ADVERTISEMENT

ಪ್ರೇಮ ಸ್ವರ! ಹೊಸ ಜ್ವರ!

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಇದು ಹುಡುಗ-ಹುಡುಗಿಯ ಪ್ರೇಮಕ್ಕೆ ಸೀಮಿತವಾದ ಲವ್‌ಸ್ಟೋರಿಯಲ್ಲ!ಹಾಗೆಂದದ್ದು ನಿರ್ದೇಶಕ ಸತೀಶ್ ಪ್ರಧಾನ್. ‘ಕೇಳದೆ ನಿಮಗೀಗ’ ಎನ್ನುವ ಪ್ರೇಮಕಥೆಯ ಸಿನಿಮಾ ಮಾಡಲು ಹೊರಟಿರುವ ಅವರು, ಚೊಚ್ಚಿಲ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಎದೆ ಮುಟ್ಟಿಕೊಂಡು ಹೇಳಿದ್ದು- ‘ತಮ್ಮದು ಡಿಫರೆಂಟ್ ಸಿನಿಮಾ, ಡಿಫರೆಂಟ್ ಲವ್‌ಸ್ಟೋರಿ’.

ಜೀವನ ಎನ್ನುವುದೊಂದು ಜರ್ನಿ. ಆ ಪಯಣದಲ್ಲಿ ಭಿನ್ನ ಭಿನ್ನ ಮನೋಭಾವದ ಪಯಣಿಗರು ಜೊತೆಯಾಗುತ್ತಾರೆ. ಒಬ್ಬೊಬ್ಬರದು ಒಂದೊಂದು ಬಗೆಯ ಭಾವ. ಅವರೆಲ್ಲರ ಭಾವನೆಗಳಿಗೆ, ಪ್ರೀತಿಗೆ ಮುಖಾಮುಖಿ ಆಗುತ್ತಾ ಸಾಗುವುದು ಬದುಕು. ಇಂಥ ಜೀವನದ ಅನುಭವವೇ ‘ಕೇಳದೇ ನಿಮಗೀಗ’ ಚಿತ್ರದ ಕಥೆ ಎಂದರು ಸತೀಶ್.

ಅಂದಹಾಗೆ, ಸತೀಶ್ ಸ್ವತಂತ್ರ ನಿರ್ದೇಶಕರಾಗುತ್ತಿರುವುದು ಇದೇ ಮೊದಲಾದರೂ ಅವರ ಅನುಭವ ಭರ್ಜರಿಯಾಗಿಯೇ ಇದೆ. ನಿರ್ದೇಶಕರಾದ ಡಿ.ರಾಜೇಂದ್ರಬಾಬು ಮತ್ತು ಓಂಪ್ರಕಾಶ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಸುದೀಪ್ ಗರಡಿಯಲ್ಲೂ ಪಳಗಿದ್ದಾರೆ. ಆ ಸ್ನೇಹದಿಂದಲೇ ಮುಹೂರ್ತ ಸಂದರ್ಭದಲ್ಲಿ ಹಾಜರಿದ್ದ ಸುದೀಪ್, ಗೆಳೆಯನಿಗೆ ಶುಭಕೋರಿದರು. ಇಷ್ಟು ಮಾತ್ರವಲ್ಲ, ಮುಖ್ಯವಾದ ಪಾತ್ರವೊಂದರಲ್ಲಿ ನಟಿಸುವಂತೆ ಸುದೀಪ್ ಅವರನ್ನು ಸತೀಶ್ ಕೇಳಿಕೊಂಡಿದ್ದಾರಂತೆ. ಸುದೀಪ್ ಅಸ್ತು ಎನ್ನಬಹುದೆನ್ನುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

