ರಜನೀಕಾಂತ್ ತಮ್ಮ ಮಗಳು ನಿರ್ದೇಶಿಸಿರುವ ಕೊಚಾಡಿಯನ್ ಚಿತ್ರಕ್ಕಾಗಿ ಹಾಡೊಂದನ್ನು ಹೇಳಲಿದ್ದಾರಂತೆ. ಈ ಸುದ್ದಿ ಅವರ ಅಭಿಮಾನಿ ಬಳಗಕ್ಕೆ ಸಂತಸವನ್ನೇ ತಂದಿದೆ. ರಜನಿ ತಮ್ಮ ಚಿತ್ರಕ್ಕೆ ಹಾಡಿ 21 ವರ್ಷಗಳೇ ಕಳೆದಿವೆ. ಇದಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.
ಅಮಿತಾಬ್ ಸಹ `ಕಹಾನಿ~ ಚಿತ್ರಕ್ಕಾಗಿ ಗುರು ರವೀಂದ್ರನಾಥ್ ಟ್ಯಾಗೋರ್ ರಚಿತ `ಎಕ್ಲಾ ಚಲೋ ರೆ~ ಹಾಡು ಹೇಳಿದ್ದರು. ಅಮಿತಾಬ್ `ಸಿಲ್‌ಸಿಲಾ~, `ಯಾರಾನಾ~, `ಡಾನ್~, `ಹಂ~, `ಬಾಗ್ಬನ್~ ಮುಂತಾದ ಚಿತ್ರಗಳಲ್ಲೆಲ್ಲಾ ಹಾಡಿದ್ದಾರೆ.
ಅಮೀರ್ ಖಾನ್ `ಗುಲಾಮ್~ ಚಿತ್ರದ `ಆತಿ ಕ್ಯಾ ಖಂಡಾಲಾ~ ಹಾಡಿಗೆ ಧ್ವನಿಯಾಗಿದ್ದರು. ಶಾರುಖ್ ಖಾನ್ ಜೋಷ್ ಚಿತ್ರದಲ್ಲಿ `ಅಪುನ್ ಬೋಲಾ, ತೂ ಮೇರಿ ಲೈಲಾ~ ಹಾಡಿ ಕುಣಿದಿದ್ದರು.
ಸಿನೆಮಾ ನಟರೆಲ್ಲ ಹಾಡಿದರೆ ಹಿನ್ನೆಲೆ ಗಾಯಕರು ಏನು ಮಾಡಬೇಕು? ಇದಕ್ಕೆ ಶಾನ್ ಉತ್ತರ ನೀಡಿದ್ದಾರೆ.
ಪಶ್ಚಿಮದಲ್ಲಿ ಎಲ್ಲ ನಟರೇ ಹಾಡು ಹೇಳುತ್ತಾರೆ. ಅಂಥ ಬೆಳವಣಿಗೆ ಸ್ವಾಗತಾರ್ಹವೇ. ಹಿನ್ನೆಲೆ ಗಾಯನಕ್ಕೆ ಈಗ ಮುಂಚಿನ ಮಾಧುರ್ಯ ಉಳಿದಿಲ್ಲ. ಗಾಯಕರೇ ಆಗಿರಬೇಕು, ಅಥವಾ ಸಂಗೀತ ಬಲ್ಲವರಾಗಬೇಕು ಎಂಬುದೇನೂ ಕಡ್ಡಾಯವಾಗಿಲ್ಲ. ಯಾರು ಬೇಕಾದರೂ ಹಾಡಬಹುದು ಎಂದಾಗಿದೆ ಎಂದು ಹೇಳಿದ್ದಾರೆ.
ಹಾಡಿಗೆ ಮಾಧುರ್ಯವೂ ಬೇಕಾಗಿಲ್ಲ. ಎಲ್ಲ `ನಾನ್‌ಸೆನ್ಸ್~ ಹಾಡುಗಳ ಕಾಲ ಇದು.
`ಕೊಲವೆರಿ ಡಿ~ ಇರಲಿ, `ಭಾಗ್ ಡಿ.ಕೆ.ಬೋಸ್~ ನಂಥ ಹಾಡುಗಳೇ ಇರಲಿ ಜನಪ್ರಿಯವಾಗುತ್ತಿವೆ.
