ADVERTISEMENT

ದೇವದತ್ತ ರಹಸ್ಯ!

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2011, 19:30 IST
Last Updated 24 ನವೆಂಬರ್ 2011, 19:30 IST
ದೇವದತ್ತ ರಹಸ್ಯ!
ದೇವದತ್ತ ರಹಸ್ಯ!   

ರಹಸ್ಯಗಳನ್ನು ತಮ್ಮ ಒಡಲಲ್ಲೇ ಬಚ್ಚಿಟ್ಟುಕೊಂಡು ಸಣ್ಣ ಸುಳಿವನ್ನೂ ಬಿಚ್ಚಿಡಬಾರದೆಂಬ ಭಾವದಿಂದ ಕುಳಿತಿದ್ದರು ನಿರ್ದೇಶಕ ದೇವದತ್ತ. ಆದರೆ ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ತಾವು ಹೇಳಬಾರದೆಂದು ಅಂದುಕೊಂಡಿರುವ ವಿಷಯವನ್ನು ಅಪ್ಪಿತಪ್ಪಿಯೂ ಬಹಿರಂಗಪಡಿಸುವುದಿಲ್ಲ ಎಂಬ ಆತ್ಮವಿಶ್ವಾಸ ಅವರ ನಗೆ ಸೂಸುತ್ತಿದ್ದ ಮೊಗದಲ್ಲಿ ಕಾಣುತ್ತಿತ್ತು. ಚಿತ್ರದ ಬಗ್ಗೆ ಜನರಲ್ಲಿ ಆರಂಭದಲ್ಲೇ ಒಂದಷ್ಟು ಕುತೂಹಲ ಮೂಡಲಿ ಎಂಬುದು ಅವರ ಉದ್ದೇಶ. ಮೂರು ವರ್ಷದ ವಿರಾಮದ ಬಳಿಕ ಮತ್ತೊಂದು ಚಿತ್ರ ಸೃಷ್ಟಿಗೆ ಕೈ ಹಾಕಿರುವ ಅವರ ಈ ರಹಸ್ಯ ಕಾಯ್ದುಕೊಳ್ಳುವಿಕೆ ಹೊಸತೇನಲ್ಲ. ತಮ್ಮ ಮೊದಲ ಚಿತ್ರ `ಸೈಕೋ~ದಲ್ಲಿ ಅನುಸರಿಸಿದ್ದ ತಂತ್ರವನ್ನು ಇಲ್ಲೂ ಮುಂದುವರಿಸಿದ್ದಾರೆ. `ಸೈಕೋ~ ಚಿತ್ರದ ನಾಯಕ ನಾಯಕಿ ಯಾರೆಂದು ಗೊತ್ತಾಗಿದ್ದು ಚಿತ್ರ ಬಿಡುಗಡೆಯಾದ ಬಳಿಕವೇ.

ತಮ್ಮ ಹೊಸ ಚಿತ್ರಕ್ಕಿನ್ನೂ ಅವರು ಹೆಸರಿಟ್ಟಿಲ್ಲ. ಚಿತ್ರೀಕರಣ ನಡೆಯುತ್ತಿದ್ದಾಗಲೇ ಶೀರ್ಷಿಕೆ ಹುಡುಕುತ್ತೇನೆ ಎಂದು ಅವರು ಸಮಜಾಯಿಷಿ ನೀಡಿದ್ದು ಚಿತ್ರಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ. ವೇದಿಕೆ ಭರ್ತಿಯಾಗುವಷ್ಟು ಗಣ್ಯರನ್ನು ತುಂಬಿಸಿದ್ದರು ದೇವದತ್ತ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ `ಚಿತ್ರ ಪ್ರಾರಂಭವಾಗಲಿ~ ಎಂದು ಹಾರೈಸಿ ಚಾಲನೆ ನೀಡಿದರು. ವೇದಿಕೆ ಮೇಲೆ ಆಸೀನರಾಗಿದ್ದ ಎಲ್ಲರೂ ಒಂದೊಂದೇ ವಾಕ್ಯದಲ್ಲಿ ಶುಭ ಹಾರೈಸಿದರು.

