ADVERTISEMENT

ಸಂಸ್ಕೃತಿಗಳ ಸಂಘರ್ಷದ ಸವಾರಿ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಅಮೆರಿಕದಲ್ಲಿ ಹುಟ್ಟಿಬೆಳೆದ ಯುವಕ. ದೊಡ್ಡ ಸಾಫ್ಟ್‌ವೇರ್ ಕಂಪೆನಿಯ ಅಧಿಕಾರಿ. ಅಪ್ಪ ಅಮ್ಮನ ಒತ್ತಾಯದ ಮೇರೆಗೆ ಮದುವೆ ಮಾಡಿಕೊಳ್ಳಲೆಂದು ಆತ ಭಾರತಕ್ಕೆ ಬರುತ್ತಾನೆ. ಅಲ್ಲಿ ಹುಡುಗಿಯೊಬ್ಬಳು ಎದುರಾಗುತ್ತಾಳೆ. ನಾಯಕ-ನಾಯಕಿಯ ಮುಖಾಮುಖಿ ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಅವರಿಬ್ಬರ ಜಗಳದ ಕೊನೆಯಲ್ಲಿ ಭಾರತದಲ್ಲಿರುವ ಅದ್ಭುತ ಎಂಜಿನಿಯರಿಂಗ್ ಸಾಧನೆಗಳನ್ನು ನೋಡಿಬರುವ ಸವಾಲನ್ನು ನಾಯಕ ಸ್ವೀಕರಿಸುತ್ತಾನೆ. ಅಲ್ಲಿಂದ ನಾಯಕನ `ಸವಾರಿ~ ಆರಂಭವಾಗುತ್ತದೆ.

ಹೀಗೆ, ಸಿನಿಮಾ ಕತೆಯ ಎಳೆಯನ್ನು ಬಿಚ್ಚಿಟ್ಟ ಚಿತ್ರತಂಡ ನಾಯಕನ ಪಯಣ ಯಾವ ಯಾವ ಸ್ಥಳಗಳಲ್ಲಿ ಸಾಗುತ್ತದೆ ಎಂಬುದನ್ನು ಮಾತ್ರ ನಿಗೂಢವಾಗಿ ಕಾಪಾಡಿಕೊಂಡಿತು.

ಚಿತ್ರಕ್ಕೆ `ಸವಾರಿ ಟು 1000 ಎಡಿ~ ಎಂದು ಹೆಸರಿಡಲಾಗಿದೆ. ಚಿತ್ರದ ನಾಯಕ ರಘು ಮುಖರ್ಜಿ. ಅವರು ಈ ಮೊದಲು ನಟಿಸಿದ್ದ `ಸವಾರಿ~ ಚಿತ್ರಕ್ಕೂ ಇದಕ್ಕೂ ಸಂಬಂಧ ಇದೆಯೇ ಎಂಬ ಪ್ರಶ್ನೆ ಎದುರಾಯಿತು. ಅದನ್ನು ಸರಾಸಗಟಾಗಿ ನಿರಾಕರಿಸಿದ ರಘು, `ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಕತೆಗೆ ಅಗತ್ಯ ಇದ್ದ ಕಾರಣ ಇಂಥ ಹೆಸರಿಡಬೇಕಾಯಿತು~ ಎಂದು ಸ್ಪಷ್ಟಪಡಿಸಿದರು.

`ನಿರ್ದೇಶಕರು ಮತ್ತು ನಾನು ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೆವು. ಚಿತ್ರದಲ್ಲಿ ನಾಯಕ-ನಾಯಕಿಯ ಇಗೋ ಕ್ಲ್ಯಾಶ್ ಪ್ರಮುಖ ಪಾತ್ರ ವಹಿಸುತ್ತದೆ. ನನ್ನದು ತುಂಬಾ ಶಕ್ತಿಶಾಲಿ ಪಾತ್ರ. ನಿರ್ದೇಶಕರ ಚಿತ್ರಕತೆಯಲ್ಲಿ ಕುತೂಹಲಕಾರಿ ಅಂಶಗಳಿವೆ~ ಎಂದು ರಘು ಮಾತು ಮುಗಿಸಿದರು.

