ADVERTISEMENT

`ವಿಜಲ್' ನಿರ್ದೇಶಕರ ಥ್ರಿಲ್

ಚ.ಹ.ರಘುನಾಥ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST
ಚಿರಂಜೀವಿ ಸರ್ಜಾ, ಪ್ರಣೀತಾ
ಚಿರಂಜೀವಿ ಸರ್ಜಾ, ಪ್ರಣೀತಾ   

`ಶ್', `ಆಪ್ತಮಿತ್ರ' ಚಿತ್ರಗಳ ನಂತರ ಕನ್ನಡ ಚಿತ್ರರಂಗ ಕಾಣುತ್ತಿರುವ ಅದ್ಭುತ ಥ್ರಿಲ್ಲರ್ `ವಿಜಲ್'.
ನಿರ್ದೇಶಕ ಪ್ರಶಾಂತ್‌ರಾಜ್ ಅವರ ಮಾತುಗಳಲ್ಲಿ ಆತ್ಮವಿಶ್ವಾಸ ತುಳುಕುತ್ತಿತ್ತು. ಎಲ್ಲ ನಿರ್ದೇಶಕರೂ ತಮ್ಮ ಸಿನಿಮಾಗಳ ಬಗ್ಗೆ ಹೇಳಿಕೊಳ್ಳುವುದು ಹೀಗೆಯೇ ಅಲ್ಲವೇ? ಪ್ರಶ್ನೆಯ ಮುಂದಿನ ಭಾಗವನ್ನು ಅರ್ಥ ಮಾಡಿಕೊಂಡವರಂತೆ ಅವರು ಹೇಳಿದರು- “ನನ್ನದು ಪೊಳ್ಳು ಆತ್ಮವಿಶ್ವಾಸವಲ್ಲ. ಧನಾತ್ಮಕ ಆತ್ಮವಿಶ್ವಾಸ. ಅದು ನನ್ನ ಕೆಲಸದ ಮೇಲಿನ ನಂಬಿಕೆ. ಸಿನಿಮಾದಲ್ಲಿ ಒಂದು ಗೀತೆಯನ್ನು ನಾನು ಹಾಡಿದ್ದೇನೆ. ಸಿನಿಮಾಕ್ಕೆ ಬಂದ ದಿನದಿಂದಲೂ ಹಾಡಬೇಕು ಎನ್ನುವ ಆಸೆಯಿತ್ತು. ಈಗ `ವಿಜಲ್' ಚಿತ್ರಕ್ಕೆ ತುಂಬ ಪ್ರೀತಿಯಿಂದ ಹಾಡಿದ್ದೇನೆ. ಆದರೆ ಈ ಹಾಡು ಸಿನಿಮಾದಲ್ಲಿ ಸೇರ್ಪಡೆಗೊಳ್ಳುವುದು ಚಿತ್ರ ತೆರೆಕಂಡ ಇಪ್ಪತ್ತೈದು ದಿನಗಳ ನಂತರ...”

ತೆರೆಕಂಡ ಚಿತ್ರವೊಂದು ವಾರ ಕಾಲ ಪ್ರದರ್ಶನ ಕಾಣುವುದು ಕಷ್ಟವಾಗಿರುವಾಗ ತನ್ನ ಸಿನಿಮಾ ಕನಿಷ್ಠ ಇಪ್ಪತ್ತೈದು ದಿನಗಳ ಕಾಲ ಓಡುತ್ತದೆಂದು ನಿರ್ದೇಶಕ ಭಾವಿಸಿದರೆ, ಅದನ್ನು ಪೊಳ್ಳು ಆತ್ಮವಿಶ್ವಾಸ ಎನ್ನುವುದಾದರೂ ಹೇಗೆ?

ಕನ್ನಡದ ಹೊಸ ಪೀಳಿಗೆಯ ಭರವಸೆಯ ನಿರ್ದೇಶಕರಲ್ಲಿ ಪ್ರಶಾಂತ್ ರಾಜ್ ಕೂಡ ಒಬ್ಬರು. ಅವರ ಚೊಚ್ಚಿಲ ನಿರ್ದೇಶನದ `ಲವ್ ಗುರು' ಗಲ್ಲಾಪೆಟ್ಟಿಗೆ ಯಶಸ್ಸಿನ ಜೊತೆಗೆ ರಾಜ್ಯಪ್ರಶಸ್ತಿಯನ್ನೂ ಪಡೆದಿತ್ತು. ಎರಡನೇ ಸಿನಿಮಾ `ಗಾನಬಜಾನಾ' ದೊಡ್ಡ ಸದ್ದು ಮಾಡದಿದ್ದರೂ ಆ ಚಿತ್ರದಲ್ಲಿನ ನಿರ್ದೇಶಕರ ಕಸುಬುದಾರಿಕೆ ಗಮನಸೆಳೆಯುವಂತಿತ್ತು. ಆ ಕಾರಣದಿಂದಲೇ ಪ್ರಶಾಂತ್‌ರ ಮೂರನೇ ಸಿನಿಮಾ `ವಿಜಲ್'  ಕೂಡ ನಿರೀಕ್ಷೆಗಳನ್ನು ಹುಟ್ಟಿಸುತ್ತಿದೆ.

`ವಿಜಲ್' ಬಗೆಗಿನ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡವರಂತೆ ಪ್ರಶಾಂತ್ ಹೇಳುವುದು- `ನನ್ನ ಸಿನಿಮಾ ಯಾರ ನಿರೀಕ್ಷೆಗಳನ್ನೂ ಹುಸಿಗೊಳಿಸುವುದಿಲ್ಲ'. ಅಂದಹಾಗೆ, ಈ ಸಿನಿಮಾದ ವಿಶೇಷಗಳಾದರೂ ಏನು?

`ತಾಂತ್ರಿಕವಾಗಿ ಇದು ಅತ್ಯುತ್ತಮ ಸಿನಿಮಾ. ನ್ಯೂಯಾರ್ಕ್‌ನಲ್ಲಿ ಧ್ವನಿ ಸಂಸ್ಕರಣೆ ಮಾಡಿದ್ದೇವೆ. ಎರಡು ತಾಸಿನ ಸಿನಿಮಾ ನೋಡುವುದು ಪ್ರೇಕ್ಷಕರ ಪಾಲಿಗೆ ಅದ್ಭುತವಾದ ಔತಣ ಇದ್ದಂತೆ. ಪ್ರೇಕ್ಷಕರು ತಮ್ಮ ಪಕ್ಕದಲ್ಲಿ ಕೂತವರನ್ನು ಮರೆಯುವಷ್ಟರ ಮಟ್ಟಿಗೆ ಸಿನಿಮಾ ಅವರನ್ನು ಆವರಿಸಿಕೊಳ್ಳುತ್ತದೆ. ಚಿತ್ರಮಂದಿರದಿಂದ ಹೊರಬಂದ ಮೇಲೂ ಒಂದಷ್ಟು ಸಮಯ ವಿಜಲ್‌ನ ಗುಂಗು ಆವರಿಸಿಕೊಳ್ಳುತ್ತದೆ'- ಹೀಗೆ ಸಿನಿಮಾದ ವಿಶೇಷಗಳನ್ನು ಪ್ರಶಾಂತ್ ಪಟ್ಟಿ ಮಾಡುತ್ತಾರೆ.

ತಮಿಳಿನ `ಪೀಜಾ'ದ ಕನ್ನಡ ಅವತರಣಿಕೆ `ವಿಜಲ್'. ಚಲನಚಿತ್ರ ನಿರ್ದೇಶಕನ ಮಾಧ್ಯಮ ಎನ್ನುವ ನಂಬಿಕೆಯ ಪ್ರಶಾಂತ್ ರೀಮೇಕ್ ಮಾಡಿದ್ದಾದರೂ ಹೇಗೆ? ಏಕೆ?- ಈ ಪ್ರಶ್ನೆಗಳಿಗೆ ಉತ್ತರವಾಗಿ ಪ್ರಶಾಂತ್ ಒಂದು ನೆನಪನ್ನು ಮುಂದಿಡುತ್ತಾರೆ.

“ಲವ್ ಗುರು ಸಿನಿಮಾ ತೆರೆಕಂಡ ಸಂದರ್ಭ. ಎಲ್ಲೆಡೆ ಒಳ್ಳೆಯ ಮಾತುಗಳ ಬೆಚ್ಚನೆ ಪ್ರತಿಕ್ರಿಯೆ. ಒಂದು ಪ್ರಖ್ಯಾತ ಸಿನಿಮಾ ಕುಟುಂಬದಿಂದ ಕರೆಬಂತು. ಮನೆಗೆ ಹೋದೆ. ದೊಡ್ಡ ಮೊತ್ತದ ಸಂಭಾವನೆಯ ಆಫರ್ ಮುಂದಿಟ್ಟರು. ಅವರು ಮಾಡಿಕೊಡಲು ಕೇಳಿದ್ದು ರೀಮೇಕ್ ಸಿನಿಮಾ. `ನನ್ನಿಂದ ಸಾಧ್ಯವಿಲ್ಲ' ಎಂದು ಎದ್ದುಬಂದೆ. ತಾರಾ ವರ್ಚಸ್ಸಿನ ನಟನ ಸಿನಿಮಾ ಅವಕಾಶ ಒಲ್ಲೆ ಎಂದದ್ದಕ್ಕೆ ಗೆಳೆಯರು ಬೈದರು.

ಆದರೆ, ರೀಮೇಕ್ ಸಿನಿಮಾಗಳನ್ನು ಮಾಡುವುದಿಲ್ಲ ಎನ್ನುವ ನನ್ನ ನಿಲುವು ಸ್ಪಷ್ಟವಾಗಿತ್ತು. ಹಾಗೆ ನೋಡಿದರೆ ಮೊದಲಿನಿಂದಲೂ ರೀಮೇಕ್ ಸಿನಿಮಾಗಳ ಬಗ್ಗೆ ನನ್ನ ಒಲವು ಅಷ್ಟಕ್ಕಷ್ಟೇ. ತಮಿಳಿನ `ಪೀಜಾ' ನೋಡಿದ್ದು ಲ್ಯಾಪ್‌ಟಾಪ್‌ನಲ್ಲಿ. ಸಿನಿಮಾ ನೋಡುತ್ತಾ ಹೋದಂತೆ ಅದರಲ್ಲಿ ಮುಳುಗಿಹೋದೆ. ಅದು ನನ್ನನ್ನು ಹುಚ್ಚನನ್ನಾಗಿಸಿದ ಸಿನಿಮಾ. ಆ ಹುಚ್ಚಿನ ಕಾರಣದಿಂದಲೇ, ನಾನೇ ವಿಧಿಸಿಕೊಂಡ ಲಕ್ಷ್ಮಣರೇಖೆಗಳನ್ನು ಮೀರಿ ರೀಮೇಕ್ ಮಾಡಿದೆ”.

ಈಗ `ವಿಜಲ್' ಗುಂಗಿನಲ್ಲಿರುವ ಪ್ರಶಾಂತ್ ಎರಡು ವಿಷಯಗಳನ್ನು ಸ್ಪಷ್ಟಪಡಿಸುತ್ತಾರೆ: `ವಿಜಲ್' ಕನ್ನಡ ಚಿತ್ರೋದ್ಯಮಕ್ಕೊಂದು ಒಳ್ಳೆಯ ಕೊಡುಗೆ ಎನ್ನುವುದು ಮೊದಲನೆಯ ವಿಷಯ. ಇದು ನನ್ನ ಮೊದಲ ಮತ್ತು ಕೊನೆಯ ರೀಮೇಕ್ ಎನ್ನುವುದು ಎರಡನೆಯ ಸಂಗತಿ.

ಚಿರಂಜೀವಿ ಸರ್ಜಾ ಮತ್ತು ಪ್ರಣೀತಾ `ವಿಜಲ್'ನ ತಾರಾಜೋಡಿ. ಈ ಜೋಡಿ ನಿರ್ದೇಶಕರಿಗೆ ಎಷ್ಟರಮಟ್ಟಿಗೆ ಇಷ್ಟವಾಗಿದೆ ಎಂದರೆ, `ಕನ್ನಡ ಸಿನಿಮಾದ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಇದೂ ಒಂದು' ಎಂದು ಬಣ್ಣಿಸುವ ಅವರು, ಇದೇ ಜೋಡಿಯ ಇನ್ನೊಂದು ಸಿನಿಮಾ ನಿರ್ದೇಶಿಸಲು ಉದ್ದೇಶಿದ್ದಾರೆ. `ವಿಜಲ್' ಮೂಲಕ ಚಿರಂಜೀವಿಯ ಆಕ್ಷನ್ ಚಿತ್ರಗಳ ಇಮೇಜ್ ಬದಲಾಗಲಿದೆ ಎಂದು ನಂಬಿರುವ ಅವರು, ಈ ಸಿನಿಮಾದ ಮೂಲಕ ತಮ್ಮ ಇಮೇಜ್ ಕೂಡ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ.

`ನಾನು ಒಳ್ಳೆಯ ಕಮರ್ಷಿಯಲ್ ಸಿನಿಮಾ ಮಾಡಬಲ್ಲೆ' ಎನ್ನುವುದು `ವಿಜಲ್' ಮೂಲಕ ಸಾಬೀತಾಗಲಿದೆ ಎನ್ನುವ ಪ್ರಶಾಂತ್ ರಾಜ್ ಮಾತುಗಳಲ್ಲಿ ಆತ್ಮವಿಶ್ವಾಸವೂ ಹೊಸತನಕ್ಕೆ ಹಂಬಲಿಸುವ ಕನಸುಗಾರಿಕೆಯೂ ಇರುವಂತೆ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.