ADVERTISEMENT

ಸುಖಧರೆ ಸಂಕ್ರಮಣ

ಅಮಿತ್ ಎಂ.ಎಸ್.
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಹ್ಯಾಪಿ ಬರ್ತ್‌ ಡೇ ಸಚಿನ್
ಹ್ಯಾಪಿ ಬರ್ತ್‌ ಡೇ ಸಚಿನ್   

ಗ್ರಾಮೀಣ ಸೊಗಡು ಹಾಗೂ ಜಾನಪದ ಸ್ಪರ್ಶದ ಸಿನಿಮಾ ಎಂದು ತಮ್ಮ ನಿರ್ದೇಶನದ ‘ಹ್ಯಾಪಿ ಬರ್ತ್‌ ಡೇ’ಯನ್ನು ಮಹೇಶ್‌ ಸುಖಧರೆ ಬಣ್ಣಿಸಿಕೊಳ್ಳುತ್ತಾರೆ. ಮಂಡ್ಯ ಸೀಮೆಯ ಭಾಷಿಕ – ಸಾಮಾಜಿಕ ಸೊಗಡನ್ನು ಚಿತ್ರದಲ್ಲಿ ಕಾಣಬಹುದಂತೆ.

‘ಕಾಲ ಬದಲಾದಂತೆ ಪ್ರೀತಿಸುವ ಧಾಟಿ – ಶೈಲಿ ಬದಲಾದರೂ ಬದುಕಿನ ಮತ್ತು ಸಂಬಂಧದ ಮೌಲ್ಯಗಳು ಬೆಲೆ ಕಳೆದುಕೊಳ್ಳುವುದಿಲ್ಲ’ ಎನ್ನುವುದು ನಿರ್ದೇಶಕ ಮಹೇಶ್‌ ಸುಖಧರೆ ಅವರ ಅಭಿಪ್ರಾಯ. ತಮ್ಮ ನಿರ್ದೇಶನದ ‘ಹ್ಯಾಪಿ ಬರ್ತ್‌ ಡೇ’ ಚಿತ್ರವೂ ಇಂದಿನ ಕಾಲದ ಪ್ರೀತಿ ಮತ್ತು ಪೀಳಿಗೆಗಳು ಉರುಳಿದರೂ ಬದಲಾಗದ ಮೌಲ್ಯಗಳ ಜೀವಂತಿಕೆಯನ್ನು ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಕಟ್ಟಿಕೊಡುತ್ತದೆ ಎನ್ನುತ್ತಾರೆ ಅವರು.

ಶಾಸಕ ಚಲುವರಾಯಸ್ವಾಮಿ ಅವರ ಮಗ ಸಚಿನ್‌, ಮೊದಲ ಬಾರಿಗೆ ನಾಯಕರಾಗಿ ‘ಹ್ಯಾಪಿ ಬರ್ತ್‌ ಡೇ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಮಹೇಶ್‌ ಸುಖಧರೆ ಈ ಚಿತ್ರದ ನೆಪದಲ್ಲಿ 14–15 ವರ್ಷಗಳ ಹಿಂದಿನ ತಮ್ಮ ಸಿನಿಮಾ ಪಯಣದ ಕನವರಿಕೆಗೆ ಜಾರುತ್ತಾರೆ. ‘ಸಂಭ್ರಮ’ ಮತ್ತು ‘ಸೈನಿಕ’ ಚಿತ್ರಗಳಲ್ಲಿ ಈ ಗ್ರಾಮೀಣ ಸೊಗಡಿತ್ತು. ಮಾಧುರ್ಯಪೂರ್ಣ ಹಾಡುಗಳಿದ್ದವು. ಅದೇ ಮಾದರಿಯ ಸಿನಿಮಾ ಇದು. ಮಂಡ್ಯದ ಜನರು ದ್ವೇಷಿಸುವುದೂ ತೀವ್ರವಾಗಿ, ಪ್ರೀತಿಸುವುದೂ ಅಷ್ಟೇ ತೀವ್ರವಾಗಿ. ಆ ತೀವ್ರತೆ, ಒರಟುತನ, ಭಾಷೆ, ಪರಿಸರ, ಅಲ್ಲಿನ ಜಾನಪದ ಇವೆಲ್ಲವೂ ಚಿತ್ರದಲ್ಲಿ ಮಿಳಿತಗೊಂಡಿವೆ.