ಈ ಮೊದಲು ಸಾಕಷ್ಟು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದ ಅನುಭವ ಇರುವ ನಿರ್ದೇಶಕ ತಿಮ್ಮಂಪಲ್ಲಿ ಚಂದ್ರ ಅವರು ನಟ ಕಿಶೋರ್ ಅವರ ಸಹಪಾಠಿ. ಅವರ ಒತ್ತಾಸೆಯಿಂದಲೇ ಇಂದು ಈ ಹಂತಕ್ಕೆ ಬಂದು ಮುಟ್ಟಿರುವುದಾಗಿ ಹೇಳಿಕೊಂಡ ಚಂದ್ರ, `ಒಂದು ಉತ್ತಮ ಗುಣಮಟ್ಟದ ಸಿನಿಮಾ ಮಾಡಬೇಕೆಂದುಕೊಂಡು ಕತೆಯನ್ನು ತಿದ್ದಿ ತೀಡಿದ್ದೇನೆ. ರಘು ಪರಿಚಯವಿದ್ದ ಕಾರಣ ಅವರ ಕಾಲ್‌ಶೀಟ್ ದೊರಕಿತು. ನಿರ್ಮಾಪಕ ಚಂದ್ರಶೇಖರ್ ನಂಬಿಕೆಗೆ ನಾನು ಚಿರಋಣಿ~ ಎಂದರು.

ಹಾಸನದ ಹುಡುಗಿ ಮಿಲನ ಚಿತ್ರದ ನಾಯಕಿ. `ಭಾರತೀಯ ಸಂಪ್ರದಾಯ ಉಳಿಸುವ ಪಾತ್ರ ನನ್ನದು. ಚಿತ್ರತಂಡದಿಂದ ಉತ್ತಮ ಮಾರ್ಗದರ್ಶನ ಸಿಕ್ಕಿದೆ. ಪಾತ್ರವನ್ನು ನಿರ್ವಹಿಸುವ ಆತ್ಮವಿಶ್ವಾಸ ಇದೆ~ ಎಂದ ಈ ಚೆಲುವೆ ಎಂಜಿನಿಯರಿಂಗ್ ಪದವೀಧರೆ.
ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಹೊತ್ತು ಬಂದು, ಸಣ್ಣಪುಟ್ಟ ಪಾತ್ರಗಳಲ್ಲೂ ನಟಿಸಿ ಇದೀಗ ನಿರ್ಮಾಪಕರಾಗಿದ್ದಾರೆ ಚಂದ್ರಶೇಖರ್. ಸಮಾಜಸೇವೆ ಮಾಡುವ ಮನಸ್ಥಿತಿಯ ತಮಗೆ ಇಂಥ ಉತ್ತಮ ಕತೆ ಸಿಕ್ಕಿ ಸಿನಿಮಾ ಮಾಡಬೇಕೆಂಬ ಹಂಬಲ ಹೆಚ್ಚಿಸಿತು ಎಂದರು ಅವರು.

ಸಂಕಲಕಾರ ಸುರೇಶ್ ಅರಸ್ ಅವರಿಗೆ ಚಿತ್ರದ ಕತೆ ಮತ್ತು ತಂಡ ಇಷ್ಟವಾಗಿದ್ದು ಸಿನಿಮಾ ಒಪ್ಪಿಕೊಳ್ಳಲು ಕಾರಣವಾಗಿದೆ. 

ಸಂಗೀತ ನಿರ್ದೇಶಕ ಸಂಜೀವ್ ಅವರು ಈ ಮೊದಲು `ಆಪ್ತ~ ಚಿತ್ರ ನಿರ್ದೇಶಿಸಿದ್ದವರು. ಈ ಚಿತ್ರದಲ್ಲಿ ಸಂಗೀತ ನಿರ್ದೇಶಕರಾಗಿ ಪರಿಚಯವಾಗುತ್ತಿರುವ ಅವರಿಗೂ ಕತೆ ಇಷ್ಟವಾಗಿದೆ. ಅವರು `ಮಾಸ್ ಮತ್ತು ಕ್ಲಾಸ್‌ಗೆ ತಕ್ಕ ಹಾಡುಗಳಿವೆ~ ಎಂದರು. 
ನಿರ್ದೇಶಕರ ಗೆಳೆಯ ಕಿಶೋರ್ ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.