ADVERTISEMENT

ಬರ್ಫಿ! ಬರಿ ಸಿಹಿಯಲ್ಲ...

ಅಮಿತ್ ಎಂ.ಎಸ್.
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST
`ಬರ್ಫಿ' ಭಾಮಾ, ದಿಗಂತ್
`ಬರ್ಫಿ' ಭಾಮಾ, ದಿಗಂತ್   

ಹಲವು ವಿಶೇಷಗಳ `ಬರ್ಫಿ' ಇದು. ಪಂಜಾಬ್‌ನಲ್ಲಿ ಶೂಟಿಂಗ್ ಮಾಡಿದ್ದು, ವಾಘಾ ಗಡಿಯಲ್ಲಿ ಮೊದಲ ಬಾರಿಗೆ ಪೆರೇಡ್ ಚಿತ್ರೀಕರಣ ಮಾಡಿದ್ದು, ಒಂದು ಇಡೀ ಹಾಡನ್ನು ವಿಶ್ವಪ್ರಸಿದ್ಧ ರಾಕ್‌ಗಾರ್ಡನ್‌ನಲ್ಲಿ ಚಿತ್ರೀಕರಿಸಲು ಅನುಮತಿ ಪಡೆದಿದ್ದು, ದೀರ್ಘಕಾಲದ ಬಳಿಕ ಕನ್ನಡ ಚಿತ್ರವೊಂದು ಶಿಮ್ಲಾದಲ್ಲಿ ಚಿತ್ರೀಕರಣ ನಡೆಸಿದ್ದು... ಚಿತ್ರವನ್ನು ಮೆಚ್ಚಿಕೊಳ್ಳಲು ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ವೈಶಿಷ್ಟ್ಯಗಳು ಇದರಲ್ಲಿದೆ ಎಂದು ಹೇಳುತ್ತಾ ಹೋದರು ನಿರ್ದೇಶಕ ಶೇಖರ್.

ದಿಗಂತ್ ಮತ್ತು ಭಾಮಾ ನಾಯಕ-ನಾಯಕಿಯಾಗಿರುವ `ಬರ್ಫಿ' ಶೇಖರ್ ಅವರ ಮೂರನೇ ಚಿತ್ರ. ಚಿತ್ರದ ಹೆಸರು ಕೇಳಿದಾಗಲೇ ಅನೇಕರು `ಕನ್ನಡದವರದ್ದು ಇದೇ ಹಣೆಬರಹ. ಬೇರೆ ಭಾಷೆಯಲ್ಲಿ ಹಿಟ್ ಸಿನಿಮಾ ಬಂದರೆ ಸಾಕು ಅದನ್ನೇ ಕಾಪಿ ಮಾಡುತ್ತಾರೆ' ಎಂದು ಮೂಗು ಮುರಿದಿದ್ದಿದೆ. ಆದರೆ ಶೇಖರ್ ಹೇಳುವುದು ಹಿಂದಿಯ `ಬರ್ಫಿ' ತಮಗೆ ಸರ್‌ಪ್ರೈಸ್ ಗಿಫ್ಟ್ ಎಂದು! ಏಕೆಂದರೆ ಬಾಲಿವುಡ್ `ಬರ್ಫಿ' ಸೆಟ್ಟೇರುವ ಮೊದಲೇ ಶೇಖರ್ ಕನ್ನಡದಲ್ಲಿ `ಬರ್ಫಿ' ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದರಂತೆ. ಈ ಸಿನಿಮಾಕ್ಕೂ ತಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಟನೆ ಅವರದು.

