯಿಂದ ಹೊರಟ ಲಾಸ್ಟ್‌ಬಸ್...

ಡಿ.ಎಂ.ಕುರ್ಕೆ ಪ್ರಶಾಂತ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಲಾಸ್ಟ್ ಬಸ್ ಅವಿನಾಶ್
ಲಾಸ್ಟ್ ಬಸ್ ಅವಿನಾಶ್   

ಹಳ್ಳಿ ಮಂದಿಯ ಬಾಯಲ್ಲಿ ‘ಲಾಸ್ಟ್ ಬಸ್‌’ ಎನ್ನುವುದು ಒಂದು ಧಾವಂತ. ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಕಡೆಗೆ ಪಯಣಿಸುವ ಕೊನೆಯ ಬಸ್ಸಿಗೆ ಈ ಹೆಸರು. ಈ ‘ಲಾಸ್ಟ್ ಬಸ್’ ಹೊರಡುವುದು ಕತ್ತಲಿನಲ್ಲಿಯೇ. ಕೊನೆಯ ಬಸ್ ಎಂದ ಮೇಲೆ ಅದು ರಾತ್ರಿಯೇ ಹೊರಡಬೇಕು ಅಲ್ಲವೇ. ಹೊರಡುವ ಸ್ಥಳಕ್ಕೂ ಅದು ಕೊನೆಯ ಬಸ್ಸು, ತಲುಪುವ ಸ್ಥಳಕ್ಕೂ ಅದು ಕೊನೆಯ ಬಸ್ಸು- ಹಾಲ್ಟಿಂಗ್ ಬಸ್! ಈ ಲಾಸ್ಟ್–ಹಾಲ್ಟ್‌ನ ನಡುವೆ ನಿರ್ದೇಶಕ ಅರವಿಂದ್ ಸೈಕಲಾಜಿಕಲ್ ಮಿಸ್ಟರಿ ಥ್ರಿಲ್ಲರ್ ಎನ್ನುವ ‘ಪಿಎಂಟಿ’ ಸೂತ್ರದ ಸ್ಟೋರಿಯನ್ನು ತೆಗೆದುಕೊಂಡು ಬಂದಿದ್ದಾರೆ.

‘ಲಾಸ್ಟ್‌ ಬಸ್‌’ ಸಿನಿಮಾ ಇಂದು  (ಜ.15) ತೆರೆಗೆ ಬರುತ್ತಿದೆ.  ಈ ಹಿಂದೆ ‘ಜುಗಾರಿ’ ಚಿತ್ರ ನಿರ್ದೇಶಿಸಿ ವಿಮರ್ಶಕರಿಂದ ಬೆನ್ನುತಟ್ಟಿಸಿಕೊಂಡಿದ್ದ ಅರವಿಂದ್ ಈಗ ‘ಲಾಸ್ಟ್ ಬಸ್‌’ ಚಕ್ರಗಳಿಗೆ ಗಾಳಿ ಹೊಡೆದು ಪ್ರೇಕ್ಷಕರ ಎದುರು ನಿಲ್ಲಿಸಿದ್ದಾರೆ.

ಕೊನೆಯ ಬಸ್ ಹಿಡಿದು...
‘ಲಾಸ್ಟ್ ಬಸ್’ ಟ್ರೇಲರ್ ಇದೊಂದು ಹಾರರ್ ಸೈಕಲಾಜಿ ಸಿನಿಮಾ ಎನ್ನುವ ಅನುಭವ ಕಾಣಿಸುತ್ತದೆ. ಇದನ್ನು ಪೂರ್ಣವಾಗಿ ಒಪ್ಪದ ಮತ್ತು ನಿರಾಕರಿಸದ ಅರವಿಂದ್ ‘ತಮ್ಮದು ಸೈಕಲಾಜಿಕಲ್ ಮಿಸ್ಟರಿ ಥ್ರಿಲ್ಲರ್ (ಪಿಎಂಟಿ) ಸಿನಿಮಾ’ ಎಂದು ವಿಶ್ಲೇಷಿಸುವರು. ಬಸ್ ಎಂದ ಮೇಲೆ ಜರ್ನಿ ಇರಬೇಕು ಅಲ್ಲವೇ? ಹೌದು ಈ ಕೊನೆಯ ಬಸ್‌ನ ಕಥೆಯೂ ಜರ್ನಿಯದ್ದೇ. ಆದರೆ ಇದು ಮನದೊಳಗಿನ ಭಯದ ಜರ್ನಿಯನ್ನು ಹೇಳುವ ಕಥೆ ಎನ್ನುವುದು ನಿರ್ದೇಶಕರ ಮಾತು.

