ADVERTISEMENT

ಮಣಿ ಮಣಿ ಮಣಿ...

ಅಮಿತ್ ಎಂ.ಎಸ್.
Published 23 ಆಗಸ್ಟ್ 2012, 19:30 IST
Last Updated 23 ಆಗಸ್ಟ್ 2012, 19:30 IST

ನಟಿ ಪ್ರಿಯಾಮಣಿ ಹೊಸ ಹುರುಪಿನಲ್ಲಿದ್ದಾರೆ. ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಕಣ್ಣೂ ತಮ್ಮತ್ತ ನೆಟ್ಟಿದೆ ಎಂಬುದು ಅವರ ಉತ್ಸಾಹ ಮತ್ತು ನಿರೀಕ್ಷೆ ಎರಡನ್ನೂ ಹೆಚ್ಚಿಸಿದೆ. ಕಾರಣ ಅವರು ಸಯಾಮಿ ಅವಳಿ ಪಾತ್ರದಲ್ಲಿ ನಟಿಸಿರುವ `ಚಾರುಲತಾ~ ತೆರೆಗೆ ಬರಲು ಸಿದ್ಧವಾಗಿರುವುದು. ಈ ಬಗೆಯ ಪಾತ್ರ ಭಾರತೀಯ ಚಿತ್ರರಂಗದಲ್ಲೇ ಮೊದಲನೆಯದು ಎಂಬ ಹೆಮ್ಮೆ ಅವರದು.

ಎರಡು ದೇಹಗಳು ಪರಸ್ಪರ ಬೆಸುಗೆ ಹಾಕಿಕೊಂಡಂತಿರುವ ಸಯಾಮಿ ಅವಳಿ ಸಹೋದರಿಯರ ಪಾತ್ರ ನಿರ್ವಹಣೆ ಅವರಿಗೆ ಸವಾಲು ಎನಿಸಿದ್ದು ನಿಜ. ಈ ಚಿತ್ರವನ್ನು ಪ್ರಿಯಾಮಣಿ ತಮಗೆ ದೊರೆತ ಅಪೂರ್ವ ಅವಕಾಶವೆಂದು ಬಳಸಿಕೊಂಡಿದ್ದಾರೆ.

ಒಟ್ಟಿಗೆ ಎರಡು ಪಾತ್ರಕ್ಕೆ ದೇಹಭಾಷೆ, ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಬಗೆ ಸುಲಭದ ಮಾತಾಗಿರಲಿಲ್ಲ. ಅದರಲ್ಲಿ ಯಶಸ್ವಿಯಾಗಿದ್ದೇನೆ ಎಂಬ ನೆಮ್ಮದಿ ಅವರದು. ಆದರೆ ಈ ಯಶಸ್ಸಿನ ಕಿರೀಟವನ್ನು ತಾವೊಬ್ಬರೇ ತೊಡಲು ಸಿದ್ಧರಿಲ್ಲ. ಚಿತ್ರೀಕರಣ ವೇಳೆ ಸಹಕರಿಸಿದ ದೀಪಿಕಾರಿಗೂ ಕ್ರೆಡಿಟ್ ಅನ್ನು ಅರ್ಪಿಸುತ್ತಾರೆ. ಪ್ರಿಯಾಮಣಿ ಒಂದು ಪಾತ್ರದಲ್ಲಿ ನಟಿಸುವ ವೇಳೆ ಸಯಾಮಿ ದೇಹದ ಇನ್ನೊಂದು ಪಾತ್ರದಂತೆ ನಿಲ್ಲುತ್ತಿದ್ದ ದೀಪಿಕಾರಿಗೂ ಪ್ರಿಯಾಮಣಿ ನಟನೆಯ ಪಾಠ ಹೇಳಿಕೊಟ್ಟಿದ್ದಾರೆ.

ಹಾಸ್ಯ-ಗ್ಲಾಮರ್ ಬೆಸುಗೆ
ಕಥೆ ಕೇಳಿದಾಗ ಪ್ರಿಯಾಮಣಿ ಒಂದು ಕ್ಷಣ ನರ್ವಸ್ ಆಗಿದ್ದರಂತೆ. ಅವರ ನಟನಾ ಸಾಮರ್ಥ್ಯಕ್ಕೆ ಸವಾಲೊಡ್ಡುವ ಪಾತ್ರ ಮಾತ್ರವಲ್ಲದೆ, `ಚಾರುಲತಾ~ ಥ್ರಿಲ್ಲರ್ ಕಥೆಯುಳ್ಳ ಚಿತ್ರ. ಜೊತೆಗೆ ಸೆಂಟಿಮೆಂಟ್, ನವಿರು ಹಾಸ್ಯ ಇದೆ. ಕಥೆಗೆ ಅಗತ್ಯವಾದಷ್ಟು ಗ್ಲಾಮರ್ ಕೂಡ ಇದೆ ಎನ್ನುವ ಪ್ರಿಯಾಮಣಿ ನಿರ್ದೇಶಕ ಪಿ.ಕುಮಾರ್ ಶ್ರಮವನ್ನು ಮೆಚ್ಚುತ್ತಾರೆ.

