ADVERTISEMENT

ನಸುಬಿರಿದ ದಾಸ್ವಾಳ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಗುಂಡು ಅಂದ್ರೆ ಕಿಕ್ ಇರಬೇಕು
ಜಾಕೇಟ್ ಅಂದ್ರೆ ಹುಕ್ ಇರಬೇಕು...
ಪಕ್ಕಾ ಕಾಮಿಡಿ ಕಲಾಯಿಯಲ್ಲಿ ರೂಪು ಪಡೆದಿರುವ ‘ದಾಸ್ವಾಳ’ ಚಿತ್ರದ ಒಂದು ಐಟಂ ಸಾಂಗ್ ಹುಟ್ಟು ಪಡೆದಿದ್ದು ಈ ಸಾಲುಗಳಿಂದ.

 ಡಾಬಾ ಸೆಟ್‌ನಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ ಅನಿತಾ ಭಟ್ ಶೂಟಿಂಗ್ ಸ್ಪಾಟ್‌ನಲ್ಲಿ ನಡು ಬಳುಕಿಸುತ್ತ, ಮೊಣಕಾಲುವರೆಗಿನ ತುಂಡುಡುಗೆಯಲ್ಲಿ ಅತ್ತಲಿಂದ ಇತ್ತ ತಿರುಗುತ್ತಿದ್ದರೆ, ಹಾಡು ಹುಟ್ಟಿದ ಬಗೆಯನ್ನು ವಿವರಿಸಲು ತವಕಿಸುತ್ತಿದ್ದರು ನಿರ್ದೇಶಕ ಎಂ.ಎಸ್. ರಮೇಶ್‌.

ರಮೇಶ್ ಚಿತ್ರಗಳೆಂದರೆ ಖಡಕ್ ಸಂಭಾಷಣೆ ಮತ್ತು ಖಾಕಿ ಖದರ್‌ಗೆ ಒತ್ತು. ಆದರೆ ಅವರ ಚಿತ್ರಭಾಷೆ ‘ದಾಸ್ವಾಳ’ದಲ್ಲಿ ತುಸು ವಿಭಿನ್ನವಾಗಿದೆ. ರಂಗಾಯಣ ರಘು ಮತ್ತು ಪ್ರೇಮ್ ಅಭಿನಯದ ‘ದಾಸ್ವಾಳ’ದ ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಪ್ರೇಕ್ಷಕರ ಕಿವಿಯಲ್ಲಿ ಹೂ ಇಡಲು ನಿರ್ದೇಶಕರು ಸಿದ್ಧವಾಗಿದ್ದಾರೆ.

ಚಿತ್ರದ ಪ್ರಧಾನ ಜೀವಾಳ ಚಿನಕುರುಳಿ ಸಂಭಾಷಣೆಗಳು. ಬಹಳ ಗಂಭೀರದ ವಿಷಯಗಳನ್ನೂ ಚಿತ್ರದ ನಾಯಕರು ಸರಳವಾಗಿ ಹಾಸ್ಯವಾಗಿ ತೆಗೆದುಕೊಳ್ಳುತ್ತಾರೆ. ಗಾಂಭೀರ್ಯ ಇಲ್ಲದ ಪಾತ್ರಗಳಿಂದ ಕೂಡಿದ ಚಿತ್ರವಂತೆ. ಬೇರೊಬ್ಬರ ಕಿವಿಯಲ್ಲಿ ದಾಸ್ವಾಳ (ಹೂ) ಇಡುವುದೇ ನಾಯಕರ ಕೆಲಸವಂತೆ. ಭಾವಪ್ರಧಾನ ಮತ್ತು ವಿಷಾದದ ಛಾಯೆಯಲ್ಲೂ ಚೆಲ್ಲಾಟವಿದೆಯಂತೆ.

‘ನಿತ್ಯದ ಬದುಕಿನಲ್ಲಿ ನಾವು ಯಾರನ್ನಾದರೂ ಇಲ್ಲವೇ ಯಾವುದನ್ನಾದರೂ ಹಿಂಬಾಲಿಸಿಕೊಂಡು ಹೋಗುತ್ತೇವೆ. ಬದುಕಿನಲ್ಲಿ ನಮ್ಮ ಅರಿವಿಗೆ ಬಾರದಂತೆಯೇ ನಾಲ್ಕಾರು ಜನ ಹತ್ತಿರವಾಗುತ್ತಾರೆ’– ಹೀಗೆ ಪಕ್ಕಾ ವೇದಾಂತದ ಶೈಲಿಯಲ್ಲಿ ನಿರ್ದೇಶಕರು ಚಿತ್ರದ ಪರಿಚಯಕ್ಕಿಳಿದರು. ‘ದಾಸ್ವಾಳ’ದ ಹೊರಗಿನ ಭಾವ ಹಾಸ್ಯರಸವಾದರೂ ಮನಸ್ಸಿನ ಆಳವನ್ನು ಹೊಕ್ಕು ರಾಡಿ ಎಬ್ಬಿಸುವ ಸನ್ನಿವೇಶಗಳಿವೆ ಎನ್ನುವುದು ನಿರ್ದೇಶಕರ ಮಾತುಗಳಿಂದ ತಿಳಿಯುತ್ತಿತ್ತು. ಚಿತ್ರದ ಮೂರು – ನಾಲ್ಕು ಸನ್ನಿವೇಶಗಳು ಕಲ್ಲೆದೆಯವರ ಕಣ್ಣುಗಳನ್ನೂ ತೇವಗೊಳಿಸಲಿವೆಯಂತೆ.

ಪ್ರೇಮ್‌ ಅವರ ಹಳ್ಳಿ ಸೊಗಡಿನ ಮಾತುಗಾರಿಕೆ ಚಿತ್ರಕ್ಕೆ ನೆರವಾದುದನ್ನು ರಂಗಾಯಣ ರಘು ಬಿಚ್ಚಿಟ್ಟರೆ, ರಘು ಮತ್ತು ತಮ್ಮ ನಡುವಿನ ‘ದಾಸ್ವಾಳ’ ಸಂಬಂಧವನ್ನು ನೆನಪಿಸಿಕೊಂಡರು ಪ್ರೇಮ್. ಚಿತ್ರದಲ್ಲಿನ ಕೆಲ ಪಂಚಿಂಗ್‌ ಸಂಭಾಷಣೆಗಳನ್ನು ಸುದ್ದಿಗೋಷ್ಠಿಯಲ್ಲೂ ಸಿಡಿಸಿ ಹಾಸ್ಯಕ್ಕೂ ತಮಗೂ ಎಡಬಿಡದ ನಂಟು ಎನ್ನುವುದನ್ನು ನಿರೂಪಿಸಿದರು.

ಚಿತ್ರದ ನಾಯಕಿ ಐಶ್ವರ್ಯಾಗೆ ಇದು ಚೊಚ್ಚಿಲ ಚಿತ್ರ. ಜೈಪುರ, ಜೋಧಪುರ, ಮನಾಲಿ, ಬಾದಾಮಿ ಸೇರಿದಂತೆ ಚಳಿ, ಬಿಸಿಲಿನ ರಾಜಧಾನಿಗಳಲ್ಲಿ ಚಿತ್ರವನ್ನು ಸರೆ ಹಿಡಿಯಲಾಗಿದೆ. ನಿರ್ಮಾಪಕ ಅಣಜಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.