ADVERTISEMENT

ಪತ್ನಿಯ ನಗು ಮುಲಾಮು!

ಪ್ರಜಾವಾಣಿ ವಿಶೇಷ
Published 3 ಜನವರಿ 2013, 20:20 IST
Last Updated 3 ಜನವರಿ 2013, 20:20 IST
ಪತ್ನಿಯ ನಗು ಮುಲಾಮು!
ಪತ್ನಿಯ ನಗು ಮುಲಾಮು!   

`ವೃತ್ತಿ ಬದುಕಿನ ಎಡರು ತೊಡರುಗಳನ್ನು ನನ್ನ ಪತ್ನಿಯ ನಗು ನೋಡಿ ಮರೆಯುತ್ತಿರುವೆ'. ಹಾಗೆಂದಿದ್ದು ನಾಯಕ ನಟ ವಿಜಯ ರಾಘವೇಂದ್ರ. `ಸೇವಂತಿ ಸೇವಂತಿ' ಚಿತ್ರದ ನಂತರ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಇತ್ತೀಚಿನ `ಸ್ನೇಹಿತರು' ಚಿತ್ರದ ಗೆಲುವು ಅವರಲ್ಲಿ ಕೊಂಚ ಉತ್ಸಾಹ ತುಂಬಿದೆ. `ಕಳ್ಳ ಮಳ್ಳ ಸುಳ್ಳ' ಚಿತ್ರದ ನಟನೆಗೆ ಸಿಕ್ಕ ಮೆಚ್ಚುಗೆ ಆತ್ಮವಿಶ್ವಾಸ ಹೆಚ್ಚಿಸಿದೆ.

ತಮ್ಮ ಸಿನಿಮಾಗಳು ಹೇಳಿಕೊಳ್ಳುವಂಥ ಹೆಸರು ಮಾಡದಿದ್ದರೂ ತಮಗೆ ಅವಕಾಶಗಳು ಕಡಿಮೆಯಾಗದೇ ಇರುವುದಕ್ಕೆ `ಚಿನ್ನಾರಿ ಮುತ್ತ' ಚಿತ್ರದ ಯಶಸ್ಸೇ ಕಾರಣ ಎನ್ನುವುದು ವಿಜಯ ರಾಘವೇಂದ್ರರ ವಿನಯದ ಮಾತು. ಮುತ್ತನ ಪಾತ್ರದಲ್ಲಿ ತಮ್ಮನ್ನು ರೂಪಿಸಿದ ನಿರ್ದೇಶಕ ನಾಗಾಭರಣ ಅವರಿಗೆ ಅವರ ಕೃತಜ್ಞತೆ. `ಸಿನಿಮಾ ರಂಜನೆ' ಜೊತೆ ಮಾತನಾಡಿದ ವಿಜಯ ರಾಘವೇಂದ್ರರ ಮಾತುಗಳಲ್ಲಿ ಸ್ವ ವಿಮರ್ಶೆ ಇತ್ತು.

ಅವಕಾಶಗಳು ಹೇಗಿವೆ?
ನನ್ನ ಸಿನಿಮಾಗಳು ಸೋಲುತ್ತಿದ್ದರೂ ಜನ ನನ್ನ ಮೇಲೆ ಎಂಥದೋ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಬರುತ್ತಿರುವ ಅವಕಾಶಗಳೇ ಸಾಕ್ಷಿ. ಅದಕ್ಕೆ ನಾನು ಆಭಾರಿ. `ರಣತಂತ್ರ', `ಏನಿದು ಮನಸಲಿ' ಇದೀಗ ಒಪ್ಪಿಕೊಂಡಿರುವ ಸಿನಿಮಾಗಳು. `ಚೆಲ್ಲಾಪಿಲ್ಲಿ', `ಒಂದು ರೂಪಾಯಿಲಿ ಎರಡು ಪ್ರೀತಿ' ಬಿಡುಗಡೆಗೆ ಸಿದ್ಧವಾಗಿವೆ.