‘ಮೇಲ್ನೋಟಕ್ಕೆ ಇದು ಜರ್ನಿಯಲ್ಲಿ ನಡೆಯುವ ಕಥೆ. ಯಾವ ರೀತಿ ನಂಬಿಕೆಗಳು ಹುಟ್ಟುತ್ತವೆ. ಪ್ರಜ್ಞಾಸ್ಥಿತಿಯಲ್ಲಿ ನಂಬಿಕೆಗಳು ಉಳಿಯುತ್ತದೆಯೋ ಇಲ್ಲವೋ ಎನ್ನುವ ವಿಷಯವನ್ನು ಲಾಸ್ಟ್‌ ಬಸ್ಸಿನಲ್ಲಿ ಹೇಳುತ್ತಿದ್ದೇವೆ. ಹಾಗೆಂದು ಇದು ಫಿಲಾಸಫಿಕಲ್ ಸಿನಿಮಾ ಅಲ್ಲ. ಭಯ ಎನ್ನುವುದು ಒಂದು ನೆಗೆಟಿವ್ ಎನರ್ಜಿ. ಭಯ ಒಂದು ಶಕ್ತಿ, ಸಿದ್ಧತೆಗೆ ಮತ್ತು ರಮ್ಯಾನುಭವಕ್ಕೂ ಕಾರಣವಾಗುತ್ತದೆ.  ಪರೀಕ್ಷೆ ಬರೆಯಬೇಕು ಎನ್ನುವಾಗ ಭಯ ಇರಬೇಕು. ಆ ಭಯ ಸಿದ್ಧತೆಗೆ ನಾಂದಿಯಾಗುತ್ತದೆ.

ಈ ಅಂಶಗಳನ್ನು ಹೇಳುವುದಕ್ಕೆ ಸಿನಿಮಾದಲ್ಲಿ ಒಂದು ಸಮರ್ಥ ಕಥೆ ಇದೆ. ಸಶಕ್ತ ಪಾತ್ರಗಳಿವೆ. ಒಂದು ರಾತ್ರಿಯಿಂದ ಬೆಳಗ್ಗಿನವರೆಗೆ ಅತಂತ್ರ ಸ್ಥಿತಿಯಲ್ಲಿರುವ ವ್ಯಕ್ತಿಗಳಲ್ಲಿ ಯಾವ ರೀತಿಯ ನಂಬಿಕೆಗಳು ಹುಟ್ಟಿಕೊಳ್ಳುತ್ತವೆ, ಈಗಾಗಲೇ ಇದ್ದ ನಂಬಿಕೆಗಳು ಹೇಗೆ ಮರೆಯಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಮುಖ್ಯವಾಗಿ ಕಾಣುತ್ತೇವೆ’ ಎಂದು ಅರವಿಂದ್‌ ಹೇಳುತ್ತಾರೆ.

‘ಇಲ್ಲಿ ಲಾಸ್ಟ್ ಬಸ್‌ ಎನ್ನುವುದು ಒಂದು ಪರಿಕಲ್ಪನೆ.  ಆ ಬಸ್ಸಿನ ಪಯಣದಲ್ಲಿ ಕೊನೆಯಲ್ಲಿ ಉಳಿಯುವ ಆರು ಜನ ಒಂದು ಪಾಳು ಬಿದ್ದ ಮನೆಗೆ ಬರುತ್ತಾರೆ. ಅಲ್ಲಿ ಒಂದು ರಾತ್ರಿ ಕಳೆಯಬೇಕಿರುತ್ತದೆ. ಇಲ್ಲಿಂದ ತಿರುವುಗಳಿವೆ. ಈ ಲಾಸ್ಟ್ ಬಸ್ ಏನು ಎನ್ನುವುದೇ ಪ್ರಮುಖ ಮತ್ತು ಮುಖ್ಯ ತಿರುವು’ ಎನ್ನುತ್ತಾರೆ ಅರವಿಂದ್. 

ಹಾರರ್ ಎನ್ನದಿರಿ!
‘ಲಾಸ್ಟ್ ಬಸ್‌’ ಹಾರರ್ ಚಿತ್ರ. ಇದನ್ನು ಟ್ರೇಲರ್‌ ಸಹ ಹೇಳುತ್ತದೆ. ಆದರೆ ಹಾರರ್‌ ಚಿತ್ರಗಳ ಸಿದ್ಧಸೂತ್ರವನ್ನು ‘ಲಾಸ್ಟ್‌ ಬಸ್‌’ ಮೀರಿದೆ ಎನ್ನುತ್ತಾರೆ ಅರವಿಂದ್‌. ‘ಸಾಮಾನ್ಯವಾಗಿ ಹಾರರ್ ಎಂದ ತಕ್ಷಣ ದೆವ್ವ ಇರುತ್ತದೆ, ಹೆದರಿಸುತ್ತದೆ ಎನ್ನುವ ಟಿಪಿಕಲ್ ನಂಬಿಕೆ–ಆಲೋಚನೆ ಬರುತ್ತದೆ. ಕಮರ್ಷಿಯಲ್ ಕಾರಣದಿಂದ ಅದೂ ಇರಲಿ. ಆದರೆ ಈ ಭಯ ಬೀಳಿಸುವ ಹೆದರಿಸುವ ದೆವ್ವದ ಕಥೆಗಳೇ ಮುಖ್ಯವಾಗದಿರಲಿ ಎನ್ನುವುದನ್ನು ಚಿಂತಿಸಿಯೇ ಕಥೆಯನ್ನು ರಚಿಸಿದ್ದು. ದೇವರುಗಳ ಬಗ್ಗೆ ಭಯ–ಭಕ್ತಿ ಕಟ್ಟಿಕೊಂಡಿರುವ ನಾವು ದೆವ್ವಗಳ ಬಗ್ಗೆಯೂ ಭಯವನ್ನು ಕಟ್ಟಿಕೊಂಡಿದ್ದೇವೆ.

ಈ ನಂಬಿಕೆಯ ಭಯ ಮತ್ತೊಂದಿಷ್ಟು ಕಲ್ಪನೆ–ಊಹೆಗಳಿಗೆ ಕಾರಣವಾಗುತ್ತದೆ. ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ಕಟ್ಟಿರುವ ಕಥೆಯೇ ‘ಲಾಸ್ಟ್ ಬಸ್’. ಸಾಕಷ್ಟು ಜನರಿಗೆ ಇದು ರೆಗ್ಯೂಲರ್ ಸಿನಿಮಾ ಅಲ್ಲ ಎನ್ನುವ ಕುತೂಹಲ ಬಂದಿದೆ. ನಿಜ... ಇದು ರೆಗ್ಯೂಲರ್ ರೀತಿಯ ಚಿತ್ರವಲ್ಲ’ ಎನ್ನುತ್ತಾರೆ ಅರವಿಂದ್.

