ADVERTISEMENT

ಮನೆಯೆಂಬುದು ನೆಮ್ಮದಿಯ ತಾಣ: ಪುನೀತ್‌

ಸುಮಲತಾ ಎನ್, ಪದ್ಮನಾಭ ಭಟ್ಟ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ಮನೆಯೆಂಬುದು ನೆಮ್ಮದಿಯ ತಾಣ: ಪುನೀತ್‌
ಮನೆಯೆಂಬುದು ನೆಮ್ಮದಿಯ ತಾಣ: ಪುನೀತ್‌   

ಲ್ಲೇ ಹೋದರೂ ಮನಸ್ಸು ಮತ್ತೆ ಮರಳುವುದು ಮನೆಗೇ. ಆ ‘ಮನೆ’ ವಿಶೇಷವಾಗಿರಬೇಕು ಎನ್ನುವುದು ಎಲ್ಲರ ಮನದಲ್ಲಿನ ಸಹಜ ಆಸೆ. ಆದ್ದರಿಂದ ಮನೆಯ ಒಳಾಂಗಣ ವಿನ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ...’

ಹೀಗೆಂದು ಮನೆಯ ಬಗ್ಗೆ ಮಾತು ಆರಂಭಿಸಿದರು ನಟ ಪುನೀತ್ ರಾಜಕುಮಾರ್.

‘ಗೋದ್ರೇಜ್ ಇಂಟೀರಿಯೊ’ ತನ್ನ ಗ್ರಾಹಕರಿಗಾಗಿ ಒಳಾಂಗಣ ಮರುವಿನ್ಯಾಸದ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು. ‘ಅಪ್ಲೋಡ್ ಅಂಡ್ ಟ್ರಾನ್ಸ್‌ಫಾರ್ಮ್’ ಎಂಬ ಈ ಅಭಿಯಾನದ ಅಂಗವಾಗಿ ಪುನೀತ್ ರಾಜ್‌ಕುಮಾರ್ ಅವರ ಮನೆಯ ಒಳಾಂಗಣವನ್ನು ಸಂಪೂರ್ಣವಾಗಿ ಮರುವಿನ್ಯಾಸ ಮಾಡಲಾಗಿದೆ.

ವಿನ್ಯಾಸದಿಂದ ಮನೆಗೆ ಹೊಸ ಛಾಪು ಮೂಡಿಸುವುದು ಈ ಅಭಿಯಾನದ ಮುಖ್ಯ ಅಂಶ. ಪುನೀತ್ ಅವರ ಎರಡನೇ ಮನೆಯ ಒಳಾಂಗಣ ವಿನ್ಯಾಸಕ್ಕೆ ಗೋದ್ರೇಜ್ ಪೀಠೋಪಕರಣ ಹಾಗೂ ಹಲವು ಒಳಾಂಗಣ ಪರಿಕರಗಳನ್ನ ಬಳಸಲಾಗಿದೆ.

ಆ ವಿನ್ಯಾಸದ ರೂಪು ರೇಷೆಯನ್ನು ಅನಾವರಣಗೊಳಿಸಲೆಂದು ಐಟಿಸಿ ವಿಂಡ್ಸರ್ ಹೋಟೆಲ್‌ನಲ್ಲಿ ಗೋದ್ರೇಜ್ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಅಲ್ಲಿ ಪುನೀತ್‌ ರಾಜಕುಮಾರ್ ಅವರು ತಮ್ಮ ಮನೆ ಬದಲಾದ, ಮರುವಿನ್ಯಾಸಗೊಂಡ ಪರಿಯನ್ನು ಬಿಡಿಸಿಟ್ಟರು. ಮನೆ ಕುರಿತು ಅವರೊಂದಿಗೆ ನಡೆಸಿದ ಚುಟುಕು ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ನಿಮ್ಮ ಪ್ರಕಾರ ‘ಮನೆ’ ಹೇಗಿರಬೇಕು?
ಮನೆ ಎಂದರೆ ಎಲ್ಲ ಗೋಜಲಿನಿಂದ ದೂರ ಉಳಿಸುವ ಜಾಗ. ಎಲ್ಲೇ ಹೋದರೂ ಮನಸ್ಸು ಮತ್ತೆ ಮತ್ತೆ ಬಯಸುವುದು ಮನೆಯನ್ನು. ಮನೆ ಎಂದರೆ ಆರಾಮಾಗಿರುವ ಜಾಗ. ಎಲ್ಲೇ ಶೂಟಿಂಗ್ ನಡೆಯಲಿ, ಬೇರೆ ಕಾರ್ಯಕ್ರಮ ಇದ್ದರೆ, ಎಲ್ಲಿಗೆ ಹೋದರೂ ಮನೆಗೆ ಮರಳಲು ಮನಸ್ಸು ಕಾತರಿಸುತ್ತಿರುತ್ತದೆ.

ನಾವು ನಾವಾಗಿ, ನಮ್ಮ ಇಷ್ಟದಂತೆ ಇರಲು ಸಾಧ್ಯವಾಗುವುದು ಮನೆಯಲ್ಲಿ ಮಾತ್ರ. ಅದೊಂದು ನೆಮ್ಮದಿಯ ತಾಣ.  ಎಲ್ಲಾ ಒತ್ತಡಗಳನ್ನೂ ಕಳೆಯುವ  ಜಾಗ. ಆದ್ದರಿಂದ ಆ ಮನೆ ಚೆಂದವಿರಬೇಕು ಎಂಬುದು ನನ್ನ ಅಭಿಲಾಷೆ. ಮನೆಯೆಂಬುದು ನಮ್ಮ ಮನದ ಪ್ರತಿಬಿಂಬವೂ ಹೌದು.