ಉತ್ತಮ ಪ್ರಾದೇಶಿಕ ಭಾಷಾ ಚಿತ್ರ ವರ್ಗದಲ್ಲಿ ಮೊದಲ ಬಂಗಾರದ ಪದಕ ಪಡೆದಿದ್ದ `ಮಾರಿಬಲೆ~ ಚಿತ್ರ ನಿರ್ಮಿಸಿದ್ದ ಕುಂಬ್ರ ರಘುನಾಥ ರೈ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಅವರ ನಾಲ್ಕನೇ ಚಿತ್ರ.

ADVERTISEMENT

ದೇವದತ್ತರ ಆಶಯದಂತೆ ರಹಸ್ಯ ಕಾಯ್ದುಕೊಳ್ಳುವ ನೀತಿಯನ್ನು ನಿರ್ಮಾಪಕರೂ ಮುಂದುವರಿಸಿದರು. ಉತ್ತಮ ಕಮರ್ಷಿಯಲ್ ಚಿತ್ರ ನಿರ್ಮಿಸುವ ಆಸೆ ಇತ್ತು. ಈ ಚಿತ್ರದ ಕಥೆ ಇಷ್ಟವಾಯಿತು ಎಂದು ತಮ್ಮ ಮಾತಿಗೆ ವಿರಾಮ ಹಾಕಿದರು.

`ಸೈಕೋ~ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಚಿತ್ರ ಗೆಲ್ಲುವಲ್ಲಿ ವಿಫಲವಾಯಿತು. ಅಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದೇನೆ. ಅದೆಲ್ಲವನ್ನೂ ತಿದ್ದಿಕೊಂಡು ಮನರಂಜನೆಯುಳ್ಳ ಚಿತ್ರ ನೀಡುತ್ತೇನೆ ಎಂದರು ದೇವದತ್ತ. ಮೂರು ವರ್ಷದ ಅವಧಿಯಲ್ಲಿ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಅವರು ಈ ಚಿತ್ರಕ್ಕೆ ಕೈ ಹಾಕಿದ್ದಾರಂತೆ. ಹಿಂದಿನಂತೆ ಈ ಬಾರಿ ಅಷ್ಟು ದೀರ್ಘಕಾಲ ಗುಟ್ಟು ಬಚ್ಚಿಡುವುದಿಲ್ಲ. ಚಿತ್ರದ ಕಥೆ, ನಾಯಕ ನಾಯಕಿ, ತಾಂತ್ರಿಕ ವರ್ಗ ಹೀಗೆ ಎಲ್ಲದರ ಪರಿಚಯವನ್ನೂ ಮುಂಚೆಯೇ ಮಾಡುತ್ತೇನೆ ಎಂಬ ಭರವಸೆ ಅವರದು. ಆದರೆ ಆಡಿಯೋ ಬಿಡುಗಡೆ ಸಮಾರಂಭದವರೆಗೂ ಇದಕ್ಕಾಗಿ ಕಾಯಬೇಕಂತೆ. ಅಂದಹಾಗೆ, ಈ ಚಿತ್ರದ ಮೂಲಕ ದೇವದತ್ತ ಹೊಸ ಪ್ರತಿಭೆಗಳನ್ನೇನೂ ಪರಿಚಯಿಸುತ್ತಿಲ್ಲ. ಹಳಬರಲ್ಲಿ ಯಾರು ಎನ್ನುವುದಷ್ಟೇ ಸದ್ಯದ `ದೇವ~ರಹಸ್ಯ.

ಎಲ್ಲವನ್ನೂ ಗೌಪ್ಯವಾಗಿರಿಸಿಕೊಂಡು ಕುತೂಹಲ ಕೆರಳಿಸುವುದು ಗಿಮಿಕ್ ಅಲ್ಲ. ಹೊಸತನ ನೀಡುವ ಪ್ರಯತ್ನ ಎಂದು ಮುಗುಳ್ನಗುತ್ತಾರೆ ದೇವದತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.