ನಿಮ್ಮ ಸಿನಿಮಾಗಳ ಸೋಲಿಗೆ ಕಾರಣ ಏನು?
`ಬೆಳದಿಂಗಳಾಗಿ ಬಾ' ಚಿತ್ರದ ನಂತರ 15 ಜನ ಹೊಸಬರೊಂದಿಗೆ ಕೆಲಸ ಮಾಡಿದೆ. ಅನೇಕ ನಿರ್ಮಾಪಕರು `ಒಂದಿಷ್ಟರಲ್ಲಿ ಸಿನಿಮಾ ಮಾಡೋಣ' ಎನ್ನುತ್ತಾರೆ. ಅಂಥವರಿಗೆ ಯಶಸ್ಸು ಕೂಡ ಅಷ್ಟರಲ್ಲೇ ಸಿಗುತ್ತೆ. ಹಾಗೆಂದು ಎಲ್ಲರೂ `ಸಂಗೊಳ್ಳಿ ರಾಯಣ್ಣ' ಮಾಡೋಕಾಗೊಲ್ಲ. ಸಮಾಧಾನ ಆಗುವಂಥ ಸಾಧಾರಣ ಸಿನಿಮಾ ಕೂಡ ಮಾಡಲು ಯಾರೂ ಬರುತ್ತಿಲ್ಲ. `ಕಾರಂಜಿ' ಮತ್ತು `ಹಾರ್ಟ್‌ಬೀಟ್' ಚಿತ್ರದ ಹಾಡುಗಳು ಹಿಟ್ ಆದವು. ಚಿತ್ರ ಯಶಸ್ವಿಯಾಗಲಿಲ್ಲ. `ಗೋಕುಲ'ಕ್ಕೆ ಒಳ್ಳೆಯ ಮಾತುಗಳು ಕೇಳಿಬಂದವು. ಅದು ಕೂಡ ಸೋತಿತು.

ಎಂಥ ಪಾತ್ರಗಳ ನಿರೀಕ್ಷೆ ಇದೆ?
`ಕಲ್ಲರಳಿ ಹೂವಾಗಿ', `ರಿಷಿ', `ಸೇವಂತಿ ಸೇವಂತಿ' ನಾನು ನಿರೀಕ್ಷಿಸಿರದ ಪಾತ್ರಗಳು. ಅಂಥ ಪಾತ್ರಗಳು ನನಗೆ ಬೇಕು. ನನಗೆ ಸವಾಲು ಎಸೆಯುವ ಪಾತ್ರ ಬೇಕು.

ನಿಮ್ಮದೇ ನಿರ್ಮಾಣ ಸಂಸ್ಥೆ ಇರುವುದರಿಂದ ಅಂಥ ಪಾತ್ರಗಳನ್ನು ನೀವೇ ಸೃಷ್ಟಿಸಬಹುದಲ್ಲವೇ?
ನಮ್ಮ ಸಂಸ್ಥೆಯಿಂದ ಹೊರಬಂದ `ಗಣೇಶ ಮತ್ತೆ ಬಂದ' ಯಶಸ್ಸು ಕಾಣಲಿಲ್ಲ. `ಸೇವಂತಿ ಸೇವಂತಿ'ಗೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ಕಾರಣ ಅದು ಯಶಸ್ವಿಯಾಯಿತು. ನನ್ನ ತಂದೆಗೆ ಮತ್ತೆ ಅಂಥ ಒಳ್ಳೆಯ ಸಿನಿಮಾ ನಿರ್ಮಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಿರುವೆ.

ವಜ್ರೇಶ್ವರಿ ಸಂಸ್ಥೆಯಿಂದ ಕರೆ ಬಂದಿಲ್ಲವೇ?
ಅವಕಾಶ ಬಂದರೆ ಮಾಡುವೆ. ಶಿವಣ್ಣ ಮಾಮಾ ಜೊತೆ `ರಿಷಿ'ಯಲ್ಲಿ ನಟಿಸುವಾಗ ತುಂಬಾ ಸಂತೋಷದಿಂದ ಇದ್ದೆ. ನಾನು ಯಾವತ್ತೂ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಎಂದು ಅವರನ್ನು ಹೆಸರು ಹಿಡಿದು ಕರೆಯುವಷ್ಟು ದೊಡ್ಡವನಲ್ಲ. ನಾವು ಈ ಸ್ಥಿತಿಯಲ್ಲಿ ಇರಲು ನಮ್ಮ ದೊಡ್ಡತ್ತೆಯೇ ಕಾರಣ. ಅಪ್ಪು ಅವರೊಂದಿಗೆ ಕೆಲಸ ಮಾಡುವ ಅವಕಾಶ ಬಂದರೆ ಮಾಡಲು ಸಿದ್ಧ.

