ADVERTISEMENT

ರವಿಚಂದ್ರನ್ ಕಂಠ ಮಾತಿನ ನಿಜ ನೆಂಟ

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಹೊಲೆಯು, ಮಾತಿನಿಂ ಸರ್ವ ಸಂಪದವು, ಜಗಕೆ ಮಾತೆ ಮಾಣಿಕವು ಸರ್ವಜ್ಞ ಎಂಬ ನುಡಿ ಅಕ್ಷರ ಸಹ ಸತ್ಯ.

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ನಮ್ಮ `ಮಾತಿಗೆ~ ಬೆಲೆ ಗೌರವ ನೀಡುತ್ತಿರಲಿಲ್ಲ. ಅನಿವಾರ್ಯವೆಂಬಂತೆ ನಮ್ಮನ್ನು ದುಡಿಸಿಕೊಂಡು ಮೂಲೆಗುಂಪು ಮಾಡುತ್ತಿದ್ದರು. ಚಿತ್ರ ಶತದಿನ ಆಚರಿಸಿಕೊಂಡಾಗಲೆಲ್ಲ ಉತ್ಸವ ಏರ್ಪಡಿಸಿ ಎಲ್ಲಾ ಕಲಾವಿದರನ್ನು ವೇದಿಕೆಗೆ ಕರೆದು ಸನ್ಮಾನಿಸುತ್ತಿದ್ದರು. ಆದರೆ `ಮಾತಿನ~ ಹಿಂದೆ ದುಡಿದ ಎಲೆಮರೆ ಕಾಯಿಗಳನ್ನು ಗುರುತಿಸುವ ಪರಿಪಾಠವೇ ಇರಲಿಲ್ಲ. ಕೊನೆಗೆ ನಮ್ಮ ಮಾತಿಗೂ ಬೆಲೆ ಕೊಡಿ ಎಂದು ಜಗಳ ಕಾಯಬೇಕಾಯಿತು. ಎಂಥ ದುರ್ದೈವ್ಯ ನೋಡಿ...

ಕನ್ನಡ ಚಿತ್ರರಂಗ ಕಂಠದಾನ ಕಲಾವಿದರಿಂದ ದುಡಿಸಿಕೊಂಡದ್ದಕ್ಕೆ ತಕ್ಕ ಪ್ರತಿಫಲವನ್ನು ಈವರೆಗೆ ನೀಡಿಲ್ಲ. ಡಬ್ಬಿಂಗ್ ಒಂದು ವಿಶೇಷ ಕಲೆ. ಅದು ಸುಲಭದಲ್ಲಿ ಕರಗತವಾಗುವಂತದಲ್ಲ. ನಟನಾ ಸಂದರ್ಭದಲ್ಲಿ ನಾವು ನೇರವಾಗಿ ಅಭಿನಯಿಸದಿದ್ದರೂ ಅದೇ ಭಾವಪೂರ್ಣತೆಯನ್ನು ದನಿಯಲ್ಲಿ ತುಂಬಬೇಕು. ದೃಶ್ಯದ ಗಂಭೀರತೆಯನ್ನು ಅರಿತು ಅದಕ್ಕೆ ತಕ್ಕಂತೆ ಸ್ವರದ ಏರಿಳಿತ ಮಾಡಿಕೊಳ್ಳಬೇಕು. ನಟನ ತುಟಿ ಚಲನೆಗೆ ಅನುಗುಣವಾಗಿ ಭಾವತುಂಬಿ ದನಿ ನೀಡಬೇಕು. ನಮ್ಮದಲ್ಲದ ಅನುಭವವನ್ನು ನಮ್ಮದಾಗಿಸಿ ಭಾವ ಮುಕ್ಕಾಗದಂತೆ ಮಾತು ಹೆಣೆಯುವುದು ಸುಲಭವೇನಲ್ಲ.

ADVERTISEMENT

ನಾಯಕನ ಪಾತ್ರವೊಂದಕ್ಕೆ ಹಿನ್ನೆಲೆ ದನಿ ನೀಡುವುದೆಂದರೆ ಅದು ಕನಿಷ್ಠ ಎರಡು ದಿನಗಳ ಕೆಲಸ. ಕಣ್ಣು, ಕಿವಿ ಹಾಗೂ ಮನಸ್ಸಿನ ಸತತ ದುಡಿಮೆಯಿಂದ ಆಯಾಸ ಕಾಡುವುದೂ ಉಂಟು. ಒಂದು ಚಿತ್ರದ ಯಶಸ್ಸಿನ ಶೇ.40ರಷ್ಟು ಭಾಗ ಆಂಗಿಕ ಅಭಿನಯಕ್ಕೆ ದೊರೆತರೆ ಉಳಿದ 60 ಭಾಗ ಮಾತಿಗೆ ಸಲ್ಲುತ್ತದೆ. ಸಾಹಸ ದೃಶ್ಯಗಳಲ್ಲಿ ನಾಯಕನ ಮಾತು ಕೀರಲು ದನಿಯಿಂದ ಇದ್ದರೆ ಅಲ್ಲಿನ ಸ್ಥಾಯಿಭಾವ ಜೀವಂತಿಕೆ ಕಳೆದುಕೊಳ್ಳುತ್ತದೆ. ಅದಕ್ಕಾಗಿ ದೃಶ್ಯದ ಹಿಂದು ಮುಂದಿನ ಔಚಿತ್ಯಗಳನ್ನು ತಿಳಿದುಕೊಳ್ಳುವುದೂ ಮುಖ್ಯವಾಗುತ್ತದೆ.