ನಾನು ಮೂಲತಃ ಗ್ರಾಮೀಣ ಹಿನ್ನೆಲೆಯವನಾಗಿರುವುದರಿಂದ ಅದು ಮತ್ತೆ ಮತ್ತೆ ಕಾಡುತ್ತದೆ. ಹೀಗಾಗಿ ಇಲ್ಲಿಯೂ ಜಾನಪದವು ಆಧುನಿಕ ಕಥೆಯೊಂದಿಗೆ ಸೇರಿಕೊಂಡಿದೆ ಎಂದು  ವಿವರಿಸುತ್ತಾರೆ. ಮಂಡ್ಯದಲ್ಲಿ ಹುಟ್ಟಿ ಬೆಳೆವ ಯುವಕನ ಒರಟುತನ, ಭಾಷೆ, ಪ್ರೀತಿಸುವ ವೈಖರಿ,  ಆತ ಎದುರಿಸುವ ತೊಂದರೆಗಳು ಚಿತ್ರದ ಮತ್ತೊಂದು ಮಗ್ಗಲು. ಗ್ರಾಮೀಣ ಪರಿಸರದ ಹಿನ್ನೆಲೆಯೇ ಪ್ರಧಾನವಾಗಿರುವುದರಿಂದ ಮಾಮೂಲಿ ಸಿನಿಮಾ ಶೈಲಿಗಿಂತ ವಿಭಿನ್ನ. ಹಾಗೆಯೇ ಸಂಗೀತವೂ ಕಾಡುತ್ತದೆ ಎಂದು ಹೇಳುತ್ತಾರೆ ಸುಖಧರೆ.

ಮನರಂಜನೆ ಮತ್ತು ಸೊಗಡು
ಕಥೆಯ ಜೊತೆಗೆ ಫೈಟ್‌, ಹಾಡುಗಳಿವೆ. ಹೊಡೆದಾಟ ಅಥವಾ ಹಾಡಿಗೋಸ್ಕರ ಕಥೆ ಮಾಡಿಲ್ಲ. ಇಂದಿನ ಪೀಳಿಗೆಗೆ ಯಾವ ಕಥೆ ಬೇಕು ಎಂಬುದನ್ನು ಮನದಲ್ಲಿಟ್ಟುಕೊಂಡು ಮಾಡಿದ್ದೇನೆ. ನಾನು ಕಮರ್ಷಿಯಲ್ ಪ್ರೇಕ್ಷಕ. ಮನರಂಜನೆಯೇ ನನ್ನ ಮೂಲ ಉದ್ದೇಶ. ಜಾನಪದದ ಅಂಶಗಳಿದ್ದರೂ ಅದು ಈ ಜಾಯಮಾನಕ್ಕೆ ಹೊಂದಿಕೊಳ್ಳುತ್ತದೆ. ಇದು ಇಂದಿನ ಪೀಳಿಗೆಯ ಯುವಜನತೆ ಇಡೀ ಕುಟುಂಬದೊಂದಿಗೆ ಕುಳಿತು ನೋಡುವಂತಹ ಚಿತ್ರ ಎಂದು ಆಧುನಿಕತೆ ಮತ್ತು ಜಾನಪದದ ಸಂಯೋಜನೆಯನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ.

ನಾಗಮಂಗಲ ಕೃಷ್ಣಮೂರ್ತಿ ಅವರು ಬರಹಗಾರರಾಗಿ ಸಿಕ್ಕಿರುವುದು ನನಗೆ ಲಾಭವಾಗಿದೆ. ಅವರು ಮೂಲತಃ ಕಥೆಗಾರರು, ಪ್ರಾದೇಶಿಕತೆ ಸೊಗಡು ಗೊತ್ತಿದೆ. ಸಂಗೀತ ನಿರ್ದೇಶಕ ಹರಿಕೃಷ್ಣ, ಸಾಹಿತಿ ನಾಗೇಂದ್ರ ಪ್ರಸಾದ್‌, ರವಿವರ್ಮ ಎಲ್ಲರೂ ಗ್ರಾಮೀಣ ಹಿನ್ನೆಲೆಯವರು. ಒಳ್ಳೆಯ ಸಿನಿಮಾ ನೀಡಬೇಕೆಂಬ ಹಂಬಲದೊಂದಿಗೆ ಇಡೀ ತಂಡ ಹೊಸ ಹುಮ್ಮಸ್ಸಿನೊಂದಿಗೆ ಕೆಲಸ ಮಾಡುತ್ತಿದೆ.