ನಿರ್ದೇಶಕನಾಗುವಾಸೆ ಇದೆಯೇ?
ಇದೆ. ಆದರೆ ಸದ್ಯಕ್ಕೆ ಉತ್ಸಾಹ ಇಲ್ಲ. ನಿರ್ದೇಶನ ಸುಲಭದ ಮಾತಲ್ಲ. ಅದಕ್ಕೆ ತುಂಬಾ ಸಮಯ ಬೇಕು. ನಾನು ನಿರ್ದೇಶಕನಾಗಲು ಇನ್ನು ಮೂರು ವರ್ಷವಾದರೂ ಬೇಕು. ನಾನು ನಿರ್ದೇಶಿಸುವ ಸಿನಿಮಾ ಮನರಂಜನೆ ಮತ್ತು ಭಾವನೆಗಳು ಗಟ್ಟಿಯಾಗಿರುವ ಕತೆಯನ್ನು ಆಧರಿಸಿರುತ್ತದೆ.

ADVERTISEMENT

ನಿಮ್ಮ ವೃತ್ತಿ ಬದುಕಿಗೆ ಕುಟುಂಬದ ಬೆಂಬಲ ಹೇಗಿದೆ?
ಏಳು-ಬೀಳು ಎದುರಿಸುತ್ತಿದ್ದರೂ ನನ್ನನ್ನು ಸವಾಲುಗಳಿಗೆ ಸಿದ್ಧ ಮಾಡುತ್ತಿರುವುದೇ ನನ್ನ ಕುಟುಂಬ. ಫ್ಯಾಮಿಲಿ ಅನ್ನೋದು ಗ್ರೇಟೆಸ್ಟ್ ಪವರ್. ನನ್ನ ಪತ್ನಿ ಸ್ಪಂದನಾ, ನಾಲ್ಕು ವರ್ಷದ ಮಗ ಶೌರ್ಯ ನನ್ನನ್ನು ಖುಷಿಯಿಂದ ಇಟ್ಟಿದ್ದಾರೆ.

ಮುಂದಿನ ಯೋಜನೆ?
ಸದ್ಯದಲ್ಲಿಯೇ ಬೆಂಗಳೂರಿನ ಸಂಜಯನಗರದಲ್ಲಿ ಒಂದು ನೃತ್ಯ ಶಾಲೆ ಆರಂಭಿಸಲಿದ್ದೇನೆ. ವೀರೇಂದ್ರ ಜಲ್‌ದಾರ್ ನನ್ನ ಡಾನ್ಸ್ ಗುರು. ಅವರಿಂದಲೇ ನಾನು ಫ್ರೀ ಸ್ಟೈಲ್ ಡಾನ್ಸ್ ಕಲಿತದ್ದು. ಇದುವರೆಗೂ ಡಾನ್ಸ್ ಕ್ಯಾಂಪ್ ಮಾಡುತ್ತಿದ್ದೆ. ನಾನು ವಾಹಿನಿಯೊಂದರ ಡಾನ್ಸ್ ಶೋದ ತೀರ್ಪುಗಾರನಾಗಿದ್ದಾಗ ಅಲ್ಲಿಗೆ ಬರುತ್ತಿದ್ದ ಅನೇಕ ಪ್ರತಿಭಾವಂತರನ್ನು ಕಂಡು ದಂಗಾಗಿ ಹೋದೆ. ಅದೇ ಸ್ಫೂರ್ತಿ ಯಿಂದ ಮತ್ತು ಸಣ್ಣಂದಿನಿಂದ ಇರುವ ನೃತ್ಯದ ಬಗೆಗಿನ ಆಸಕ್ತಿಯಿಂದ ಡಾನ್ಸ್ ಕ್ಲಾಸ್ ಆರಂಭಿಸಲು ತೀರ್ಮಾನಿಸಿರುವೆ. ಅಧಿಕೃತವಾಗಿ ಶಾಲೆ ಆರಂಭಿಸಿ ಸಹಾಯಕರೊಂದಿಗೆ ಸೇರಿ ಆಸಕ್ತರಿಗೆ ಡಾನ್ಸ್ ಕಲಿಸುವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.