ADVERTISEMENT

ದಿಲ್ದಾರ್ ರಾಜ!

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST
ದಿಲ್ದಾರ್ ರಾಜ!
ದಿಲ್ದಾರ್ ರಾಜ!   

ಮಾತಿನ ಮಧ್ಯೆ ಸ್ವಲ್ಪ ಭಾವುಕರಾದರು ನಿರ್ದೇಶಕ ಸೋಮನಾಥ್ ಪಿ ಪಾಟೀಲ್. ತೆಲುಗು ಚಿತ್ರರಂಗದಲ್ಲಿ ಒಂದಷ್ಟು ಕಾಲ ಕೆಲಸ ಮಾಡಿದ್ದ ಅವರಲ್ಲಿ ಕನ್ನಡದಲ್ಲಿ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುವ ಬಯಕೆ ಕೊನೆಗೂ ಈಡೇರುತ್ತಿದೆ ಎಂಬ ಖುಷಿಯೂ ಇತ್ತು. ಅವರು ಆ್ಯಕ್ಷನ್ ಕಟ್ ಹೇಳುತ್ತಿರುವುದು `ದಿಲ್ ಕಾ ರಾಜ~ ಚಿತ್ರಕ್ಕೆ. ಪ್ರಜ್ವಲ್ ದೇವರಾಜ್ ಚಿತ್ರದ ನಾಯಕ.

ಇದು ಯುವ ಜೋಡಿಯೊಂದರ ಪ್ರೇಮ ಕಥೆ. ಜೊತೆಗೆ ಸೆಂಟಿಮೆಂಟ್ ಮತ್ತು ಸ್ವಲ್ಪ ಆ್ಯಕ್ಷನ್ ಬೆರೆಸಲಾಗಿದೆಯಂತೆ. ಗುಲ್ಬರ್ಗಾದವರಾದ ಸೋಮನಾಥ್ ಓದಿದ್ದು ಎಂಜಿನಿಯರಿಂಗ್ ಆದರೂ ಸಿನಿಮಾ ಆಸಕ್ತಿ ಅದರತ್ತ ಅವರನ್ನು ಸೆಳೆಯಿತು. ಸಿನಿಮಾ ಬದುಕು ಕಟ್ಟಿಕೊಟ್ಟಿದ್ದು ತೆಲುಗು ಚಿತ್ರರಂಗ. ಹೈದರಾಬಾದ್‌ಗೆ ತೆರಳಿದ ಅವರು ಅಲ್ಲಿನ ಹೆಸರಾಂತ ನಿರ್ಮಾಣ ಸಂಸ್ಥೆ ಸುರೇಶ್ ಪ್ರೊಡಕ್ಷನ್‌ನಲ್ಲಿ ಆರು ವರ್ಷ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಗಿಟ್ಟಿಸಿಕೊಂಡರು.

ತೆಲುಗಿನ ಇತ್ತೀಚಿನ ಯಶಸ್ವಿ ಚಿತ್ರ `ಗಬ್ಬರ್ ಸಿಂಗ್~ನಲ್ಲಿ ನಿರ್ದೇಶಕ ಹರೀಶ್ ಶಂಕರ್ ಜೊತೆ ಸೋಮನಾಥ್ ಕೆಲಸ ಮಾಡಿದ್ದರು. ಈ ಸ್ನೇಹದ ಕುರುಹಾಗಿ ಹರೀಶ್ `ದಿಲ್ ಕಾ ರಾಜ~ದ ಮುಹೂರ್ತಕ್ಕೆ ಆಗಮಿಸಿ ಶುಭ ಹಾರೈಸಿದರು.

ಪ್ರಜ್ವಲ್‌ಗೆ ಇಲ್ಲಿ ಮತ್ತೊಂದು ಲವರ್ ಬಾಯ್ ಪಾತ್ರ. ಕಥೆ ತುಂಬಾ ಇಷ್ಟವಾಯಿತು. ಸೋಮನಾಥ್ ಅದ್ಭುತವಾಗಿ ಚಿತ್ರಕಥೆ ರೂಪಿಸಿದ್ದಾರೆ ಎನ್ನುವುದು ಪ್ರಜ್ವಲ್ ಮಾತು. ಅವರಿಗೆ ನಾಯಕಿಯ ಹುಡುಕಾಟವಿನ್ನೂ ನಡೆಯುತ್ತಿದೆ.

`ಗಬ್ಬರ್ ಸಿಂಗ್~ಗೆ ಕ್ಯಾಮೆರಾ ಕೆಲಸ ಮಾಡಿದ ಅಜಯ್ ವಿನ್ಸೆಂಟ್ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಟ ನಾಗಿನೀಡು ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಲಿದ್ದಾರೆ.

ಅಭಿಮಾನ್‌ರಾಯ್ ಐದು ಹಾಡುಗಳನ್ನು ಹೊಸೆಯುತ್ತಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಮಗನ ಬಯಕೆಗೆ ಒತ್ತಾಸೆಯಾಗಿ ನಿಂತ ಸೋಮನಾಥ್ ಅವರ ತಾಯಿ ಸುಶೀಲಾ ಪಾಟೀಲ್ ಮತ್ತು ತಂದೆ ಭರತ್ ರೆಡ್ಡಿ ಪಾಟೀಲ್.        

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.