ADVERTISEMENT

ಸಂಜೆಗತ್ತಲಲ್ಲಿ ಕಳ್ಳ ಮಳ್ಳ ಸುಳ್ಳರ ಸಂತೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2011, 19:30 IST
Last Updated 25 ಆಗಸ್ಟ್ 2011, 19:30 IST
ಸಂಜೆಗತ್ತಲಲ್ಲಿ ಕಳ್ಳ ಮಳ್ಳ ಸುಳ್ಳರ ಸಂತೆ
ಸಂಜೆಗತ್ತಲಲ್ಲಿ ಕಳ್ಳ ಮಳ್ಳ ಸುಳ್ಳರ ಸಂತೆ   

ಸುಂದರ ಸಂಜೆಯ ರಂಗು ಅಲ್ಲಿ ಕಳೆ ಕಟ್ಟಿತ್ತು. ಝಗಮಗಿಸುವ ಬೆಳಕಿಗೆ ಮತ್ತಷ್ಟು ಮೆರಗು ನೀಡಿದ್ದು ತಾರೆಯರ ದಂಡು. ಆಫ್ರಿಕಾದ `ಜಂಬೆ~ ವಾದ್ಯದ ಸಂಗೀತ ನೆರೆದವರನ್ನು ಮೈಮರೆಸಿತ್ತು. ಅದರ ಜೊತೆಜೊತೆಗೆ ಹಾಡು ಕುಣಿತ, ಹಾಸ್ಯದ ಹೊನಲು.

ಅಂದಹಾಗೆ ಅಲ್ಲಿ ನಡೆದದ್ದು `ಕಳ್ಳ ಮಳ್ಳ ಸುಳ್ಳ~ ಚಿತ್ರದ ಹಾಡುಗಳ ಧ್ವನಿಮುದ್ರಿಕೆಯ ಬಿಡುಗಡೆ ಕಾರ್ಯಕ್ರಮ. ರವಿಚಂದ್ರನ್, ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ, ಯಜ್ಞಾ ಶೆಟ್ಟಿ, ರಿಷಿಕಾ ಸಿಂಗ್, ರಾಗಿಣಿ ದ್ವಿವೇದಿ, ಮೋನಿಕಾ ಚಿತ್ರತಂಡದವರಾದರೆ ಅವರ ಜೊತೆ ಅಂಬರೀಷ್, ಗಣೇಶ್, ಎಸ್.ನಾರಾಯಣ್, ಜಯಮಾಲಾ, ರಾಜೇಂದ್ರಸಿಂಗ್ ಬಾಬು, ಆದಿತ್ಯ ಹೀಗೆ ತಾರಾ ಸಮೂಹವೇ ಅಲ್ಲಿತ್ತು. ಆರಂಭದಲ್ಲಿ ಬೀಟ್ಸ್ ಗುರು ತಂಡದ `ಜಂಬೆ~ ವಾದ್ಯದ ಸಂಗೀತಕ್ಕೆ ಎಲ್ಲರೂ ತಾಳಹಾಕಿದರು.

ಚಿತ್ರದ ನಾಯಕತ್ರಯರು ಸಹ ವೇದಿಕೆ ಹತ್ತಿ `ಜಂಬೆ~ ನುಡಿಸಿದರು. ಸಮಾರಂಭದುದ್ದಕ್ಕೂ ಸಂಗೀತ, ನೃತ್ಯ. ಮಧ್ಯದಲ್ಲಿ ಸ್ವಲ್ಪ ಮಾತು. ರಮೇಶ್ ಬಾಬು ಅವರ ಮಿಮಿಕ್ರಿ ನಗುವಿನ ಹೊಳೆ ಹರಿಸಿತು.

ಧ್ವನಿಸುರುಳಿ ಬಿಡುಗಡೆ ಮಾಡಿದ ಅಂಬರೀಷ್ `ಹುಟ್ಟಿನಿಂದ ಇದುವರೆಗೂ ನಾನು ಕಳ್ಳ ಮಳ್ಳ ಸುಳ್ಳ ಮೂರೂ ಆಗಿದ್ದೇನೆ~ ಎಂದು ನಗೆಸಂಜೆಗೆ ಚಾಲನೆ ನೀಡಿದರು. ನಾಯಕಿಯರ ಹಿಂಡನ್ನು ನೋಡುತ್ತಿದ್ದರೆ ಇಡೀ ಚಿತ್ರ ಗ್ಲಾಮರಸ್ ಆಗಿದೆ ಎಂಬುದು ಗೊತ್ತಾಗುತ್ತದೆ ಎಂದ ಅಂಬರೀಷ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಟ ರವಿಚಂದ್ರನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. `ಕಳ್ಳ ಮಳ್ಳ ಸುಳ್ಳ~ ಈ ಮೂರೂ ಪದಗಳು ನಿರ್ಮಾಪಕ ಕೆ.ಮಂಜು ಅವರಿಗೆ ಸೂಕ್ತವಾಗಿ ಒಪ್ಪುತ್ತದೆ. ಅವರ ಪಾತ್ರವನ್ನೇ ನಾವು ಮೂವರು ಸೇರಿ ಮಾಡಿದ್ದೇವೆ ಎಂದು ನಗುವಿನ ಅಲೆ ಎಬ್ಬಿಸಿದರು. ಮಂಜು ಚಿತ್ರಕ್ಕೆ ಹೆಸರಿಟ್ಟ ಬಗೆಯೇ ಸ್ವಾರಸ್ಯಕರವಾಗಿದೆ.
 
