ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಮತ್ತು ಹಲ್ಲೆಯನ್ನು ಕಥಾವಸ್ತು ಆಗಿಸಿಕೊಂಡ ಚಿತ್ರ ಕನ್ನಡದಲ್ಲಿ ಸೆಟ್ಟೇರಿದೆ. ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ತವಕ ತಲ್ಲಣಗಳು, ಅನಿವಾಸಿ ವಿದ್ಯಾರ್ಥಿಗಳ ಹತ್ಯೆಯ ಬಗ್ಗೆ ತಿಳಿಯಲು ಭಾರತದಿಂದ ವಿದೇಶಕ್ಕೆ ತೆರಳುವ ಪತ್ರಕರ್ತ ಹಾಗೂ ಈ ತಲ್ಲಣಗಳ ನಡುವೆಯೇ ಹುಟ್ಟುವ ಪ್ರೇಮಕಥೆ `ಪೋರ' ಚಿತ್ರದ ವಸ್ತು.
`ಪೋರ' ಚಿತ್ರದ ಮೂಲಕ ಕನ್ನಡದ ನವನಾಯಕರ ಪಟ್ಟಿಗೆ ಜನಾರ್ದನ್ ಸೇರ್ಪಡೆಯಾಗಿದ್ದಾರೆ. ರಂಗಭೂಮಿ ಮತ್ತು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ಇದೀಗ ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನವೂ ಅವರದೇ. ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ವಿದ್ಯಾರ್ಥಿಗಳ ಹತ್ಯೆಯನ್ನು ಅಮೆರಿಕದ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಚಿತ್ರೀಕರಿಸಲಾಗಿದೆ. `ಪೋರ'ನಿಗೆ ಪೋರಿಯಾಗಿ ಪೆರುವಿನ ನಟಿ ವ್ಯಾನರಿ ಕಾಣಿಸಿಕೊಳ್ಳುವ ಮೂಲಕ ಕನ್ನಡಕ್ಕೆ ಮತ್ತೊಬ್ಬ ವಿದೇಶಿ ನಟಿಯ ಪ್ರವೇಶವಾಗಿದೆ. ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡ, ವಾಷಿಂಗ್ಟನ್ ಸೇರಿದಂತೆ ಅಮೆರಿಕದ ಸುಂದರ ತಾಣಗಳಲ್ಲಿ 20 ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಬೆಂಗಳೂರು, ಬೀದರ್ ಮತ್ತು ಚಿಕ್ಕಮಗಳೂರಿನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾಗಿದೆ.
ನಾಯಕ ಜನಾರ್ದನ್ ಅವರದ್ದು ಚಿತ್ರದಲ್ಲಿ ಪತ್ರಕರ್ತನ ಪಾತ್ರ. ಅನಿವಾಸಿ ವಿದ್ಯಾರ್ಥಿಗಳ ಸ್ಥಿತಿಗತಿ ಅಧ್ಯಯನಕ್ಕೆ ಆತ ಅಮೆರಿಕಕ್ಕೆ ತೆರಳುತ್ತಾನೆ. ಚಿತ್ರದ ಮೊದಲಾರ್ಧ ಅಮೆರಿಕದಲ್ಲಿ ಸಾಗಿದರೆ, ದ್ವಿತೀಯಾರ್ಧ ಕರ್ನಾಟಕದಲ್ಲಿ.
`ನನ್ನದು ಭಾವನಾತ್ಮಕ ಪಾತ್ರ. ನಾನು ಚಿತ್ರದಲ್ಲಿ ಗೃಹ ಸಚಿವರ ಮಗಳು' ಎಂದು ಚಿತ್ರದ ಪಾತ್ರ ಪರಿಚಯ ಮಾಡಿಕೊಂಡ ನಾಯಕಿ ವ್ಯಾಲರಿಗೆ ಇದು ಮೊದಲ ಭಾರತೀಯ ಸಿನಿಮಾ.
ಬೆಳಗಾವಿಯ ಶೈಲೇಂದ್ರ ಬೆಳದಾಳೆ, ದೇವರಾಜ್ ಶಿಡ್ಲಘಟ್ಟ ಮತ್ತು ವಿ. ರಾಮಚಂದ್ರಪ್ಪ `ಪೋರ' ಚಿತ್ರದ ನಿರ್ಮಾಪಕರು. ನಾಯಕ ಜನಾರ್ದನ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆ.ಎಂ. ಇಂದ್ರ ಸಂಗೀತ ನಿರ್ದೇಶನ, ನಿರಂಜನ್ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ಗಿರೀಶ್ ಕಾರ್ನಾಡ್, ಟಿ.ಎಸ್. ನಾಗಾಭರಣ, ಸುಧಾರಾಣಿ, ಸುಮಿತ್ರಾ, ರಾಜು ತಾಳಿಕೋಟೆ, ತಬಲಾ ನಾಣಿ, ತಾರಾಗಣದಲ್ಲಿರುವ ಪ್ರಮುಖರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.