ADVERTISEMENT

ಬಂದು ಹೋದ ಹಮ್ ದೋನೋ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

‘ಅಭಿ ನಾ ಜಾವೊ ಚೋಡಕರ್..’, ‘ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ..’ ಸುಮಧುರ ಗೀತೆಗಳು, ದೇವ್ ಆನಂದ್, ಸಾಧನಾ, ನಂದಾ ಅವರ ಮೋಡಿ ಮಾಡುವ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದ 1961ರ ಚಿತ್ರ ‘ಹಮ್ ದೋನೊ’ (ಈಗ ಹಮ್ ದೋನೊ ರಂಗೀನ್) ಮರು ಬಿಡುಗಡೆ 250 ಚಿತ್ರಮಂದಿರಗಳಲ್ಲಿ ಕಳೆದ ವಾರ ಜೋರಾಗೇ ನಡೆಯಿತು. ಕಪ್ಪುಬಿಳುಪಿನಲ್ಲಿದ್ದ ಚಿತ್ರ ಬಣ್ಣದಲ್ಲಿ ಬಿಡುಗಡೆಯಾಗುವ ಮುನ್ನ ನಡೆದ ಪ್ರೀಮಿಯರ್ ಕೂಡಾ ಮುಂಬೈನಲ್ಲಿ ರಂಗುರಂಗಾಗೇ ನಡೆಯಿತು. ಆದರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ರಂಗು ತುಂಬಲು ಮಾತ್ರ ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಶೇಕಡಾ 15ರಷ್ಟೂ ಪ್ರೇಕ್ಷಕರಿಲ್ಲ ಎಂಬುದು ಚಿತ್ರಮಂದಿರಗಳ ಮಾಲೀಕರ ಅಳಲು.

‘ಬಾಜಿ’, ‘ಪ್ರೇಮ್ ಪೂಜಾರಿ’, ‘ಗೈಡ್’, ‘ಹರೆ ರಾಮ ಹರೆ ಕೃಷ್ಣ’ ಮೊದಲಾದ ಚಿತ್ರಗಳನ್ನು ನಿರ್ಮಿಸಿದ ನವಕೇತನ್ ಫಿಲಮ್ಸ್‌ನ ಕೊನೆಯ ಕಪ್ಪುಬಿಳುಪಿನ ಚಿತ್ರ ಇದಾಗಿತ್ತು. ಇದರ ಮಾಲೀಕ ಸ್ವತಃ ದೇವ್ ಆನಂದ್. ಹೊಸತನದ ಹುಡುಕಾಟ, ತಂತ್ರಜ್ಞಾನದ ಬಳಕೆಗೆ ಬಹು ಹಿಂದಿನಿಂದಲೂ ಹೆಸರಾಗಿದ್ದ ದೇವ್ 50 ವರ್ಷಗಳ ಹಿಂದಿನ ಈ ಸಿನಿಮಾವನ್ನು ಅಮೆರಿಕದಲ್ಲಿ ಉನ್ನತ ತಂತ್ರಜ್ಞಾನ ಬಳಸಿ ವರ್ಣಚಿತ್ರವನ್ನಾಗಿ ಪರಿವರ್ತಿಸಿದ್ದಾರೆ. ಚಿತ್ರದ ಗುಣಮಟ್ಟ ಮಾತ್ರವಲ್ಲ, ಸೌಂಡ್‌ನ ಗುಣಮಟ್ಟವನ್ನೂ ಸುಧಾರಿಸಲಾಗಿದೆ. ಆದರೆ ದೇವ್ ಸಾಬ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರ ಮಾತ್ರ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದೆ.

ಆರು ವರ್ಷಗಳ ಹಿಂದೆ ವರ್ಣಚಿತ್ರವಾಗಿ ಮರು ಬಿಡುಗಡೆಗೊಂಡ ‘ಮುಘಲ್ ಎ ಅಜಾಂ’ನಂತೆ ಇದು ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣಬಹುದೆಂಬ ನಿರ್ಮಾಪಕರ ನಿರೀಕ್ಷೆ ಹುಸಿಯಾಗಿದೆ. ‘ಮುಘಲ್...’ ಕ್ಲಾಸಿಕ್ ಚಿತ್ರ. ಚಿತ್ರದಲ್ಲಿ ಮನರಂಜನೆ ಭರ್ಜರಿಯಾಗಿದೆ. ರೋಮಾನ್ಸ್, ಉತ್ತಮ ಸಂಭಾಷಣೆ, ಆ್ಯಕ್ಷನ್.. ಹೀಗೆ ಮತ್ತೆ ಮತ್ತೆ ಪ್ರೇಕ್ಷಕರನ್ನು ಸೆಳೆಯುವ ಎಲ್ಲಾ ಅಂಶಗಳು ‘ಮುಘಲ್..’ನಲ್ಲಿವೆ. ಆದರೆ ‘ಹಮ್ ದೋನೊ’ ಅಂತಹ ಕ್ಲಾಸಿಕ್ ಚಿತ್ರವಲ್ಲ.

ಆದರೆ ಆ ಕಾಲದಲ್ಲಿ ಅದೊಂದು ಉತ್ತಮ ಚಿತ್ರ. ಅದು ಆಗ ಬಿಡುಗಡೆಯಾದಾಗ ಜನರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತು ಲಾಭ ಗಳಿಸಿತ್ತು. ಈಗ ‘ಮುಘಲ್..’ ಅಥವಾ ಹಲವಾರು ಬಾರಿ ಬಿಡುಗಡೆಗೊಂಡ ‘ಶೋಲೆ’ಯಂತಹ ಶೆಲ್ಫ್ ಲೈಫ್ ಇದಕ್ಕಿಲ್ಲ. ಐವತ್ತು ವರ್ಷಗಳ ಹಿಂದೆ ಚಿತ್ರ ವೀಕ್ಷಿಸಿದವರಿಗೆ ಕುತೂಹಲವಿರಬಹುದು. ಆದರೆ ಯುವ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜೊತೆಗೆ ಪ್ರಚಾರದ ಕೊರತೆ. ದೇವ್ ಪ್ರೀಮಿಯರ್ ಏರ್ಪಡಿಸಿ ಚಿತ್ರರಂಗದ ಘಟಾನುಘಟಿಗಳನ್ನು ಕರೆದು ತೋರಿಸಿದರು. ನಾಯಕಿಯರಾದ ಸಾಧನಾ ಮತ್ತು ನಂದಾ ಅದೇಕೋ ಪ್ರೀಮಿಯರ್‌ಗೆ ಬರಲು ನಿರಾಕರಿಸಿ ಈ ಮಧ್ಯೆ ಒಂದಿಷ್ಟು ಸುದ್ದಿ ಮಾಡಿದರು. ದೇವ್ ಆನಂದ್ ಮಾಧ್ಯಮಗಳಿಗೆ ಸಂದರ್ಶನ ನೀಡಿದರು. ಆದರೆ ಈಗ ಅಗತ್ಯವಿರುವ ತೀವ್ರವಾದ ಪ್ರಚಾರ ನಡೆಯಲಿಲ್ಲ.

ಏನೇ ಇರಲಿ, ಆಗ ಚಿತ್ರ ಬಿಡುಗಡೆಯಾದಾಗ ಅದನ್ನು ವೀಕ್ಷಿಸುವುದು ಯುವ ಸಮುದಾಯದಲ್ಲಿ ಕ್ರೇಜ್ ಆಗಿತ್ತು. ಈಗಿನ ಯುವ ಪ್ರೇಕ್ಷಕರ ಆಸಕ್ತಿ ಬದಲಾಗಿರಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.