`ಬರ್ಫಿ' ತಿಂಡಿಯ ಹೆಸರಿನಂತೆ ಸಿನಿಮಾ ಕೂಡ ತುಂಬಾ ಸಿಹಿ ಎನ್ನುತ್ತಾ ಚಿತ್ರರಸಿಕರ `ಬಾಯಿ ಸಿಹಿ ಮಾಡೋಣ' ಎಂದು ಎದ್ದುನಿಂತಿರುವ ಅವರಿಗೆ ಸಿಹಿಯಾದ ಶೀರ್ಷಿಕೆಯ ಸಿನಿಮಾ ತಯಾರಿ ಹಿಂದೆ ಕಹಿ ಅನುಭವವಿದೆ. `ಅಮೃತವಾಣಿ' ಮತ್ತು `ಪೆರೋಲ್' ಎಂಬ ಎರಡು ಸಿನಿಮಾ ನಿರ್ದೇಶಿಸಿದ್ದ ಶೇಖರ್ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದರೂ ಪ್ರೇಕ್ಷಕರು ಸಿಹಿ ನೀಡಿರಲಿಲ್ಲ. ಕಾರಣ ಆ ಸಿನಿಮಾಗಳಲ್ಲಿ ಪ್ರೇಕ್ಷಕರು ಬಯಸುವ ರುಚಿ ಇರಲಿಲ್ಲ ಎನ್ನುವುದು ಅವರಿಗೂ ಅರಿವಾಗಿದೆ. ಸಿನಿಮಾ ಅತಿ ಸೂಕ್ಷ್ಮವಾದುದು. ಅದನ್ನು ಜನರಿಗೆ ತಲುಪಿಸುವ ಕಲೆಯೂ ಸೂಕ್ಷ್ಮ ಎಂಬುದನ್ನು ತಿಳಿದುಕೊಂಡು ಮೊದಲೆರಡು ಸಲ ಎಸಗಿದ ಪ್ರಮಾದ ಮರುಕಳಿಸದಂತೆ ಹದವಾಗಿ ಪಾಕ ಬೆರೆಸಿ `ಬರ್ಫಿ' ತಿನಿಸು ತಯಾರಿಸಿದ್ದಾರಂತೆ.

ಸಿನಿಮಾ ಉಡುಪುಗಳ ನೇಯ್ಗೆ ಇದ್ದಂತೆ. ಶೇಖರ್ ವಿಚಾರದಲ್ಲಿ ಇದು ಹೆಚ್ಚು ಅರ್ಥಪೂರ್ಣ. ಪಿಯುಸಿ ಬಳಿಕ ಓದಿಗೆ ಶರಣು ಹೊಡೆದ ಶೇಖರ್ ಕೈಗೆತ್ತಿಕೊಂಡದ್ದು ಜವಳಿ ಉದ್ಯಮ ವ್ಯವಹಾರವನ್ನು. ಸ್ವತಃ ಉಡುಪುಗಳ ವಿನ್ಯಾಸಕಾರರಾಗಿರುವ ಅವರಿಗೆ ಸಿನಿಮಾ ನೇಕಾರಿಕೆಯೂ ಕಷ್ಟವಾಗಿಲ್ಲ. ವ್ಯವಹಾರದ ಜೊತೆಗಿದ್ದ ಸಿನಿಮಾ ದಾಹವನ್ನು ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ನೋಡುವ ಮೂಲಕ ತಣಿಸಿಕೊಳ್ಳಲು ಪ್ರಯತ್ನಿಸಿದರು. ಅಷ್ಟಕ್ಕೆ ತೃಪ್ತರಾಗದೆ ಸಿನಿಮಾ ಅಂಗಳಕ್ಕೂ ಕಾಲಿರಿಸಿದರು. ಹಿರಿಯ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಬಳಿ ಛಾಯಾಗ್ರಹಣದ ಸೂಕ್ಷ್ಮತೆಗಳನ್ನು ಕಲಿತದ್ದು ಮಾತ್ರ ಅವರು ಚಿತ್ರರಂಗದಲ್ಲಿ ಹೇಳಿಸಿಕೊಂಡ ಪಾಠ. ನಿರ್ದೇಶನದ ಪಟ್ಟುಗಳೆಲ್ಲವೂ ಸಿನಿಮಾ ನೋಡಿ ಕಲಿತದ್ದು.