14 ವರ್ಷ ದೂರದರ್ಶನದಲ್ಲಿ ಪ್ರೋಗ್ರಾಂ ಆಫೀಸರ್ ಆಗಿ ದುಡಿದ ಬಳಿಕ 1998ರಲ್ಲಿ ನಿವೃತ್ತಿ ಪಡೆದೆ. ಅದಾಗಲೇ ರವಿಚಂದ್ರನ್ ನಟನೆಯ ಸಾವಿರಸುಳ್ಳು, ಪ್ರೇಮಲೋಕ, ಅಂಜದ ಗಂಡು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚಿನ ಚಿತ್ರಗಳಿಗೆ ದನಿ ನೀಡಿದೆ. ಶಿವರಾಂ, ಅನಿಲ್ ಅವರ ಕೆಲವು ಚಿತ್ರಗಳಿಗೂ ಡಬ್ಬಿಂಗ್ ಮಾಡಿದ್ದಿದೆ.

ಆ ಕಾಲದಲ್ಲಿ ಡಿಜಿಟಲ್ ವಿಸ್ಮಯಗಳು ಇನ್ನೂ ಕಾಲಿಟ್ಟಿರಲಿಲ್ಲ. ಪ್ರತಿ ಡೈಲಾಗ್‌ಗೂ ಶಾಟ್‌ಗಳನ್ನು ಮತ್ತೆ ಮತ್ತೆ ಪ್ಲೇ ಮಾಡಬೇಕಿತ್ತು. ಎಲ್ಲಾ ನಟನಟಿಯರನ್ನು ಒಂದೆಡೆ ಕಲೆಹಾಕಿ ಒಂದೇ ಸಮಯದಲ್ಲಿ ದನಿ ನೀಡಬೇಕಿತ್ತು. ಎಲ್ಲಾ ಸರಿಹೋಯಿತು ಎನ್ನುವಷ್ಟರಲ್ಲಿ ಎಂಜಿನಿಯರಿಂಗ್ ವಿಭಾಗದ ಮಂದಿ ಸ್ವರ ಸ್ವಲ್ಪ ಮೆದುವಾಗಿದೆ, ಗಡುಸಾಗಬೇಕಿತ್ತು ಎಂದು ಮತ್ತೆ ಶಾಟ್‌ಗೆ ಅಣಿಯಾಗುತ್ತಿದ್ದರು. 

ಪರಭಾಷೆ ನಟ/ನಟಿಯರು ಬಂದಾಗ ಡಬ್ಬಿಂಗ್ ಅನಿವಾರ್ಯ. ಇಲ್ಲಿ ಶಾರೀರಿಕ ಸೌಂದರ್ಯದ ಅಗತ್ಯವಿಲ್ಲ. ಉತ್ತಮ ದನಿ, ಅಚ್ಚ ಕನ್ನಡದಲ್ಲಿ, ಸ್ಪಷ್ಟವಾಗಿ ಹೇಳುವ ತಾಂತ್ರಿಕ ಕಲೆ ಒಲಿದಿದ್ದರೆ ಸಾಕು. ನಾನು ಈ ಕ್ಷೇತ್ರದ ಕನಸು ಕಂಡು ಬಂದವನಲ್ಲ. ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಗುತ್ತಿದ್ದ ಬಿಡುವಿನ ಸಮಯದಲ್ಲಿ ಡಬ್ಬಿಂಗ್ ಆರಂಭಿಸಿದೆ. ಬಳಿಕ ಅದು ಆಸಕ್ತಿಯ ಕ್ಷೇತ್ರವೂ ಆಯಿತು.

ಹಾಸನ ಜಿಲ್ಲೆಯ ಅರಕಲಗೂಡು ನಮ್ಮ ಊರು. ಕನ್ನಡ ಎಂ.ಎ ಬಳಿಕ ದೆಹಲಿ ಎನ್‌ಎಸ್‌ಡಿಯಲ್ಲಿ ನಾಟಕದ ಪದವಿ ಪಡೆದೆ. ರಂಗಭೂಮಿಯನ್ನೇ ತಾಯ್ನೆಲವಾಗಿಸಿ ಹಲವಾರು ನಾಟಕಗಳಲ್ಲಿ ದುಡಿದೆ. ದೂರದರ್ಶನ ಆರಂಭವಾದ ಕಾಲಘಟ್ಟದಲ್ಲಿ ಅಲ್ಲಿಗೆ ಸೇರ್ಪಡೆಗೊಂಡೆ. ನಿವೃತ್ತನಾದ ಬಳಿಕ ಧಾರಾವಾಹಿ ಹಾಗೂ ಚಿತ್ರರಂಗದ ನಟನೆ ಹಾಗು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದೇನೆ. `ಪರಿ~, `ಕ್ರೇಜಿಲೋಕ~, `ಬೀಟ್~ ಸದ್ಯದಲ್ಲೇ ಬಿಡುಗಡೆಯಾಗಲಿರುವ ಇತರೆ ಚಿತ್ರಗಳು. ಪತ್ತೇದಾರಿ ನನ್ನ ಇನ್ನೊಂದು ಆಸಕ್ತಿಯ ಕ್ಷೇತ್ರವಾದ್ದರಿಂದ ಝೀ ಕನ್ನಡಕ್ಕೆ `ಡಿಟೆಕ್ಟಿವ್ ಧನುಷ್~ ಎಂಬ ವಿಶಿಷ್ಟ ಕಾರ್ಯಕ್ರಮವನ್ನೂ ರೂಪಿಸಿಕೊಟ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.