`ಮುನ್ನಭಾಯಿ~, ಅಥವಾ `ಜಲೇಬಿವಾಲಿ~ಯಂಥ ಹಾಡುಗಳಿಗೆ ಸಾಹಿತ್ಯದ ಹಂಗೂ ಇಲ್ಲ. ಹಾಡನ್ನು ಹಾಡಬೇಕೋ, ಹೇಳಬೇಕೋ ಎಂಬುದೇ ಅರ್ಥವಾಗದ ಈ ದಿನಗಳಲ್ಲಿ ಹಿನ್ನೆಲೆ ಗಾಯನ ತನ್ನ ಚರಿಷ್ಮಾ ಕಳೆದುಕೊಳ್ಳುತ್ತಿದ್ದಾನೆ ಎಂದು ಶಾನ್ ಅಭಿಪ್ರಾಯ ಪಟ್ಟಿದ್ದಾರೆ.
ಇವರ ಮಾತಿಗೆ ಇಂಬುಗೊಡುವಂತೆ ಕಿಶೋರ್ ಕುಮಾರ್ ಮಗ ಅಮಿತ್ ಕುಮಾರ್ ಸಹ ಇಂಥ ಹಾಡುಗಳ ಬಗ್ಗೆ ಕಿಡಿ ಕಾರಿದ್ದಾರೆ. ಇವು ಜನಪ್ರಿಯತೆಯ ಸೋಗಿನಲ್ಲಿ ಸುಟ್ಟುಹೋಗುವ ಸುರುಸುರು ಬತ್ತಿಯಂಥ ಸಂಗೀತ. ಈ ಸಂಗೀತದಲ್ಲಿ ಮನದ ತಾಪವಿಲ್ಲ. ಭಾವನೆಗಳ ಕಾವಿಲ್ಲ. ಹೀಗೆ ಸಿಡಿದು ಬೂದಿಯಾಗುವ ಹಾಡುಗಳಿವು.
ಹಾಡುಗಳು ಮನದ ಉರಿಯನ್ನು ತಂಪು ಮಾಡುವಂತಿರಬೇಕು. ಹಾಡುಗಳು ಮನದಲ್ಲಿ ಬೆಳಕಿನ ಕುಡಿ ಹೊತ್ತಿಸುವಂತಿರಬೇಕು. ಕ್ರಾಂತಿಯ ಕಿಡಿ ಜ್ವಲಿಸುವಂತೆ ಮಾಡಬೇಕು. ಅಂಥ ಹಾಡು, ಸಂಗೀತ, ಸಾಹಿತ್ಯ ಎಲ್ಲವೂ ಈಗ ಕಣ್ಮರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಹಿನ್ನೆಲೆ ಗಾಯಕರಾಗಿಯೇ ಮುಂದುವರಿಯಬೇಕೆಂದರೆ ಇದನ್ನು ಕೇವಲ ವೃತ್ತಿಯೆಂದು ಮಾತ್ರ ಪರಿಗಣಿಸಬೇಕಾಗಿದೆ.
ನೀಡಿರುವ ಸಾಹಿತ್ಯವನ್ನು ನಿರ್ದೇಶಿಸಿದಂತೆ ಪಾಠ ಒಪ್ಪಿಸಬೇಕಾಗಿದೆ. ಸಂಗೀತ ತಪವಿದ್ದಂತೆ. ಇನ್ನು ಇಂಥ ಹಾಡುಗಳನ್ನು ನೀಡುವುದು ಅಸಾಧ್ಯ ಎಂದು ಶಾನ್ ಹೇಳಿಕೊಂಡಿದ್ದಾರೆ. ಇಂಥ ಹಾಡುಗಳನ್ನು ಹೇಳುವ ಬದಲು ಬೇರೆ ವೃತ್ತಿ ಆರಂಭಿಸುವುದು ಒಳಿತು.
ಈ ನಿಟ್ಟಿನಲ್ಲಿ ನಟರೇ ಇನ್ನು ಮುಂದೆ ಹಾಡು ಹೇಳುವುದನ್ನು ಆರಂಭಿಸಿದರೆ ಅದನ್ನು ಒಳ್ಳೆಯ ಬೆಳವಣಿಗೆ ಎಂದೇ ಕರೆಯಬಹುದಾಗಿದೆ. ಕೊನೆಯ ಪಕ್ಷ ಶಾಸ್ತ್ರೀಯವಾಗಿ ಸಂಗೀತ ಕಲಿತವರು ಅದೇ ಕ್ಷೇತ್ರದಲ್ಲಿಯೇ ಮುಂದುವರಿದಾರು ಎಂಬ ಆಶಾಭಾವ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.