‘ಹ್ಯಾಪಿ ಬರ್ತ್‌ ಡೇ’ಯಲ್ಲಿ ಸಂಭ್ರಮ ಕಾಣಿಸುತ್ತದೆ. ಅನ್ಯ ಭಾಷೆಯ ಪದಗಳಾದರೂ ಅವು ನಮ್ಮ ಭಾಷೆಯಲ್ಲಿ ಸೇರಿಕೊಂಡಾಗ ಆಡುಭಾಷೆಯ ಪದಗಳೇ ಆಗುತ್ತವೆ. ಆಡು ಭಾಷೆಯಲ್ಲಿ ಹಲವು ಪದಗಳಿಗೆ ಹಲವಾರು ಭಾವಾರ್ಥಗಳಿವೆ. ಹಳ್ಳಿಗಳಲ್ಲಿ ‘ಹ್ಯಾಪಿ ಬರ್ಥಡೇ, ಐತೆ ಕಣೋ ನಿಂಗೆ’ ಎನ್ನುತ್ತಾರೆ. ಅದರ ಅರ್ಥ ಬೇರೆಯದೇ ಆಗಿದೆ. ಇಲ್ಲಿ ಸಂಭ್ರಮ ಅರ್ಥಪೂರ್ಣವೂ ಆಗಿರುತ್ತದೆ.

ಬದ್ಧತೆಯ ನಟ
ಸಚಿನ್‌ ಅವರಲ್ಲಿ ರಾಜಕಾರಣಿಯ ಮಗ ಎಂಬ ಅಹಂ ಇಲ್ಲ. ಹೊಸ ನಟನೊಬ್ಬ ತನ್ನನ್ನು ಕಲಾವಿದನಾಗಿ ರೂಪಿಸಿಕೊಳ್ಳಲು ಅಗತ್ಯವಾದ ಎಲ್ಲಾ ಶ್ರಮಗಳಿಗೂ ಅವರು ಒಡ್ಡಿಕೊಂಡಿದ್ದಾರೆ. ‘ಸಿನಿಮಾಕ್ಕೆ ಬಂದ ಬಳಿಕ ಏನು ಕಲಿತೆವು ಎಂಬುದಲ್ಲ. ಪ್ರತಿ ಸಿನಿಮಾದಿಂದಲೂ ಒಂದೊಂದು ಪಾಠ  ಕಲಿಯುತ್ತೇನೆ’ ಎಂದು ರಾಜ್‌ಕುಮಾರ್‌ ಅವರು ಹೇಳುತ್ತಿದ್ದರು. ಆಗಿನ ಕಾಲದ ನಿರ್ದೇಶಕರು ದೊಡ್ಡ ನಟರನ್ನೂ ಕಥೆಗೆ ಪೂರಕವಾಗಿ ಮೌಲ್ಡ್‌ ಮಾಡುತ್ತಿದ್ದರು. ಒಳ್ಳೆಯ ಕಥೆ ಮಾಡಲು ಹಲವಾರು ಅಡಚಣೆಗಳಿರುತ್ತವೆ. ಹೀರೊಯಿಸಂ ಇಲ್ಲ ಎಂದರೆ ಪ್ರೇಕ್ಷಕರು ಸಿನಿಮ ಒಪ್ಪುವುದಿಲ್ಲ. ಮೂರು ವರ್ಷದ ಹಿಂದೆ ಮನಸಿನಲ್ಲಿ ಮೂಡಿದ ಎಳೆಯಿದು.