`ಚಾರುಲತಾ~ ಹಾರರ್ ಚಿತ್ರವಾದರೂ ಮೂಲ ಚಿತ್ರವಾದ ಥಾಯ್‌ನ `ಅಲೋನ್~ನಂತೆ ಸಂಪೂರ್ಣ ಹಾರರ್ ಅಲ್ಲ. ನಮ್ಮ ನೆಲದ ಸಂಸ್ಕೃತಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಇದು ರೀಮೇಕ್ ಅಲ್ಲ. `ಅಲೋನ್~ನಿಂದ ಪ್ರೇರಣೆ ಪಡೆದ ಸಿನಿಮಾ ಎನ್ನುವುದು ಅವರ ಅಭಿಪ್ರಾಯ.

ವೈರುಧ್ಯಗಳ ಸಯಾಮಿ
ಸಯಾಮಿ ಅವಳಿ ಪಾತ್ರಕ್ಕೆ ಅವರು ವಿಶೇಷ ಸಿದ್ಧತೆಗಳನ್ನೇನೂ ಮಾಡಿರಲಿಲ್ಲ. ಎರಡು ದೇಹಗಳಲ್ಲಿ ಒಂದು ಸೌಮ್ಯ, ಮುಗ್ಧ ಹಾಗೂ ತೀರಾ ಸರಳವಾಗಿ ಬದುಕುವ ವ್ಯಕ್ತಿತ್ವವಾದರೆ ಇನ್ನೊಂದು ಅದಕ್ಕೆ ತದ್ವಿರುದ್ಧವಾದ ವರ್ತನೆಯುಳ್ಳ ದೇಹ. ಕನ್ನಡಿಗರಿಗೆ ಅತ್ಯಂತ ವಿಭಿನ್ನ ಚಿತ್ರ ನೀಡುತ್ತಿದ್ದೇವೆ ಎಂಬ ಖುಷಿ ಅವರದು.

ಚಿತ್ರ ನಾಯಕಿ ಪ್ರಧಾನವಾಗಿರುವುದರಿಂದ ತಮ್ಮ ಮೇಲೆ ನಿರೀಕ್ಷೆ ಭಾರ ಹೆಚ್ಚಿದೆ ಎಂಬುದನ್ನು ಪ್ರಿಯಾಮಣಿ ಒಪ್ಪುವುದಿಲ್ಲ. ಇಲ್ಲಿ ತಮ್ಮ ಪಾತ್ರದಷ್ಟೇ ಕಥೆಯೂ ಮಹತ್ವ ಹೊಂದಿದೆ. ಇತರ ಪಾತ್ರಗಳಿಗೂ ಮಹತ್ವವಿದೆ ಎನ್ನುವ ಅವರು, ನಾಯಕಿ ಪ್ರಧಾನ ಚಿತ್ರಗಳ ಟ್ರೆಂಡ್ ಹಿಂದಿಯಲ್ಲಿ ಶುರುವಾದಂತೆ ಕನ್ನಡದಲ್ಲಿಯೂ ಹುಟ್ಟುತ್ತದೆ ಎಂಬ ಬಗ್ಗೆ ನಂಬಿಕೆ ಹೊಂದಿಲ್ಲ.

ತವರಿನ ಕರೆ...
ಕನ್ನಡತಿಯಾದರೂ ಪರಭಾಷೆಗಳಲ್ಲಿ ಹೆಸರು ಮಾಡಿದ ಬಳಿಕವಷ್ಟೇ ಇಲ್ಲಿ ಅವಕಾಶ ಪಡೆದ ಪ್ರಿಯಾಮಣಿಗೆ ಈಗ ಕನ್ನಡದಲ್ಲಿಯೂ ಉತ್ತಮ ಚಿತ್ರಗಳು ಬರುತ್ತಿವೆ ಎಂಬ ಸಂತಸವಿದೆ.

ಇಲ್ಲಿ ಸಿಗುತ್ತಿರುವ ಅವಕಾಶಗಳ ಬಗ್ಗೆ ತೃಪ್ತಿ ಇದೆ. ಹಾಗೆಂದು ಕನ್ನಡಕ್ಕೆ ಸೀಮಿತಗೊಳ್ಳುವ ಮನಸ್ಸು ಅವರದಲ್ಲ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ ಆಫರ್‌ಗಳು ನಿರಂತರವಾಗಿ ಬರುತ್ತಲೇ ಇದೆಯಂತೆ. `ಚಾರುಲತಾ~ ಸಿದ್ಧವಾಗುವವರೆಗೂ ಅವರು ಬೇರಾವ ಚಿತ್ರವನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ದೃಢನಿಶ್ಚಯ ಅವರದ್ದು.

ಶಿವರಾಜ್‌ಕುಮಾರ್ ಜೊತೆ ನಟಿಸಿರುವ `ಲಕ್ಷ್ಮೀ~ ಚಿತ್ರ ಸಿದ್ಧವಾಗುತ್ತಿದೆ. ಕಥೆ ಹಿಡಿಸದಿದ್ದರೆ ಚಿತ್ರವನ್ನು ಅವರು ಒಪ್ಪಿಕೊಳ್ಳುವವರಲ್ಲ. ಹೀಗಾಗಿ ಅನ್ಯಭಾಷೆಯ ಅನೇಕ ಚಿತ್ರಗಳನ್ನು ತಿರಸ್ಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT