ADVERTISEMENT

ರಾಮಭಕ್ತೆಯ ಒಲವಿನ ಮಾತು

ರೇಷ್ಮಾ ಶೆಟ್ಟಿ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಜೀವಿತಾ
ಜೀವಿತಾ   

ಆಕೆ ರಾಮಭಕ್ತೆ. ರಾಮನೇ ತನ್ನ ಇನಿಯ, ಉಸಿರು, ಪ್ರಪಂಚ ಎಂದುಕೊಂಡು ಬದುಕುತ್ತಿರುತ್ತಾಳೆ. ದೂರವಾಗಿರುವ ರಾಮ ಸೀತೆಯನ್ನು ಒಂದು ಮಾಡಲು ಒಲ್ಲದ ಮದುವೆಯೂ ಆಗಿ, ಪಟ್ಟಣ ಸೇರುವ ಆ ಮುಗ್ಧ ಹುಡುಗಿಯ ಹೆಸರು ಜಾನಕಿ. ಆಕೆಯೇ ‘ಜಾನಕಿ ರಾಘವ’ ಧಾರಾವಾಹಿಯ ಕಥಾನಾಯಕಿ.

ಈ ಆಧುನಿಕ ಜಾನಕಿಯ ನಿಜನಾಮಧೇಯ ಜೀವಿತಾ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿರುವ ಅವರಿಗೆ ಬಾಲ್ಯದಿಂದಲೂ ಕಲೆಯ ಮೇಲೆ ಹಿಡಿ ಪ್ರೀತಿ ಜಾಸ್ತಿ. ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಿದ್ದರು. ನಟನೆಗೆ ಇಳಿಯುವ ಮೊದಲು ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಈ ಸುಂದರಿ ಮೂರು ವರ್ಷದಿಂದ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

ಸಭೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕಾರಣಕ್ಕೆ ನಟನೆ, ನೃತ್ಯ ಯಾವುದನ್ನೇ ಆಗಲಿ ಆತ್ಮವಿಶ್ವಾಸದಿಂದ ಮಾಡುವ ಛಲ ಹುಟ್ಟಿಕೊಂಡಿತು ಎನ್ನುವ ಜೀವಿತಾಗೆ ಇದು ಮೊದಲ ಧಾರಾವಾಹಿ. ಆಕಸ್ಮಿಕವಾಗಿ ಸಿಕ್ಕ ಪಾತ್ರಕ್ಕೆ ಛಲದಿಂದಲೇ ಜೀವ ತುಂಬುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

ADVERTISEMENT

‘ಈ ಧಾರಾವಾಹಿಯಲ್ಲಿ ನನ್ನದು ತುಂಬಾ ಸೈಲೆಂಟ್ ಆಗಿರುವ ಹಳ್ಳಿ ಹುಡುಗಿಯ ಪಾತ್ರ. ಹಳ್ಳಿಯಲ್ಲಿರುವ ಎಲ್ಲರಿಗೂ ಜಾನಕಿ ಕಂಡರೆ ಇಷ್ಟ. ರಾಮ ಎಂದರೆ ಅವಳಿಗೆ ತುಂಬಾ ಪ್ರೀತಿ. ಕದ್ದುಮುಚ್ಚಿ ಹೋಗಿ ರಾಮನಿಗೆ ಪೂಜೆ ಮಾಡುತ್ತಿರುತ್ತಾಳೆ. ತನಗೆ ಯಾರೂ ಬೇಡ ರಾಮನೇ ಎಲ್ಲಾ ಎಂದುಕೊಂಡು ಬದುಕುವ ಹುಡುಗಿ ಪಾತ್ರ ನನ್ನದು’ ಎಂದು ವಿವರಿಸುತ್ತಾರೆ.

ಧಾರಾವಾಹಿ ಪಾತ್ರಕ್ಕೂ ನಿಜಜೀವನಕ್ಕೂ ಸಂ‍ಪೂರ್ಣ ವೈರುಧ್ಯವಿದೆ ಎನ್ನುವ ಅವರು, ಮೊದಲ ಬಾರಿ ಕಥೆ ಕೇಳಿದಾಗ ‘ನಾನು ಮಾಡರ್ನ್‌ ಹುಡುಗಿ, ನನ್ನ ಮನೋಭಾವವೇ ಬೇರೆ. ನನ್ನಿಂದ ಹಳ್ಳಿ ಹುಡುಗಿಯಾಗಿ ಲಂಗ–ದಾವಣಿ, ಎರಡು ಜಡೆ ಹಾಕಿಕೊಂಡು ಮುಗ್ಧಳಂತೆ ನಟಿಸಲು ಸಾಧ್ಯವೇ? ಬೋಲ್ಡ್ ಆಗಿ, ಟಾಮ್‌ಬಾಯ್ ಥರ ಬೆಳೆದ ನಾನು ಧಾರಾವಾಹಿಯಲ್ಲಿ ಎಲ್ಲರಿಗೂ ಹೆದರಿಕೊಂಡು ಬದುಕುವ ಜಾನಕಿಯ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಗುವುದೇ’ ಎಂದು ಯೋಚಿಸಿದ್ದರಂತೆ.

ಧಾರಾವಾಹಿಯಲ್ಲಿ ಅವಕಾಶ ಸಿಕ್ಕು ಜಾನಕಿ ಪಾತ್ರದಲ್ಲಿ ನಟಿಸುತ್ತಾರೆ ಎಂದಾಗ ಅನೇಕರು ‘ನಿನ್ನಿಂದ ಈ ಪಾತ್ರದಲ್ಲಿ ನಟಿಸಲು ಸಾಧ್ಯವೇ ಇಲ್ಲ‍’ ಎಂದಿದ್ದರಂತೆ. ‘ಆಗೋಲ್ಲ’ ಎನ್ನುವುದನ್ನೇ ಆಗುತ್ತೆ ಎಂದುಕೊಂಡು ಸವಾಲಾಗಿ ಸ್ವೀಕರಿಸಿದ ಅವರು, ಆಗ ಆಗೋಲ್ಲ ಎಂದ ಜನರೇ ಈಗ ಮೂಗಿನ ಮೇಲೆ ಬೆರಳಿಟ್ಟು ಇದು ನೀನೇನಾ? ಎನ್ನುವಷ್ಟರ ಮಟ್ಟಿಗೆ ಆಶ್ಚರ್ಯವ್ಯಕ್ತಪಡಿಸುವಂತೆ ನಟಿಸಿ ತೋರಿದ್ದೇನೆ ಎಂದು ಸಂತಸದಿಂದ ಹೇಳುತ್ತಾರೆ.

ನಿಜಜೀವನದಲ್ಲಿ ಮಾಡಿಲ್ಲದ್ದನ್ನು ನಟನೆಯಲ್ಲಿ ಮಾಡುವುದು ನಿಜಕ್ಕೂ ನನಗೆ ಖುಷಿ ಕೊಡುತ್ತದೆ. ನಮ್ಮದಲ್ಲದ ಪಾತ್ರಕ್ಕೆ ನಾವು ಜೀವ ತುಂಬುವುದೇ ನಿಜವಾದ ನಟನೆ ಎನ್ನುವುದು ಅವರ ಅನುಭವದ ಮಾತು.

ನಟನೆಯಾಗಲಿ, ಬೇರೆ ಯಾವುದೇ ಕೆಲಸವಾಗಲಿ ಮನೆಯವರು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಾರಂತೆ. ಯಾವುದೇ ಕಾರ್ಯಕ್ರಮವಾಗಲಿ ಅದಕ್ಕೆ ಬೇಕಾದ ಬಟ್ಟೆ, ಆ ಕಾರ್ಯಕ್ರಮದಲ್ಲಿ ಅವರ ಹಾವಭಾವ ಪ್ರತಿಯೊಂದಕ್ಕೂ ಮನೆಯವರು ಸಲಹೆ ನೀಡುತ್ತಾರಂತೆ. ಧಾರಾವಾಹಿಯಲ್ಲಿ ಸಂಚಿಕೆಗಳನ್ನು ನೋಡಿ ಏನು ಬದಲಾವಣೆಯಾಗಿತ್ತು. ಆ ಪಾತ್ರವನ್ನು ಇನ್ನಷ್ಟು ಹೇಗೆ ಸುಧಾರಿಸಬಹುದಿತ್ತು ಎಂಬುದೆಲ್ಲವನ್ನು ಅವರಿಗೆ ತಿಳಿಸುವ ಮೂಲಕ ನಟನೆಯ ಆಸಕ್ತಿಗೆ ಇನ್ನಷ್ಟು ಒತ್ತಾಸೆಯಾಗಿದ್ದಾರಂತೆ.

ಸಿನಿಮಾದಲ್ಲಿ ನಟಿಸುವ ಇರಾದೆ ವ್ಯಕ್ತಪಡಿಸುತ್ತ, ‘ಮುಂದಿನ ದಿನಗಳಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಹಾಗೂ ನೈಜತೆಗೆ ಹತ್ತಿರವಾಗಿರುವ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.