ಈ ವಸ್ತು ಮತ್ತು ಪ್ರಯೋಗಕ್ಕೆ ಹೊಸ ನಟರೇ ಬೇಕು. ರಂಗಭೂಮಿ ಹಿನ್ನೆಲೆಯಿಂದ ಬರುವ ನಟರ ಅಭಿನಯದಲ್ಲಿ ನಾಟಕದ ಶೈಲಿಯೇ ಕಾಣಿಸುತ್ತದೆ. ಈ ಚೌಕಟ್ಟುಗಳಿ ಹೊರತಾದ ನಟ ಬೇಕಿತ್ತು. ಅದಕ್ಕೆ ಸಚಿನ್ ಸೂಕ್ತ ವ್ಯಕ್ತಿ. ಪಾತ್ರಕ್ಕೆ ತಕ್ಕಂತೆ ಅವರನ್ನು ನಿರ್ದೇಶಕನಾಗಿ ಸಿದ್ಧಪಡಿಸಿದ್ದೇನೆ. ಚಿಕ್ಕ ವಯಸ್ಸಿನಲ್ಲಿಯೇ ನಟನಾಗಬೇಕೆಂಬ ಬಯಕೆ ಹೊಂದಿದ್ದವರು. ಅವರಲ್ಲಿ ಅಪಾರ ಬದ್ಧತೆ ಇದೆ ಎಂದು ಹೊಗಳುತ್ತಾರೆ ಸುಖಧರೆ.

***
ಕೈಕೊಟ್ಟ ‘ಅಂಬರೀಶ’
ನಾಯಕನಿಗೆ ಅವನದೇ ಆದ ಅಭಿಮಾನಿಗಳಿರುತ್ತಾರೆ. ಆ ಹಿಂಬಾಲಕರನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಪ್ರೇಕ್ಷಕನನ್ನು ಮರೆಯುತ್ತೇವೆ. ಆ ತಪ್ಪು ‘ಅಂಬರೀಶ’ದಲ್ಲಿ ಆಗಿದೆ. ಇದು ನಿರ್ದೇಶಕನಾಗಿ ನನ್ನ ಅನಿಸಿಕೆ. ನಾನು ಆಯ್ಕೆ ಮಾಡಿದ ವಸ್ತುವೂ ತಪ್ಪಾಗಿರಬಹುದು. ಗಟ್ಟಿಯಾದ ವಸ್ತು ಇದ್ದು, ವೈಭವೀಕರಣ ಇದ್ದರೆ ಅದು ಯಶಸ್ವಿಯಾಗುತ್ತದೆ. ಕಂಟೆಂಟ್‌ ಇಲ್ಲದ ಬರಿಯ ವೈಭವೀಕರಣದಿಂದ ಈ ರೀತಿ ಸಮಸ್ಯೆಗಳಾಗುತ್ತವೆ.

ಪಂಚಿಂಗ್‌ ಸಂಭಾಷಣೆ, ವೈಭವೀಕರಣಗಳು ಕಾಫಿಗೆ ಸಕ್ಕರೆ ಹಾಕಿದಂತೆ. ಹೆಚ್ಚು ಅಥವಾ ಕಡಿಮೆಯಾದರೂ ಹದ ತಪ್ಪುತ್ತದೆ. ‘ಅಂಬರೀಶ’ ಸಿನಿಮಾದ ಬಗ್ಗೆ ತುಂಬಾ ಹೈಪ್ ಸೃಷ್ಟಿಯಾಗಿತ್ತು. ಆದರೆ ಆರಂಭದಲ್ಲಿದ್ದ ವಸ್ತು, ವಿಸ್ತರಣೆಯಾದಂತೆ ಬೇರೆ ರೂಪ ಪಡೆದುಕೊಂಡಿತ್ತು ಎಂದು ‘ಅಂಬರೀಶ’ ಚಿತ್ರದ ಸೋಲಿನ ಹಿನ್ನೆಲೆಯಲ್ಲಿ ಸುಖಧರೆ ಆತ್ಮವಿಮರ್ಶೆಗೆ ಇಳಿಯುತ್ತಾರೆ.

ಹಾಗೆಯೇ ಜನಪ್ರಿಯ ನಾಯಕ ನಟರನ್ನು ತಮಗೆ ಬೇಕಾದಂತೆ ಮೌಲ್ಡ್‌ ಮಾಡುವುದು ಸುಲಭವಲ್ಲ. ಅದರಿಂದ ತೊಂದರೆಯೇ ಹೆಚ್ಚು ಎನ್ನುವುದು ಅವರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT