ADVERTISEMENT

ಮತ್ತೆ ಅದ್ನಾನ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಬಿಡುವೇ ಇರದ ಸಂಗೀತಯಾನದ ನಂತರ ಒಂದಷ್ಟು ದಿನದ ವಿರಾಮದ ಅಗತ್ಯವಿತ್ತು. ಈ ಅಲ್ಪ ವಿರಾಮವು ನನ್ನನ್ನು ಹಾಗೂ ನನ್ನಲ್ಲಿಯ ಸಂಗೀತವನ್ನೂ ಪುನಶ್ಚೇತನಗೊಳಿಸಿದೆ. ಮತ್ತೆ ಹೊಸ ಅಲ್ಬಂನೊಂದಿಗೆ ಮರಳುತ್ತಿರುವುದು ಖುಷಿ ತರುತ್ತಿದೆ ಎಂದು ಅದ್ನಾನ್ ಸಾಮಿ ಹೇಳಿಕೊಂಡಿದ್ದಾರೆ.

`ಕಭೀ ತೊ ನಜರ್ ಮಿಲಾವೊ~ ಹಾಗೂ `ಲಿಫ್ಟ್ ಕರಾದೆ~ ಎಂಬ ಹಾಡುಗಳಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ ಅದ್ನಾನ್ 1991ರಿಂದ 2010ರವರೆಗೂ ಸಕ್ರಿಯವಾಗಿದ್ದರು. ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಕೆಲವು ಹಿಟ್ ಹಾಡುಗಳನ್ನು ನೀಡಿದರು. 2010ರ `ಮೈ ನೇಮ್ ಈಸ್ ಖಾನ್~ ಚಿತ್ರದ `ಯೇ ಖುದಾ~ ಹಾಡಿನ ನಂತರ ಅವರು ಬಾಲಿವುಡ್‌ನಿಂದ ದೂರವೇ ಉಳಿದಿದ್ದರು.

`ಇಂಥದ್ದೊಂದು ಬಿಡುವಿನ ಅಗತ್ಯವಿತ್ತು. ಮತ್ತಷ್ಟು ಕಲಿಯಲು, ಸಂಗೀತದಲ್ಲಿ ತೊಡಗಿಸಿಕೊಳ್ಳಲು. ಒಬ್ಬ ಕಲಾವಿದ ನಿರಂತರವಾಗಿ ಕಲೆಯನ್ನು ಕೊಡುತ್ತಲೇ ಹೋದರೆ ಖಾಲಿಯಾಗುವ ಸಾಧ್ಯತೆಗಳಿರುತ್ತವೆ. ಇದಕ್ಕೆ ನಾನೂ ಹೊರತಾಗಿರಲಿಲ್ಲ. ನನಗೂ ಹಾಗೆನಿಸತೊಡಗಿತ್ತು. ಪ್ರಜ್ಞಾಪೂರ್ವಕವಾಗಿ ಬಿಡುವು ತೆಗೆದುಕೊಂಡೆ. ಇದೀಗ ಸಂಗೀತ ಲೋಕಕ್ಕೆ ಮರಳಿದ್ದೇನೆ. ಒಂದೆರಡು ಚಿತ್ರಗಳಿಗೆ ಸಂಗೀತ ಸಂಯೋಜಕನಾಗುವ ಅವಕಾಶ ದೊರೆತಿದೆ. ಹೊಸತನ್ನು ಕೊಡುವ ಉತ್ಸಾಹದಲ್ಲಿದ್ದೇನೆ. ಈ ಉತ್ಸಾಹ ಹಾಗೂ ಚೇತನ ನೀಡುವಲ್ಲಿ ಈ ಬಿಡುವಿನ ಪಾತ್ರ ಮಹತ್ವದ್ದು~ ಎಂದು ಅದ್ನಾನ್ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

2009ರಲ್ಲಿ ಬಿಡುಗಡೆ ಗೊಳಿಸಿದ `ಏಕ್ ಲಡ್ಕಿ ದಿವಾನಿಸಿ~ ಅಲ್ಬಂ ನಂತರ ಇದೀಗ `ಪ್ರೆಸ್ ಪ್ಲೇ~ ಎಂಬ ಸಂಗ್ರಹವನ್ನು ಹೊರತರುತ್ತಿದ್ದಾರಂತೆ. ಈ ಸಂಗ್ರಹದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. `ಮೊದಲ ಸಲ ಸೂಫಿ ಹಾಡನ್ನು ಕಂಪೋಸ್ ಮಾಡಿ ಹಾಡಿರುವೆ. ಪಂಜಾಬಿ ಟ್ರ್ಯಾಕ್ ಸಹ ಪ್ರಯತ್ನಿಸಿರುವೆ. ಇವೆರಡೂ ಜನರಿಗೆ ಇಷ್ಟವಾಗುತ್ತವೆ~ ಎನ್ನುವ ನಿರೀಕ್ಷೆ ಇದೆ ಎನ್ನುತ್ತಾರೆ ಅದ್ನಾನ್ ಸಾಮಿ.

ಇದರಲ್ಲಿ ತಮಾಷೆಯೆನಿಸುವಂಥ ಹಾಡುಗಳಿವೆ. ಹೃದಯಸ್ಪರ್ಶಿ ಪ್ರಣಯಗೀತೆಗಳೂ ಇವೆ. ಒಬ್ಬ ಮನುಷ್ಯನನ್ನು ಸಂತಸಪಡಿಸುವ ಎಲ್ಲ ಬಗೆಯ ಟ್ರ್ಯಾಕ್‌ಗಳೂ ಈ ಸಂಗ್ರಹದಲ್ಲಿವೆ ಎನ್ನುತ್ತಾರೆ ಅವರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.