ಮೊದಲು `ಹ್ಯಾಪಿ ಹಸ್ಬೆಂಡ್~ ಎಂದಿಟ್ಟರು. ಆದರೆ ಯಾವುದೋ ಪಾರ್ಟಿಯಲ್ಲಿ ಇದ್ದಕ್ಕಿದ್ದಂತೆ ಹೆಸರು ಬದಲಿಸುವ ಮನಸಾಯಿತು. ಬಳಿಕ `ಹ್ಯಾಪಿ~ ಎಂದು ಬದಲಿಸಿದರು. ಇನ್‌ಕಮ್ ಟ್ಯಾಕ್ಸ್ ರೈಡ್ ಆದ ಬಳಿಕ ಇದ್ದ `ಹ್ಯಾಪಿ~ಯೂ ಹೋಗಿದ್ದರಿಂದ ತಮ್ಮ ಅನ್ವರ್ಥ ನಾಮವನ್ನೇ ಶೀರ್ಷಿಕೆಯನ್ನಾಗಿಟ್ಟರು ಎಂದು ರವಿಚಂದ್ರನ್ ಕೀಟಲೆ ಮಾಡಿದರು.

ರಮೇಶ್ ಮತ್ತು ವಿಜಯ್ ರಾಘವೇಂದ್ರ ಇಬ್ಬರಿಗೂ ಪಾತ್ರ ಖುಷಿ ನೀಡಿದೆಯಂತೆ. ರವಿಚಂದ್ರನ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ ಎಂದು ಇಬ್ಬರೂ ಹೇಳಿಕೊಂಡರು.

ಬಳಿಕ ಕೆ.ಮಂಜು ಶೀರ್ಷಿಕೆಗಳು ಬದಲಾದ ಕಥೆ ಹೇಳಿದರು. ನಿರ್ದೇಶಕ ಉದಯ ಪ್ರಕಾಶ್ ನೂರಾರು ಶೀರ್ಷಿಕೆಗಳನ್ನು ತೋರಿಸಿದರಂತೆ. ಅದರಲ್ಲಿ ಆಯ್ಕೆಯಾದ ಎರಡು ಶೀರ್ಷಿಕೆಗಳು ಬೇರೆ ಬೇರೆ ಕಾರಣಕ್ಕೆ ಬೇಡ ಅನಿಸಿದವು. ಕೊನೆಗೆ ಎಸ್.ನಾರಾಯಣ್ ಅವರ ಮುಂದೆ ಸಮಸ್ಯೆ ಹೇಳಿಕೊಂಡಾಗ ಥಟ್ಟನೆ `ಕಳ್ಳ ಮಳ್ಳ ಸುಳ್ಳ~ ಹೆಸರು ಹೇಳಿದರಂತೆ. ಕೆ.ಮಂಜು ಅಂದರೆ `ಕಳ್ ಮಂಜು~ ಅಲ್ಲ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದರು.

ಉದಯಪ್ರಕಾಶ್ ಇದು ಮೂರನೇ ಸಲ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ. ಇದೊಂದು ಕೌಟುಂಬಿಕ ಹಾಸ್ಯ ಚಿತ್ರ. ಜೊತೆಯಲ್ಲಿ ಸಂಗೀತಕ್ಕೂ ಆದ್ಯತೆ ನೀಡಿದ್ದೇವೆ ಎಂದು ಅವರು ವಿವರಿಸಿದರು.
 
ಮಹಾಭಾರತದಲ್ಲಿ ಕೃಷ್ಣ ಪರಮಾತ್ಮನೇ ಸಂದರ್ಭಕ್ಕೆ ಅನುಗುಣವಾಗಿ ಸುಳ್ಳುಗಳನ್ನು ಹೇಳುತ್ತಾನೆ, ಅದೇ ರೀತಿ ಈ ಚಿತ್ರ ಎಂದು ಹೋಲಿಕೆ ನೀಡಿದರು. ಬಾಲಿವುಡ್‌ನಲ್ಲಿ ಮಲ್ಲಿಕಾ ಶೆರಾವತ್ `ಜಲೇಬಿ ಬಾಯ್~ ಹಾಡಿಗೆ ನರ್ತಿಸಿದಂತೆ ರಾಗಿಣಿ ದ್ವಿವೇದಿ `ತುಪ್ಪ ಬೇಕೆ ತುಪ್ಪ~ ಎಂಬ ಹಾಡಿಗೆ ಗ್ಲಾಮರಸ್ ಆಗಿ ಕುಣಿದಿದ್ದಾರಂತೆ.

ಚಿತ್ರದ ಐದೂ ಹಾಡುಗಳನ್ನು ಕವಿರಾಜ್ ಬರೆದಿದ್ದಾರೆ. ಮಲಯಾಳಂನ ಅಲೆಕ್ಸ್‌ಪಾಲ್ ಸಂಗೀತ ಸಂಯೋಜನೆ  ಮಾಡಿದ್ದಾರೆ. ಗೌರಿಗಣೇಶ ಹಬ್ಬಕ್ಕೆ `ಕಳ್ಳ ಮಳ್ಳ ಸುಳ್ಳ~ ತೆರೆಯ ಮೇಲೆ ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.