`ಇನ್ನೂ ತುಂಬಾ ವಿಶೇಷತೆಗಳಿವೆ... ಈ ಚಿತ್ರಕ್ಕಾಗಿ ಆಯ್ದುಕೊಂಡ ಸ್ಥಳಗಳೇ ಹೊಸತು. ಪಂಜಾಬಿ ಹುಡುಗಿ ಮತ್ತು ಮಂಗಳೂರು ಹುಡುಗನ ನಡುವಿನ ಪ್ರೇಮಕಥೆ ಇದು. ಮೊದಲಾರ್ಧ ಕಡಲ ತೀರದಲ್ಲಿ ಸಾಗಿದರೆ, ದ್ವಿತೀಯಾರ್ಧದ್ದು ಪಂಜಾಬಿನ ಕಥೆ. ನಿಮಗೆ `ಬೆಳದಿಂಗಳ ಬಾಲೆ' ಚಿತ್ರವೋ, `ಯಾರೇ ನೀನು ಚೆಲುವೆ'ಯೋ ನೆನಪಿಗೆ ಬರಬಹುದು. ಅದಕ್ಕಿಂತಲೂ ಇದು ವಿಭಿನ್ನ ಎಂದು ಹೇಳಬಲ್ಲೆ. ನನ್ನ `ಬರ್ಫಿ' ಯಾಕೆ ಸಿಹಿ ಎಂದು ಹೇಳುತ್ತೇನೆ. ಮಂಗಳೂರಿನ ಚೆಲುವನಿಗೂ, ದೂರದೂರಿನ ಸಿಖ್ಖರ ಚೆಲುವೆಯ ನಡುವಿನ ಪ್ರೀತಿಯೇ ಸಿಹಿ. ದೂರದೂರವಿದ್ದರೂ ಇಬ್ಬರಲ್ಲೂ ಅನೇಕ ಸಾಮ್ಯತೆಗಳು. ಒಂದೇ ಓದು, ವೃತ್ತಿ, ಅಭಿರುಚಿ. ಇಬ್ಬರಿಗೂ `ಬರ್ಫಿ' ತಿಂಡಿ ಎಂದರೆ ಅಚ್ಚುಮೆಚ್ಚು. ಆದಿಯಿಂದ ಅಂತ್ಯದವರೆಗೂ ಹಾಸ್ಯದ ಫ್ಲೇವರ್. ದ್ವಂದ್ವಾರ್ಥದ ಸಂಭಾಷಣೆಯಿಲ್ಲದ, ಎಲ್ಲಾ ವಯೋಮಾನದವರೂ ವೀಕ್ಷಿಸಬಹುದಾದ ಸಿನಿಮಾ. ಏಳು ಮಾಧುರ್ಯಭರಿತ ಹಾಡುಗಳಿವೆ. ಹೀಗಾಗಿ ಶೀರ್ಷಿಕೆ ಮಾತ್ರವಲ್ಲ, ಇಡೀ ಚಿತ್ರವೇ ಸಿಹಿ ಕಣಜ...' ಶೇಖರ್‌ರ ಆತ್ಮವಿಶ್ವಾಸದ ಮಾತುಗಳಿವು.

`ನನ್ನದು ಕೇಳುವಂಥ ಸಿನಿಮಾ ಅಲ್ಲ, ನೋಡುವಂಥ ಸಿನಿಮಾ. ನಿಜ. ಇತ್ತೀಚಿನ ಸಿನಿಮಾಗಳು ಸಂಭಾಷಣೆಯ ಮೇಲೆ ನಿಲ್ಲುತ್ತಿವೆ, ಗೆಲ್ಲುತ್ತಿವೆ. ಅದೇ ನನಗೆ ಭಯ. ನನ್ನ ಪ್ರಕಾರ ಸಿನಿಮಾ ಕಣ್ಣಿನಲ್ಲಿ ನೋಡಿ ಮನಸ್ಸಿಗೆ ಮುಟ್ಟಬೇಕು. ಕಿವಿಯಲ್ಲಿ ಕೇಳಿಬಿಡುವಂತಾಗಬಾರದು. ಆರಂಭದ ಮೂಕಿ ಸಿನಿಮಾಗಳು ನಮ್ಮನ್ನು ತಲುಪಿದ್ದು ಹಾಗೆಯೇ ಅಲ್ಲವೇ?' ಎನ್ನುವ ಶೇಖರ್ ಸಂಭಾಷಣೆಗಿಂತ ದೃಶ್ಯಗಳೇ ಹೆಚ್ಚು ಪರಿಣಾಮಕಾರಿ ಎಂದು ನಂಬಿದ್ದಾರೆ.

ನಾಯಕಿ ವಯೋಲಿನ್ ಪರಿಣಿತೆ, ನಾಯಕ ತಬಲಾ ನುಡಿಸುವುದರಲ್ಲಿ ಪಾರಂಗತ. ಇಬ್ಬರ ಜುಗಲ್‌ಬಂದಿ ಹೇಗಿರಬಹುದು? ಸಮುದ್ರದ ಅಲೆಗಳ ಮೂಲಕ ಭಾವನೆಗಳನ್ನು ತೋರಿಸುವುದನ್ನು ನೋಡಿದ್ದೀರಾ? ಅದು ಈ ಚಿತ್ರದಲ್ಲಿದೆ. ಅಂದಹಾಗೆ, ಈ ಇಬ್ಬರ ನಡುವೆ ಇನ್ನೂ ಒಬ್ಬ ನಾಯಕಿ ಬರುತ್ತಾಳೆ. ಆದರಿದು ತ್ರಿಕೋನ ಪ್ರೇಮಕಥೆಯಲ್ಲ. ಸಂಯುಕ್ತಾ ಬೆಳವಾಡಿ ನಿರ್ವಹಿಸಿರುವ ಈ ಪಾತ್ರವೂ ವಿಶಿಷ್ಟ. ಸಿನಿಮಾ ನೋಡಿದ ಪ್ರತಿಯೊಬ್ಬ ಹುಡುಗಿಗೂ ನನಗೆ ಇಂಥ ಹುಡುಗ ಪ್ರೇಮಿಯಾಗಿ ಸಿಗಬೇಕು ಎಂಬ ಭಾವನೆ ಮೂಡಿಸಿದರೆ, ಹುಡುಗ ನಾಯಕಿಯಂಥ ಪ್ರೇಯಸಿಯನ್ನು ಬಯಸುತ್ತಾನೆ. ಈ ಥೀಮ್ ಆಧಾರವಾಗಿಟ್ಟುಕೊಂಡೇ ಶೇಖರ್ ಕಥೆ ಹೆಣೆದಿದ್ದಾರಂತೆ.

ನಾಯಕಿ ಪಾತ್ರಕ್ಕೆ ಕಂಠದಾನ ಮಾಡಿದ ಅನುಪಮಾ, ಡಬ್ಬಿಂಗ್ ಮುಗಿದ ಕೂಡಲೇ ಹೇಳಿದ ಮಾತು- `ನಾನು ಪ್ರೀತಿಸಿದರೆ ಇಂಥ ಹುಡುಗನನ್ನೇ ಪ್ರೀತಿಸಬೇಕು' ಎಂದು. ಸಿನಿಮಾ ನೋಡಿದವರ ಮನಸ್ಸಿನಲ್ಲೂ ಇಂಥದ್ದೊಂದು ಭಾವ ಮೂಡಿದರೆ `ಬರ್ಫಿ'ಯ ಸಿಹಿಯನ್ನು ಅವರಿಗೆ ಬಡಿಸಿದ ಸಾರ್ಥಕ್ಯ ನನ್ನದು ಎನ್ನುವ ಶೇಖರ್, ಅದಕ್ಕಾಗಿ ಜೂನ್ ಮೊದಲ ವಾರದ ಸಮಯ ನಿಗದಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.