ಯಶಸ್, ಸುಪ್ರೀತಾ ಮತ್ತು ಪೂಜಾ ಗಾಂಧಿ ಚಿತ್ರದ ತಾರಾಗಣದಲ್ಲಿರುವ ಪ್ರಮುಖರು. ಸಿನಿಮಾದಲ್ಲಿ ಮನಃಶಾಸ್ತ್ರದ ವಿದ್ಯಾರ್ಥಿನಿಯ ಪಾತ್ರ ಪೂಜಾ ಅವರದಾಗಿದ್ದು, ಆ ಪಾತ್ರವೇ ಸಿನಿಮಾದ ತಿರುವುಗಳಿಗೆ ಸಾಕ್ಷಿಯಾಗಿ ನಿಲ್ಲಲಿದೆ. ಅನೇಕ ಹೊಸ ನಿರ್ದೇಶಕರೊಂದಿಗೆ ನಟಿಸಿರುವ ಪೂಜಾ, ಸತೀಶ್ ಅವರ ಬಗ್ಗೆ ವಿಶ್ವಾಸ ಇರಿಸಿಕೊಂಡಿದ್ದಾರೆ. ಕಥೆ ಅವರಿಗೆ ಇಷ್ಟವಾಗಿದೆ. ಸಿನಿಮಾ ಜನರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸವೂ ಅವರಿಗಿದೆ.

ವಿ.ಮನೋಹರ್ ‘ಕೇಳದೆ ನಿಮಗೀಗ’ ಚಿತ್ರದ ಸಂಗೀತ ನಿರ್ದೇಶಕರು. ಅವರಿಗೆ ಕೂಡ ನಿರ್ದೇಶಕರ ಸಿನಿಮಾ ಪ್ರೀತಿ ಖುಷಿಕೊಟ್ಟಿದೆ. ‘ಹುಡುಗ ಪ್ರತಿಭಾವಂತ’ ಎನ್ನುವುದು ಮನೋಹರ್ ಮೆಚ್ಚುಗೆ. ಅಂದಹಾಗೆ, ಜಾನಪದ ಶೈಲಿಯ ಸಂಗೀತವನ್ನು ಸಂಯೋಜಿಸುವಂತೆ ನಿರ್ದೇಶಕರು ಅವರನ್ನು ಕೇಳಿಕೊಂಡಿದ್ದಾರಂತೆ.

ಯಶಸ್ ‘ಶಿಶಿರ’ ಚಿತ್ರದಲ್ಲಿ ನಟಿಸಿದ್ದ ಕಲಾವಿದ. ಆ ಚಿತ್ರದಲ್ಲಿ ನಟಿಸಿದ್ದ ನಟನೆಯ ಮೆರಿಟ್ ಮೇಲೆಯೇ ಈ ಚಿತ್ರದಲ್ಲಿ ಅವರಿಗೆ ಅವಕಾಶ ದೊರೆತಿದೆ. ಸತೀಶ್ ನಿರ್ದೇಶನದಲ್ಲಿ ಕಲಾವಿದನಾಗಿ ಹೊಸರೂಪ ಪಡೆದುಕೊಳ್ಳುವ ನಿರೀಕ್ಷೆ ಅವರದ್ದು.‘ಪ್ರೀತಿ ಜೀವನದಲ್ಲಿ ತುಂಬಾ ಮುಖ್ಯ’ ಎನ್ನುವ ಸುಪ್ರೀತಾಗೆ ಚಿತ್ರದಲ್ಲಿ ಬಬ್ಲಿ ಬಬ್ಲಿ ರೋಲ್ ಅಂತೆ.

ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾದ ನೀನಾಸಂ ಅಶ್ವತ್ಥ್ ‘ಕೇಳದೆ ನಿಮಗೀಗ’ ಮೂಲಕ ಹೊಸ ಪಾತ್ರವೊಂದಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಪಾತ್ರ ಇದ್ದೇ ಇದೆ. ವಿಶೇಷ ಇರುವುದು ಕಾರ್ಯಕಾರಿ ನಿರ್ಮಾಪಕನ ಜವಾಬ್ದಾರಿಯದ್ದು. ನಟನೆಯ ಜೊತೆಗೆ ನಿರ್ಮಾಣ ನಿರ್ವಹಣೆಯನ್ನೂ ಹೊರುವ ಡಬ್ಬಲ್ ರೋಲ್ ಅವರದ್ದು. ಚಿತ್ರದ ನಿರ್ಮಾಪಕರು ಯುವರಾಜ್ ಸಮರ್ಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.