ADVERTISEMENT

ನಶೆ–ಆಶೆಗಳ ‘ಪರಪಂಚ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ನಶೆ–ಆಶೆಗಳ ‘ಪರಪಂಚ’
ನಶೆ–ಆಶೆಗಳ ‘ಪರಪಂಚ’   

ಈ ವಾರ, ಮುಂದಿನ ವಾರ ಎನ್ನುತ್ತ ಹಲವು ವಾರಗಳಿಂದ ಕತ್ತಲೆಯಲ್ಲೇ ಉಳಿದಿದ್ದ ‘ಪರಪಂಚ’ ಈ ಶುಕ್ರವಾರ (ಜ. 15) ತೆರೆ ಕಾಣುತ್ತಿದೆ. ಬಾರ್‌ ಅಂಡ್‌ ರೆಸ್ಟೊರೆಂಟ್‌ ಒಂದರ ಸುತ್ತ ತಿರುಗುವ ಚಿತ್ರದಲ್ಲಿ ಹಲವು ಮಾನವೀಯ ಮುಖಗಳು, ತೊಳಲಾಟಗಳು, ವಿಕ್ಷಿಪ್ತ ಮನಸ್ಸುಗಳ ಚಿತ್ರಣ ಎಲ್ಲವೂ ಇದೆಯಂತೆ.

ಮೇಲ್ನೋಟಕ್ಕೆ ಕಮರ್ಷಿಯಲ್ ಸ್ವರೂಪದಂತೆ ಕಾಣುವ ‘ಪರಪಂಚ’, ವಾಸ್ತವವಾಗಿ ಹಲವು ವೈಶಿಷ್ಟ್ಯಗಳ ಸಂಗಮ ಎಂದು ಬಣ್ಣಿಸುತ್ತಾರೆ ನಿರ್ಮಾಪಕ ಡಾ. ಎಂ.ರವಿರಾಜ್. ಯೋಗರಾಜ್ ಮೂವೀಸ್ ಬ್ಯಾನರ್‌ ಅಡಿ ನಿರ್ಮಾಣಗೊಂಡ ಈ ಚಿತ್ರ, ಮನುಷ್ಯನ ಮನಸ್ಸನ್ನು ವಿಶ್ಲೇಷಿಸುವ ಪ್ರಯತ್ನ ಎಂಬುದು ಅವರ ನುಡಿ. ‘ಸಿನಿಮಾದ ಎಲ್ಲ ಹಾಡುಗಳು ಹಿಟ್ ಆಗಿವೆ. ಜನರನ್ನು ಆಗಲೇ ಅರ್ಧ ಭಾಗ ತಲುಪಿದ್ದೇವೆ.

ಸಿನಿಮಾಕ್ಕೆ ಖಂಡಿತ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ’ ಎಂದವರು ಆಶಾವಾದ ವ್ಯಕ್ತಪಡಿಸುತ್ತಾರೆ. ದಿಗಂತ್ ಹಾಗೂ ರಾಗಿಣಿ ಸಿನಿಮಾದ ಎರಡು ಕಣ್ಣುಗಳು ಎಂದು ಬಣ್ಣಿಸಿದ ಅವರು, ‘ಸಿನಿಮಾದಲ್ಲಿ ನನ್ನದೂ ಒಂದು ಮಹತ್ವದ ಪಾತ್ರವಿದೆ’ ಎಂದಷ್ಟೇ ಸುಳಿವು ಬಿಟ್ಟುಕೊಟ್ಟರು.

ಕ್ಲಬ್‌ ಡಾನ್ಸರ್ ಹಾಗೂ ಕಾಲ್‌ಗರ್ಲ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಗಿಣಿ, ಈಚೆಗೆ ಬಂದಿರುವ ಚಿತ್ರಗಳ ಪೈಕಿ ‘ಪರಪಂಚ’ ವಿಶಿಷ್ಟ ಪ್ರಯತ್ನ ಎಂದು ಹೇಳಿದರು. ‘ಕಾಲ್‌ಗರ್ಲ್‌ ಅಂದ ಕೂಡಲೇ ಗ್ಲಾಮರ್ ಇತ್ಯಾದಿ ಕಲ್ಪನೆ ಮೂಡುತ್ತವೆ. ಆದರೆ ಅವೆಲ್ಲವನ್ನೂ ಮೀರಿ ಅಂಥ ಯುವತಿಯ ಮುಗ್ಧ ಮನಸ್ಸನ್ನು ಈ ಚಿತ್ರ ತೆರೆದಿಡುತ್ತದೆ. ನನಗಂತೂ ಹೆಚ್ಚು ಖುಷಿ ಕೊಟ್ಟ ಪಾತ್ರವಿದು’ ಎಂದರು.

ಯೋಗರಾಜ ಭಟ್ ಬರೆದಿರುವ ‘ಹುಟ್ಟಿದ ಊರನು’ ಹಾಡಿಗೆ ದನಿಗೂಡಿಸಿ, ಆಟೋ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿರುವ ವೆಂಕಟ್– ತಮಗೆ ನೀಡಿದ ಅವಕಾಶಕ್ಕೆ ಪದೇ ಪದೇ ಕೃತಜ್ಞತೆ ಸಲ್ಲಿಸಿದರು. ‘ನಾನಿನ್ನೂ ಬೆಳಯುವುದು ಸಾಕಷ್ಟಿದೆ. ಏನಾದರೂ ತಿಳಿಸಿದರೆ ತಿದ್ದಿಕೊಳ್ಳುವೆ’ ಎಂದ ವೆಂಕಟ್, ತಾವು ಹಾಡಿದ ಹಾಡು ಸೂಪರ್‌ ಹಿಟ್ ಆಗಿರುವುದಕ್ಕೆ ಯೋಗರಾಜ ಭಟ್ ಕಾರಣ ಎಂದರು. ಇನ್ನೊಬ್ಬ ನಿರ್ಮಾಪಕ ರುದ್ರಪ್ಪ, ಸುಮಾರು 120 ಚಿತ್ರಮಂದಿರಗಳಲ್ಲಿ ‘ಪರಪಂಚ’ ಬಿಡುಗಡೆಯಾಗಲಿದೆ ಎಂಬ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.