***
ಜುಗಾರಿ ನಂತರ...
ಅರವಿಂದ್ ಮತ್ತು ಅವಿನಾಶ್ ಹಾಸ್ಯ ನಟ ನರಸಿಂಹ ರಾಜು ಅವರ ಮೊಮ್ಮಕ್ಕಳು. ಈಗ ಲಾಸ್ಟ್‌ ಬಸ್ ಮೂಲಕ ಅವರ ಕುಟುಂಬದ ಮತ್ತೊಂದು ಕುಡಿ ಸಿನಿಮಾ ಪ್ರವೇಶಿಸುತ್ತಿದೆ. ಅರವಿಂದ್ ಅವರ ಮಾವನ ಮಗ ಮತ್ತು ನರಸಿಂಹ ರಾಜು ಅವರ ಮತ್ತೊಬ್ಬ ಮೊಮ್ಮಗ ಸಮರ್ಥ ನರಸಿಂಹರಾಜು ಮೊದಲ ಬಾರಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸುಧಾ ನರಸಿಂಹರಾಜು ಅವರ ಹಿನ್ನೆಲೆ ಧ್ವನಿ ಚಿತ್ರದಲ್ಲಿದೆ

2010ರಲ್ಲಿ ತೆರೆಗೆ ಬಂದ ‘ಜುಗಾರಿ’ ಚಿತ್ರದ ನಂತರ ಅರವಿಂದ್ ಅವರ ಚಿತ್ರಗಳು ತೆರೆಗೆ ಬರಲಿಲ್ಲ. ಈ ಬಿಡುವಿನಲ್ಲಿ ಮ್ಯೂಸಿಕ್ ಆಲ್ಬಂ ಸಿದ್ಧಮಾಡಿದರು. ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಷೋ ನಿರ್ದೇಶಿಸಿದರು.

‘ಜುಗಾರಿ ನಂತರ ಎರಡು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಅವಕಾಶವಿತ್ತು. ಕೆಲವು ನಿರ್ಮಾಪರು ಐಟಂ ಹಾಡು–ಫೈಟ್ ಹೀಗೆ ಕಥೆಗೆ ಅಗತ್ಯವಿಲ್ಲದ ಅಂಶಗಳನ್ನು ನಿರೀಕ್ಷಿಸಿದರು. ಈ ಬದಲಾವಣೆ ನನ್ನಿಂದ ಅಸಾಧ್ಯ. ಆ ಕಾರಣಕ್ಕೆ ಕಥೆಗೆ ತಡೆ ಬಿತ್ತು. ‘ಎವರಿಡೇ ಬಾಯ್ಸ್’ ಚಿತ್ರ ಸಹ ತಡೆಯಲ್ಲಿದೆ. ಇದೇ ಸಮಯಲ್ಲಿ ರೀಮೇಕ್ ಚಿತ್ರಗಳು ಬಂದವು. ಆದರೆ ಖಂಡಿತಾ ರೀಮೇಕ್ ಚಿತ್ರಗಳನ್ನು ಮಾಡುವುದಿಲ್ಲ. ನನಗೆ ಆ ಸೂಕ್ಷ್ಮತೆ ಇಲ್ಲ. ಸೋತರೂ ಪರವಾಗಿಲ್ಲ, ಸ್ವಂತ ಕಥೆ ಮಾಡಿಕೊಳ್ಳಬೇಕು.

ಈ ಕಥೆಯನ್ನು ಮಾಡಿಕೊಂಡು ರಂಗಕರ್ಮಿ ಮತ್ತು ಗುರುಗಳಾದ ಕೆ.ವೈ. ನಾರಾಯಣಸ್ವಾಮಿ ಅವರ ಜತೆ ಚರ್ಚಿಸಿದೆ. ಅವರೇ ಲಾಸ್ಟ್ ಬಸ್ ಎನ್ನುವ ಟೈಟಲ್ ನೀಡಿದ್ದು. ಮೂಲತಃ ರಂಗಭೂಮಿಯಿಂದ ಬಂದವನು ನಾನು. ರಂಗಭೂಮಿಯ ಹಿನ್ನೆಲೆಯವರ ಬಗ್ಗೆ ಒಂದು ಹಂತದ ನಿರೀಕ್ಷೆಗಳು ಇರುತ್ತವೆ. ಆ ದೃಷ್ಟಿಯಲ್ಲಿ ನನಗೂ ಭಯ ಇದೆ. ಈ ಭಯ ಹೊಸ ಪರಿಕಲ್ಪನೆಗಳನ್ನು ಹುಟ್ಟಿಸುತ್ತದೆ. ಇದು ಈ ಚಿತ್ರದ ಕಥೆಗೆ ನೆರವಾಯಿತು’ ಎನ್ನುವರು ಅರವಿಂದ್.