* ಗೋದ್ರೇಜ್ ಇಂಟೀರಿಯೊ ಅಭಿಯಾನದ ಬಗ್ಗೆ ಹೇಳಿ...
ನನ್ನದೊಂದು ಗೆಸ್ಟ್ ಹೌಸ್‌ ಇದೆ.  ಆ ಜಾಗವನ್ನು ಹೊಸ ಆಲೋಚನೆಗಳೊಂದಿಗೆ ವಿನ್ಯಾಸ ಮಾಡುತ್ತೇವೆ ಎಂದು ಗೋದ್ರೇಜ್‌ನವರು ಹೇಳಿದರು.
ಈ ಬ್ರ್ಯಾಂಡ್‌ ಬಗ್ಗೆ ಚಿಕ್ಕವನಿದ್ದಾಗಿನಿಂದಲೂ ಕೇಳುತ್ತಲೇ ಇದ್ದೆ. ಆಗಿನ ಕಾಲದಲ್ಲೂ ಎಲ್ಲಾ ಮನೆಯಲ್ಲೂ ಗೋದ್ರೇಜ್‌ನ ಅಲ್ಮೆರಾವಂತೂ ಇದ್ದೇ ಇರುತ್ತಿತ್ತು. ಆದ್ದರಿಂದ ನಂಬಿಕೆ ಇಟ್ಟು ವಿನ್ಯಾಸಕ್ಕೆ ಒಪ್ಪಿದೆ.

ಮೊದಲು ಸ್ಕೆಚ್ ಹಾಕಿ ತೋರಿಸಿದರು. ನಂತರ ವಿನ್ಯಾಸದ ಸ್ವರೂಪ ಹೇಗಿರುತ್ತದೆ ಎಂಬ ಬಗ್ಗೆ ಫೋಟೊ, ವಿಡಿಯೊ ಪ್ರೆಸೆಂಟೇಷನ್ ಮಾಡಿ ತೋರಿಸಿದರು. ಹೀಗಿದ್ದರೂ ನನಗೆ ಆತಂಕ ಇದ್ದೇ ಇತ್ತು. ಆದರೆ, ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬಂತು.

* ನೀವು ಯಾವ ಬಗೆಯ ವಿನ್ಯಾಸವನ್ನು ಇಷ್ಟಪಡುತ್ತೀರಿ?
ನನಗೆ ಆಧುನಿಕತೆ ತುಂಬಾ ಇಷ್ಟ. ಅದೇ ನನ್ನ ಶೈಲಿ ಕೂಡ. ಈ ಮನೆಯ ವಿನ್ಯಾಸ ಸಮಕಾಲೀನ ಶೈಲಿಯಲ್ಲಿದೆ. ಪಾಶ್ಚಾತ್ಯ ಶೈಲಿಯ ಪ್ರಭಾವ ಕಾಣಿಸುತ್ತದೆ. ಐಷಾರಾಮಿ ಎನಿಸುವ ವಿನ್ಯಾಸ ಮನೆಗೆ ದಕ್ಕಿದೆ.

*ಮನೆಗೆ ಮನಸಿಗೊಪ್ಪುವ ವಿನ್ಯಾಸ ಎಷ್ಟು ಮುಖ್ಯ?
ನಮ್ಮ ಅಮೂಲ್ಯ ಸಮಯವನ್ನು ಕಳೆಯುವುದೇ ಮನೆಯಲ್ಲಿ.  ಆದ್ದರಿಂದ ಮನೆ ಸುಂದರವಾಗಿ ಇರಲೇಬೇಕು ಎಂಬುದು ನನ್ನ ನಂಬಿಕೆ. ಜೊತೆಗೆ  ಮನೆಯ ವಿನ್ಯಾಸ ನಮ್ಮ ಅಭಿರುಚಿಯೂ ತೋರುತ್ತದೆ.  ಆದ್ದರಿಂದ ಅದು ತುಂಬಾ ಮುಖ್ಯವಾಗುತ್ತದೆ. ಆದರೆ ವಿನ್ಯಾಸ ಎನ್ನುವುದು ನಮ್ಮ ಅಭಿರುಚಿ, ನಾವು ಆರಾಮವನ್ನು ಬಯಸುವ ಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.

*ನಿಮ್ಮ ಮನೆ ಹೇಗಿರಬೇಕೆಂದು ಬಯಸಿದ್ದೀರಿ?
ಮನೆಯ ವಿನ್ಯಾಸ ಅಚ್ಚುಕಟ್ಟಾಗಿರಬೇಕು. ಮನೆಯಲ್ಲಿಯೇ ನಮಗೆ ಇಷ್ಟವಾಗುವ ಕೆಲವು ಸ್ಥಳಗಳಿರುತ್ತವಲ್ಲ, ಆ ವಿಶೇಷ ಜಾಗಗಳು ಪ್ರಶಾಂತವಾಗಿರಬೇಕು. ನನಗೆ ಗಾಢ ಬಣ್ಣಗಳು ಇಷ್ಟವಾಗುವುದಿಲ್ಲ. ಶೇಡ್‌ಗಳೂ ಹಿಡಿಸುವುದಿಲ್ಲ. ತಿಳಿ ಬಣ್ಣಗಳು ಕಣ್ಣಿಗೆ ಹಿತ. ಮನಸ್ಸಿಗೂ ಹಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.