***
ಲಾಸ್ಟ್ ಬಸ್! ರೈಟ್‌ ರೈಟ್‌...
ಈ ಬಸ್ಸು ಕೊನೆಯದಾದರೂ ಹಲವು ಪ್ರಥಮಗಳ ವಿಶೇಷತೆ ಒಳಗೊಂಡಿದೆ. ‘ಬಿಬಿಸಿ’ ಏಷ್ಯನ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾದ ಕನ್ನಡ ಸಿನಿಮಾದ ಮೊದಲ ಹಾಡು ‘ಲಾಸ್ಟ್‌ ಬಸ್‌’ನದು. ಬಿಡುಗಡೆಯ ದಿನಕ್ಕೂ ಹಿಂದಿನ ದಿವಸ ಕುತೂಹಲಿಗಳಿಗಾಗಿ ‘ಪೇಯ್ಡ್ ಪ್ರೀಮಿಯರ್’ ಪ್ರದರ್ಶನ ಆಯೋಜಿಸಲಾಗಿದೆ. ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ವಂಶಜರ ಮನೆಗೆ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಭೇಟಿ ನೀಡಿದ್ದರು; ಆ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಫ್ರೆಂಚ್ ಭಾಷೆಗೆ ಡಬ್ಬಿಂಗ್ ಮಾಡಿ, ಚಿತ್ರ ಬಿಡುಗಡೆ ಮಾಡುವ ಯೋಜನೆಯೂ ನಡೆಯುತ್ತಿದೆ. ಹೀಗೆ ‘ಲಾಸ್ಟ್‌ ಬಸ್‌’ ವಿಶೇಷಗಳು ಮುಂದುವರಿಯುತ್ತವೆ.

ಮಕರ ಸಂಕ್ರಾಂತಿಯಂದು (ಜ. 15) ತೆರೆ ಮೇಲೆ ಸಂಚರಿಸಲು ‘ಲಾಸ್ಟ್ ಬಸ್’ ಸಿದ್ಧವಾಗಿದೆ. ಆ ಕುರಿತು ಮಾಹಿತಿ ಹಂಚಿಕೊಳ್ಳಲು ಸುದ್ದಿಮಿತ್ರರನ್ನು ಆಹ್ವಾನಿಸಿದ್ದ ನಿರ್ದೇಶಕ ಎಸ್‌.ಡಿ.ಅರವಿಂದ ಅವರಲ್ಲಿ, ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುವ ವಿದ್ಯಾರ್ಥಿಯ ತವಕ ಕಾಣುತ್ತಿತ್ತು. ಸಿನಿಮಾದ ಮೊದಲ ದೃಶ್ಯ ಸೆರೆಹಿಡಿಯುವುದಕ್ಕೂ ಮುನ್ನ ನಡೆಸಿದ ತಯಾರಿಯ ಸುದೀರ್ಘ ವಿವರಣೆಯನ್ನು ಅವರು ಕೊಟ್ಟರು.

‘ಚಿತ್ರೀಕರಣ ಮಾಡಿ, ಸಂಕಲನ ಮಾಡುತ್ತ ಹೋದಂತೆಲ್ಲ ಇನ್ನಷ್ಟು ಚೆನ್ನಾಗಿ ಮಾಡಬಹುದಲ್ಲ ಅನಿಸುತ್ತಿತ್ತು. ಈಗಲೂ ಅಂತಿಮ ಪ್ರತಿ ನೋಡಿದಾಗ, ಅಂಥ ಸಾಧ್ಯತೆಗಳು ಮತ್ತೆ ಮತ್ತೆ ಗೋಚರಿಸುತ್ತಿವೆ’ ಎಂದ ಅರವಿಂದ್, ‘ಲಾಸ್ಟ್‌ ಬಸ್‌’ನ ತಾಕತ್ತು ಇರುವುದೇ ಕಥೆಯಲ್ಲಿ ಎಂದು ಸ್ಪಷ್ಟಪಡಿಸಿದರು. ಮೇಲ್ನೋಟಕ್ಕೆ ಇದೊಂದು ಹಾರರ್ ಚಿತ್ರ. ಆದರೆ ಆ ಭಯ ಯಾಕೆ ಎಂಬ ಅಂಶದ ಬೆನ್ನತ್ತಿದರೆ ಸಿಗುವ ಮಾನಸಿಕ ಸ್ಥಿತಿಯನ್ನು ಸಿನಿಮಾ ತೆರೆದಿಡಲಿದೆ ಎನ್ನುತ್ತಾರೆ ಅರವಿಂದ್.

ಸಾಹಿತಿ ಕೆ.ವೈ. ನಾರಾಯಣಸ್ವಾಮಿ ಬರೆದಿರುವ ‘ದೂರಿ... ದೂರಿ’ ಎಂಬ ಹಾಡು ಜೋಗುಳದಂತಿದ್ದರೂ ಅದನ್ನು ಬೇರೆಯದೇ ಬಗೆಯಲ್ಲಿ ಚಿತ್ರಿಸಲಾಗಿದೆ. ಈ ಹಾಡು ಬಿಬಿಸಿ ಏಷ್ಯನ್ ನೆಟ್‌ವರ್ಕ್‌ ರೇಡಿಯೋದಲ್ಲಿ ಪ್ರಸಾರವಾದ ಮೊದಲ ಕನ್ನಡದ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಹಾಡನ್ನು ಬಳಸಿಕೊಂಡ ಪರಿ ನನಗೆ ಅಚ್ಚರಿ ಮೂಡಿಸಿದೆ’ ಎನ್ನುವ ಕೆವೈಎನ್‌, ಭಯ ಹಾಗೂ ತಲ್ಲಣವನ್ನು ಸಮರ್ಥವಾಗಿ ಪ್ರತಿಬಿಂಬಿಸಿದ ಸಿನಿಮಾ ‘ಲಾಸ್ಟ್‌ ಬಸ್’ ಎಂದು ಬಣ್ಣಿಸುತ್ತಾರೆ.

ನಾಯಕನ ಪಾತ್ರದ ಜತೆಗೆ ಕಲಾ ನಿರ್ದೇಶಕನಾಗಿಯೂ ಕೆಲಸ ಮಾಡಿದ ಅವಿನಾಶ್ ಚಿತ್ರದ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ರಾಜ್ಯದಾದ್ಯಂತ ಕೈಗೊಂಡ ಪ್ರಚಾರದ ಅನುಭವ ಹಂಚಿಕೊಂಡರು. ಸುಮಾರು 80 ಚಿತ್ರಮಂದಿರಗಳಲ್ಲಿ ‘ಲಾಸ್ಟ್‌ ಬಸ್‌’ ತೆರೆ ಕಾಣಿಸುವ ಮಾಹಿತಿಯನ್ನು ನಿರ್ಮಾಪಕ ಗುರುರಾಜ ಕುಲಕರ್ಣಿ ನೀಡಿದರು. ಕಲಾವಿದರಾದ ಮೇಘಶ್ರೀ ಭಾಗವತರ್, ದೀಪಾ ಗೌಡ, ಛಾಯಾಗ್ರಾಹಕ ಅನಂತ ಅರಸ್, ಸಂಕಲನಕಾರ ಶ್ರೀ ಮತ್ತಿತರರು ಮಾತನಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.